ನುಗ್ಗೆ – ಆರೋಗ್ಯದತ್ತ ಲಗ್ಗೆ

ನುಗ್ಗೆಸೊಪ್ಪು, ನುಗ್ಗೆಕಾಯಿ, ಬಳಕೆ ಬಗ್ಗೆ ಇತ್ತೀಚಿನ ವರ್ಷಗಳಲ್ಲಿ ಜನರಲ್ಲಿ ಜಾಗೃತಿ ಮೂಡುತ್ತಿದೆ. ಗ್ರಾಮೀಣ ಭಾಗದಲ್ಲಿ ನುಗ್ಗೆಸೊಪ್ಪನ್ನು ಹೆಚ್ಚಾಗಿ ಬಳಕೆ ಮಾಡುತ್ತಿದ್ದುದು ಸರ್ವೆಸಾಮಾನ್ಯ.
ನಗರ, ಪಟ್ಟಣ ಪ್ರದೇಶಗಳಲ್ಲಿ ಇತ್ತೀಚೆಗೆ ನುಗ್ಗೆಸೊಪ್ಪಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಸಾಂಬಾರ್‌ನ ಅವಿಭಾಜ್ಯ ಅಂಗವಾಗಿರುವ ನುಗ್ಗೆಕಾಯಿಯನ್ನು ಇಷ್ಟಪಡುವ ಜನ ನುಗ್ಗೆಸೊಪ್ಪಿನ ಬಗ್ಗೆ ಅಷ್ಟಾಗಿ ಆಸಕ್ತಿ ತೋರದಿದ್ದ ದಿನಗಳೂ ಇದ್ದವು. ಈಗ ಕಾಲ ಬದಲಾಗಿದೆ.
ನಗರ ಪ್ರದೇಶಗಳಲ್ಲಿನ ಮಾರುಕಟ್ಟೆಗಳಲ್ಲಿ ನುಗ್ಗೆಕಾಯಿ ಲಭ್ಯವಿರುತ್ತಿತ್ತಾದರೂ ನುಗ್ಗೆಸೊಪ್ಪಿನ ಮಾರಾಟ ತೀರಾ ಕಡಿಮೆ ಇತ್ತು. ನುಗ್ಗೆಸೊಪ್ಪಿನಲ್ಲಿರುವ ಔಷಧಿಯುಕ್ತ ಅಂಶಗಳ ಬಗ್ಗೆ ತಿಳುವಳಿಕೆ ಮೂಡಿದ ನಂತರ ಈಗ ಎಲ್ಲಾ ಕಡೆ ಬೇಡಿಕೆಯ ತರಕಾರಿ ಪಟ್ಟಿಯಲ್ಲಿ ಇದು ಸೇರಿದೆ.
ತಮ್ಮ ಕೈತೋಟದಲ್ಲಿ ನುಗ್ಗೆಮರವೊಂದಿದ್ದರೆ, ಆ ಮನೆಯಲ್ಲಿ ವೈದ್ಯರೊಬ್ಬರು ಇದ್ದಂತೆ ಎಂಬುದು ಜನಜನಿತ ಮಾತು.
ನುಗ್ಗೆಮರದ ಬುಡದಿಂದ ಕೊನೆಯವರೆಗೂ ಒಂದಲ್ಲಾ ಒಂದು ರೀತಿಯಲ್ಲಿ ಔಷಧ ರೂಪದಲ್ಲಿ ಬಳಕೆ ಮಾಡಿಕೊಳ್ಳಲಾಗುತ್ತಿದೆ.
ವಿಶೇಷವಾಗಿ ಇದರಲ್ಲಿ ಕಬ್ಬಿಣ ಅಂಶಗಳು, ಕ್ಯಾಲ್ಸಿಯಂ ಹೇರಳವಾಗಿದ್ದು, ದೇಹದ ಹಲವು ಭಾಗಗಳಿಗೆ ಹೆಚ್ಚು ಉಪಯುಕ್ತವಾಗಿದೆ.
ವಿವಿಧ ವಿಟಮಿನ್‌ಗಳು ಮತ್ತು ಪ್ರೋಟೀನ್‌ಗಳು ಇದರಲ್ಲಿ ಅಧಿಕವಾಗಿದ್ದು, ಹಲವಾರು ರೋಗಗಳ ನಿವಾರಕ ಎಂಬ ಖ್ಯಾತಿ ನುಗ್ಗೆಸೊಪ್ಪಿಗಿದೆ.
ನುಗ್ಗೆಸೊಪ್ಪು ಸೇವನೆಯಿಂದ ರಕ್ತದಲ್ಲಿನ ಸಕ್ಕರೆ ಅಂಶ ನಿಯಂತ್ರಣಕ್ಕೆ ಬರಲಿದೆ. ರಕ್ತವನ್ನು ಶುದ್ಧೀಕರಣ ಮಾಡಲಿದೆ. ತಲೆನೋವು, ಮತ್ತಿತರ ಕಾಯಿಲೆಗಳಿಗೆ ಇದು ರಾಮಬಾಣದಂತೆ ಕೆಲಸ ಮಾಡಲಿದೆ. ಬಾಯಿ ಹಾಗೂ ಹೊಟ್ಟೆಯಲ್ಲಿನ ಹುಣ್ಣುಗಳಿಗೂ ಇದು ಔಷಧಿಯಾಗಿ ಕೆಲಸ ಮಾಡಲಿದೆ. ಜ್ವರ, ಕಣ್ಣಿನ ರೋಗಗಳನ್ನೂ ಇದು ಉಪಶಮನ ಮಾಡಲಿದೆ.
