ನೀಲಿ ತಿಮಿಂಗಲದ ಸಾವಿನ ಆಟದ ರಹಸ್ಯ..!

ಇಡೀ ಜಗತ್ತನೇ ಬೆಚ್ಚಿಬಿಳಿಸಿರುವ ಬ್ಲೂವೇಲ್ ಆಟಕ್ಕೆ ಮಕ್ಕಳು ಮಾರು ಹೋಗುತ್ತಿದ್ದರೇ, ಇತ್ತ ಪೋಷಕರಲ್ಲಿ ಆತಂಕ ಮಾಡಿ ಮಾಡಿದೆ. ಎಲ್ಲಿ ಯಾವಾಗ ತಮ್ಮ ಮಕ್ಕಳು ಈ ನೀಲಿ ತಿಮಿಂಗಲದ ಬಾಲ ಹಿಡಿಯುತ್ತಾರೋ ಎಂಬ ಭಯದಲ್ಲಿದ್ದಾರೆ. ಈಗಾಗಲೇ ಈ ನೀಲಿ ತಿಮಿಂಗಲದ ಬಾಯಿಗೆ ದೇಶದ ನಾನಾಕಡೆ ಮಕ್ಕಳು ಆಹಾರವಾಗಿದ್ದಾರೆ. ರಾಜ್ಯದಲ್ಲೂ ಕೂಡ ಮಕ್ಕಳು ಈ ಆಟಕ್ಕೆ ಬಲಿಯಾಗಿರುವುದು ತೀವ್ರ ಆತಂಕಕ್ಕೆ ಎಡೆ ಮಾಡಿದೆ. ಅಷ್ಟಕ್ಕೂ ಈ ಆಟ ಅಷ್ಟು ಭಯಾನಕವೇ? ಈ ಆಟಕ್ಕೆ ಮಕ್ಕಳು ಬಲಿಯಾಗುತ್ತಿರುವುದು ಏಕೆ ಎಂಬ ಬಗ್ಗೆ ಅವಲೋಕಿಸದಾಗ ಕಂಡದ್ದು ರೋಚಕ ರೋಮಾಂಚಕ…..?

ಏನಿದು ಬ್ಲೂವೇಲ್…  ಇದು ಮಕ್ಕಳನ್ನು ಹಿಂಸಿಸಿ ಬಲಿ ಪಡೆಯುವ ಆಟ, ಇದು ಡೌನ್ಲೋಡ್ ಮಾಡಿಕೊಳ್ಳಬಹುದಾದ ಆಟವಲ್ಲ, ಇದೊಂದು ಆಪ್ ಅಥವಾ ಸಾಫ್ಟವೇರ್ ಕೂಡ ಅಲ್ಲ, ಸದಾ  ಸಾಮಾಜಿಕ ಜಾಲತಾಣದಲ್ಲಿ ತೊಡಗಿಸಿಕೊಳ್ಳುವ ಮಕ್ಕಳನ್ನು ಲಿಂಕ್‌ಗಳ ಮೂಲಕ ಸೆಳೆದು ಬಲಿಪಡೆಯುವ ಆಟ ಎಂದರೆ ತಪ್ಪಗಲಾರದು.

