ನೂತನ ಶಾಸಕರ ಪ್ರಮಾಣ ಸಚಿವ ಸ್ಥಾನದ ಕನವರಿಕೆ

(ನಮ್ಮ ಪ್ರತಿನಿಧಿಯಿಂದ)

ಬೆಂಗಳೂರು, ಏ. ೨೧- ನಂಜನಗೂಡು ಹಾಗೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ವಿಧಾನಸಭೆಗೆ ಆಯ್ಕೆಯಾಗಿರುವ ಕಳಲೆ ಕೇಶವಮೂರ್ತಿ ಹಾಗೂ ಡಾ. ಗೀತಾ ಮಹದೇವಪ್ರಸಾದ್ ಇವರುಗಳು ಇಂದು ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿದರು. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿಂದು ನಡೆದ ಅದ್ದೂರಿ ಸಮಾರಂಭದಲ್ಲಿ ಈ ಇಬ್ಬರು ಶಾಸಕರಾಗಿ ಪ್ರಮಾಣ ತೆಗೆದುಕೊಂಡರು.

ಮೊದಲಿಗೆ ನಂಜನಗೂಡಿನಿಂದ ಆಯ್ಕೆಯಾಗಿರುವ ಕಳಲೆ ಕೇಶವಮೂರ್ತಿ ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿಯ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಆಯ್ಕೆಯಾಗಿರುವ ಡಾ. ಗೀತಾ ಮಹದೇವಪ್ರಸಾದ್ ಮಹದೇಶ್ವರನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ವಿಧಾನಸಭಾಧ್ಯಕ್ಷ ಕೆ.ಬಿ. ಕೋಳಿವಾಡ್, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಸಚಿವರು, ಶಾಸಕರುಗಳು ಉಪಸ್ಥಿತರಿದ್ದರು.

ಸಚಿವ ಸ್ಥಾನ ಕೊಟ್ಟರೆ ನಿಭಾಯಿಸುತ್ತೇನೆ

ಇದೇ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಾ. ಗೀತಾ ಮಹದೇವಪ್ರಸಾದ್ ಅವರು, ಸಚಿವ ಸ್ಥಾನದ ಬಗ್ಗೆ ಮುಖ್ಯಮಂತ್ರಿ ಸೇರಿದಂತೆ ಯಾರೊಂದಿಗೂ ಚರ್ಚಿಸಿಲ್ಲ. ಸಚಿವ ಸ್ಥಾನ ನೀಡಿದರೆ ಅದನ್ನು ನಿಭಾಯಿಸುತ್ತೇನೆ ಎಂದರು. ಉಪಚುನಾವಣೆಯಲ್ಲಿ ಗೆಲುವಿಗೆ ಕಾರಣರಾದ ಮತದಾರರಿಗೆ ಕೃತಜ್ಞತೆ ಸಲ್ಲಿಸಿದ ಅವರು, ತನ್ನ ಪತಿ ಮಹದೇವಪ್ರಸಾದ್ ಅವರು ಕ್ಷೇತ್ರದಲ್ಲಿ ಶೇ. 85ಕ್ಕೂ ಹೆಚ್ಚು ಅಭಿವೃದ್ಧಿ ಕೆಲಸಗಳನ್ನು ಪೂರೈಸಿದ್ದಾರೆ. ಬಾಕಿ ಇರುವ ಕೆಲಸವನ್ನು ಪೂರ್ಣಗೊಳಿಸುತ್ತೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಶೀರ್ವಾದ ಸರ್ಕಾರದ ಸಾಧನೆಗಳು ತಮ್ಮ ಗೆಲುವಿಗೆ ಕಾರಣವಾಯಿತು ಎಂದರು.

ಕಳಲೇ ಹೇಳಿಕೆ

ಉಪಚುನಾವಣೆಯಲ್ಲಿ ಗೆಲುವು ಸಾಧಿಸಿ ಮೊದಲ ಬಾರಿಗೆ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಅಭಿವೃದ್ಧಿಗೆ ಆದ್ಯತೆ ನೀಡುತ್ತೇನೆ. ಉಪಚುನಾವಣೆಯಲ್ಲಿ ಜವಾಬ್ದಾರಿ ಹೊತ್ತು ಗೆಲುವಿಗೆ ಕಾರಣರಾದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಮಹದೇವಪ್ಪ, ಸಂಸದ ದ್ರುವ ನಾರಾಯಣ ಅವರಿಗೆ ಕಳಲೆ ಕೇಶವಮೂರ್ತಿ ಧನ್ಯವಾದ ಹೇಳಿದರು. ತಮಗೆ ಆಶೀರ್ವಾದ ಮಾಡಿರುವ ನಂಜನಗೂಡು ಜನರಿಗೆ ಕೃತಜ್ಞತೆ ಸಲ್ಲಿಸಿದ ಅವರು ಕ್ಷೇತ್ರದ ಜನತೆ ಜೊತೆ ನಿರಂತರ ಸಂಪರ್ಕ ಹೊಂದಿರುತ್ತೇನೆ ಎಂದರು.

ಸಚಿವ ಸ್ಥಾನ ನೀಡುವುದು ಮುಖ್ಯಮಂತ್ರಿಗೆ ಬಿಟ್ಟಿದ್ದು. ಯಾವುದೇ ಸ್ಥಾನ ನೀಡಿದರೂ ಅದನ್ನು ನಿಭಾಯಿಸುತ್ತೇನೆ. ಇರುವ ಅಲ್ಪ ಕಾಲಾವಕಾಶದಲ್ಲೇ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ ಎಂದರು.

ಸಿದ್ದಗಂಗಾಶ್ರೀಗಳ ಭೇಟಿ ತುಮಕೂರು ವರದಿ :

ತಮಗೆ ಸಚಿವ ಸ್ಥಾನ ಕೊಡುವುದು ಬಿಡುವುದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟದ್ದು ಎಂದು ಗುಂಡ್ಲುಪೇಟೆ ಕ್ಷೇತ್ರದ ನೂತನ ಶಾಸಕಿ ಗೀತಾ ಮಹದೇವಪ್ರಸಾದ್ ಹೇಳಿದರು.

ನಗರಕ್ಕೆ ಸಮೀಪವಿರುವ ಸಿದ್ದಗಂಗಾ ಮಠಕ್ಕೆ ರಾತ್ರಿ ಭೇಟಿ ನೀಡಿ ಮಠಾಧ್ಯಕ್ಷರಾದ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಆಶೀರ್ವಾದ ಪಡೆದ ನಂತರ ವರದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ಶ್ರೀಕ್ಷೇತ್ರಕ್ಕೆ ಬಂದು ಶ್ರೀಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದೆ. ಈಗ ಗೆದ್ದ ಬಳಿಕ ಮತ್ತೆ ಶ್ರೀಗಳ ಆಶೀರ್ವಾದ ಪಡೆಯಲು ಬಂದಿದ್ದೇನೆ ಎಂದ ಅವರು, ತಮ್ಮ ಪತಿ ಮಹದೇವಪ್ರಸಾದ್ ಅವರು ಕಂಡಿದ್ದ ಕನಸನ್ನು ಸಾಕಾರ ಮಾಡಬೇಕಾಗಿದೆ. ಹೀಗಾಗಿ ಶ್ರೀಮಠದಿಂದಲೇ ತಮ್ಮ ಕಾರ್ಯ ಚಟುವಟಿಕೆ ಆರಂಭಿಸುವುದಾಗಿ ತಿಳಿಸಿದರು.

Leave a Comment