ನುಗ್ಗೆಸೊಪ್ಪನ್ನು ಪಲ್ಯದ ರೂಪದಲ್ಲಿ ತಯಾರಿಸಿಕೊಂಡು ತಿನ್ನುವುದು ಸಾಮಾನ್ಯವಾಗಿದೆ. ಇಡ್ಲಿ ಸೇರಿದಂತೆ, ವಿವಿಧ ಬಗೆಯ ತಿಂಡಿ, ತಿನಿಸುಗಳನ್ನು ತಯಾರಿಸುವಾಗಲೂ ಈ ನುಗ್ಗೆಸೊಪ್ಪನ್ನು ಬಳಸಬಹುದಾಗಿದೆ.
ನುಗ್ಗೆಸೊಪ್ಪಿನ ರಸ ಅಸ್ತಮಾ ಕಾಯಿಲೆಯನ್ನು ಶಮನಗೊಳಿಸಲಿದೆ. ಇದು ಗರ್ಭಿಣಿ ಸ್ತ್ರೀಯರಿಗೂ ತುಂಬಾ ಪ್ರಯೋಜನಕಾರಿ. ಗರ್ಭದಲ್ಲಿರುವ ಶಿಶುವಿನ ಬೆಳವಣಿಗೆಗೆ ಇದು ಹೆಚ್ಚಿನ ನೆರವು ನೀಡುವ ಮೂಲಕ ಆರೋಗ್ಯವಂತ ಮಗುವನ್ನು ಪಡೆಯಲು ಸಹಕಾರಿಯಾಗಲಿದೆ. ಕಿಡ್ನಿ ಮತ್ತು ಮೂತ್ರ ಸಂಬಂಧಿತ ಕಾಯಿಲೆಗಳ ನಿವಾರಣೆಗೂ ನುಗ್ಗೆಸೊಪ್ಪಿನ ರಸ ಉಪಯುಕ್ತವಾಗಿದೆ. ಶ್ವಾಸಕೋಶ ಮತ್ತು ಉಸಿರಾಟದ ಸಮಸ್ಯೆಗಳನ್ನು ನಿವಾರಿಸಲಿದೆ.
ನುಗ್ಗೆ ಎಲೆಗಳಲ್ಲಿನ ರೈಬೋಪ್ಲೇವಿನ್ ಎಂಬ ಪೋಷಕಾಂಶ ರಕ್ತದಲ್ಲಿನ ಗ್ಲೂಕೋಸ್ ಪ್ರಮಾಣವನ್ನು ನಿಯಂತ್ರಿಸಲು ನೆರವಾಗುತ್ತದೆ. ಆ ಮೂಲಕ ಮಧುಮೇಹ ರೋಗವನ್ನು ತಹಬದಿಗೆ ತರಲಿದೆ.
ನುಗ್ಗೆಯ ಎಲೆಗಳನ್ನು ಬೇಯಿಸಿ ಸ್ವಲ್ಪ ಅರಿಶಿನಪುಡಿ ಸೇರಿಸಿ ಪ್ರತಿದಿನ ಮುಂಜಾನೆಯ ಉಪಾಹಾರದ ಬಳಿಕ ಸೇವಿಸಿದರೆ, ನಮ್ಮ ಆರೋಗ್ಯ ಸುಧಾರಣೆಯಾಗಲಿದೆ.
ಅರಿಶಿನ ಪುಡಿ ಮತ್ತು ನುಗ್ಗೆ ಎಲೆಗಳಲ್ಲಿ ಉತ್ತಮ ಪ್ರಮಾಣದ ವಿಟಮಿನ್ – ಸಿ ಇದ್ದು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಹಲವು ರೋಗಗಳ ವಿರುದ್ಧ ರಕ್ಷಣೆ ನೀಡುತ್ತದೆ.
ನುಗ್ಗೆಸೊಪ್ಪಿನ ಎಲೆಗಳಲ್ಲಿ ಉತ್ತಮ ಪ್ರಮಾಣದ ಕರಗದ ನಾರು ಇದ್ದು, ಕರುಳಿನಲ್ಲಿ ಉಂಟಾಗುವ ತ್ಯಾಜ್ಯಗಳನ್ನು ಹೊರಹಾಕಲು ನೆರವಾಗುತ್ತದೆ. ಆ ಮೂಲಕ ಮಲಬದ್ಧತೆಯ ಸಮಸ್ಯೆಯನ್ನು ನಿವಾರಿಸಲಿದೆ.
ಎಲೆಗಳಲ್ಲಿನ ಕೆಲವು ಅಂಶಗಳು ಮಾನಸಿಕ ಕಾಯಿಲೆಗಳಿಗೂ ಉತ್ತಮ ಔಷಧಿಯಾಗಿ ಕಾರ್ಯನಿರ್ವಹಿಸಲಿವೆ ಎಂದು ಹೇಳಲಾಗಿದೆ.
ನುಗ್ಗೆ ಹೂವು ಹೃದಯದ ಆರೋಗ್ಯವನ್ನು ವೃದ್ಧಿಗೊಳಿಸಲಿದೆ. ಹೂವುಗಳನ್ನು ಬೇಯಿಸಿ ತಿಂಡಿ, ತಿನಿಸುಗಳ ರೂಪದಲ್ಲಿ ತಯಾರಿಸಿಕೊಂಡು ತಿಂದಲ್ಲಿ ಹೃದಯದ ಆರೋಗ್ಯ ಬಲವೃದ್ಧಿ ಹಾಗೂ ಸಮರ್ಪಕ ಕಾರ್ಯನಿರ್ವಹಣೆಗೆ ದಾರಿಮಾಡಿಕೊಡಲಿದೆ.
ನುಗ್ಗೆಸೊಪ್ಪನ್ನು ಆಯುರ್ವೇದ ಔಷಧಿಗಳ ತಯಾರಿಕೆಯಲ್ಲಿ ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ.

Leave a Comment