ಬ್ಲೂವೇಲ್ ಹುಟ್ಟು

ರಷ್ಯಾದ ಮನಃಶಾಸ್ತ್ರ ವಿದ್ಯಾರ್ಥಿ ಫಿಲಿಪ್ ಬುಡೆಕಿನ್ ಎಂಬಾತ ಬ್ಲೂವೇಲ್ ಎಂಬ ಮಾರಣಾಂತಿಕ ಆಟವನ್ನು ಹುಟ್ಟುಹಾಕಿದ. ಕಾಲೇಜಿಂದ ಹೊರದಬ್ಬಿಸಿಕೊಂಡ ಫಿಲಿಪ್ ಹೇಳಿದ್ದು ಭಯಾನಕವಾಗಿದೆ, ಸಮಾಜದ ಅನಗತ್ಯ ಜೀವಗಳನ್ನು ಹೊಸಕಿ ಹಾಕುವುದೇ ಈ ಆಟದ ಹುಟ್ಟಿನ ಮೂಲ ಉದ್ದೇಶ’ ಎಂದಿದ್ದ! ಇತ್ತೀಚೆಗೆ ೧೭ ವರ್ಷದ ರಷ್ಯಾದ ವಿದ್ಯಾರ್ಥಿನಿಯನ್ನು ಬಂಧಿಸಲಾಯಿತು. ಈ ಮಾರಣಾಂತಿಕ ಆಟದ ಹಿಂದಿರುವ ಮಾಸ್ಟರ್ಮೈಂಡ್ ಇವಳೇ ಅಂತೆ! ಈ ಸ್ಫರ್ಧೆಯಲ್ಲಿ ಪಾಲ್ಗೊಂಡ ಮೊದಲ ಸ್ಪರ್ಧಿಯೂ ಆಗಿರುವ ಈಕೆ, ತಮ್ಮ ದೇಹಕ್ಕೆ ತಾವೇ ನೋವು ಮಾಡಿಕೊಂಡು ಸೈಕೋ ಥ್ರಿಲ್ ಹುಟ್ಟಿಸುವ ೫೦ ಚಾಲೆಂಜ್ಗಳ ಸೃಷ್ಟಿಕರ್ತೆಯೂ ಹೌದು.

ಇದೇ ಹೆಸರೇಕೆ?

ಕೆಲವೇ ಕೆಲವು ಸನ್ನಿವೇಶಗಳಲ್ಲಿ ನೀಲಿ ತಿಮಿಂಗಿಲಗಳು ತಾವಾಗೇ ತೀರಕ್ಕೆ ಬಂದು ಬಿದ್ದು ಸಾವನ್ನಪ್ಪುತ್ತವೆ. ಒಂದು ರೀತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಂತೆ! ಇದರ ಅನುಸಾರ ತಮ್ಮನ್ನು ತಾವೇ ನೋಯಿಸಿಕೊಂಡು ಸಾಯಿಸಿಕೊಳ್ಳುವ ಆಟಕ್ಕೆ ಬ್ಲೂವೇಲ್ ಎಂದು ಹೆಸರಿಡಲಾಗಿದೆ.

ಮೂಲವೆಲ್ಲಿದೆ?

ರಷ್ಯಾದಲ್ಲಿ ಹುಟ್ಟಿದ ಈ ಜಾಲತಾಣದ ಆಟ ವಿಶ್ವಾದ್ಯಂತ ಹರಡಿಕೊಂಡಿದೆ. ಇದೇನು ಉಚಿತವಾಗಿ ಸಿಗುವ ಆಟವಲ್ಲ, ಇದನ್ನು ಡೌನ್ಲೋಡ್ ಮಾಡಿಕೊಳ್ಳಲು ಸಾಧ್ಯವಿಲ್ಲ, ಅಸಲಿಗೆ ಇದೊಂದು ಆ?ಯಪ್ ಆಗಲಿ, ಸಾಫ್ಟ್ವೇರ್ ಆಗಲಿ ಅಲ್ಲವೇ ಅಲ್ಲ. ಸಾಮಾಜಿಕ ತಾಣಗಳ ಮೂಲಕ ಅತ್ಯಂತ ಗುಪ್ತವಾಗಿ ಆಯ್ದ ಗುಂಪುಗಳ ಮೂಲಕ ಹರಡುತ್ತಿರುವ ವೈರಸ್. ಹೆಚ್ಚಿನ ಅಧ್ಯಯನ ವರದಿಗಳು ಹೇಳುವುದು ಇದೇ, ನೀವಾಗೇ ಬ್ಲೂವೇಲ್ ಆಟವನ್ನು ಆಯ್ದುಕೊಂಡು ಆಡಬೇಕೆಂದಿಲ್ಲ, ನಿಮ್ಮ ಮಾನಸಿಕ ಸ್ಥಿತಿಯನ್ನು ಗಮನಿಸಿಯೇ ನಿಮ್ಮನ್ನು ಬ್ಲೂವೇಲ್ ಸೃಷ್ಟಿಕರ್ತರೇ ಆಡುವಂತೆ ಪುಸಲಾಯಿಸುತ್ತಾರೆ ಎಂದು.

ಆಟವಾಡುವುದು ಹೇಗೆ?

ಇದು ೫೦ ದಿನಗಳ ಟಾಸ್ಕ್. ಗುಪ್ತಸ್ಥಳದಲ್ಲಿ ಕುಳಿತ ಅಡ್ಮಿನ್ ಈ ಆಟವನ್ನು ಆಡಿಸುತ್ತಿರುತ್ತಾನೆ. ಸ್ಪರ್ಧಿ ಈ ಸವಾಲುಗಳನ್ನು ಪೂರೈಸಿದ್ದೇನೆ ಎಂದು ಸುಳ್ಳು ಹೇಳುವಂತಿಲ್ಲ. ಆತನಿಗೆ ಗಾಯದ ಗುರುತಿನ ಫೋಟೋ ಪ್ರೂಫ್ ಬೇಕು. ಆಗ ಮಾತ್ರ ಮುಂದಿನ ಸವಾಲಿಗೆ ಆದ್ಯತೆ ಸಿಗುತ್ತದೆ. ಮೊದಲ ಒಂದಷ್ಟು ಸವಾಲುಗಳು ಸುಲಭವಾಗಿರುತ್ತವೆ. ಈ ಸವಾಲುಗಳನ್ನು ದಾಟುವ ಹೊತ್ತಿಗೆ ಸ್ಪರ್ಧಿಯ ಮನಸ್ಸಿನ ಮೇಲೆ ಗೇಮರ್ ಸಂಪೂರ್ಣ ಹತೋಟಿ ಸಾಧಿಸಿರುತ್ತಾನೆ. ಅಂತಿಮವಾಗಿ ಆತ್ಮಹತ್ಯೆಯೇ ಅಂತಿಮ ಸವಾಲಾಗಿರುತ್ತದೆ. ಜಿಯೋಗ್ರಾಫಿಕಲ್ ಲೊಕೇಷನ್ ಆಧಾರದ ಮೇಲೆ ಸ್ಪರ್ಧಿ ಎಲ್ಲಿದ್ದಾನೆ, ಏನು ಮಾಡುತ್ತಿದ್ದಾನೆ ಎಂಬೆಲ್ಲ ಮಾಹಿತಿಗಳನ್ನು ಗೇಮರ್ ದೂರದಲ್ಲೆಲ್ಲೋ ಗಮನಿಸುತ್ತಿರುತ್ತಾನೆ.

ತೀರ್ಪುಗಾರ ಯಾರು?

ಅಡ್ಮಿನ್ ಎಲ್ಲ ಸವಾಲುಗಳನ್ನು ನಿಯಂತ್ರಿಸುತ್ತಿರುತ್ತಾನೆ. ಸ್ಪರ್ಧಿಗಳು ಫೋಟೋಶಾಪ್ ಮೂಲಕ ಎಡಿಟೆಡ್ ಚಿತ್ರಗಳನ್ನು ಕಳುಹಿಸಲು ಸಾಧ್ಯವಿಲ್ಲ. ಎಲ್ಲೋ ಕುಳಿತಿರುವ ಅಡ್ಮಿನ್ ಚಾಣಾಕ್ಷನಾಗಿದ್ದು ಇಂತಹ ಮೋಸಗಳು ಆತನ ಮುಂದೆ ನಡೆಯುವುದಿಲ್ಲ. ಯುರೋಪಿಯನ್ ರೇಡಿಯೋ ವಾಹಿನಿಯೊಂದರ ಸಿಬ್ಬಂದಿ ಈ ಗೇಮ್ನಲ್ಲಿ ಭಾಗವಹಿಸಿರುವ ನಾಟಕವಾಡಿದ್ದನಾದರೂ ಅಡ್ಮಿನ್ ಕೈಗೆ ಸಿಕ್ಕಿಬಿದ್ದ. ಮತ್ತು ಗೇಮ್ನಿಂದ ಹೊರಬಿದ್ದ. ಅಂದರೆ ಆತ ನಂಬಿಕೆಗೆ ಅರ್ಹನಲ್ಲ ಎಂದು ತಿಳಿಯುತ್ತಿದ್ದಂತೆ ಆತನ ಜತೆಗಿನ ಎಲ್ಲ ಸಂಪರ್ಕಗಳನ್ನು ಕಡಿತಗೊಳಿಸಲಾಯಿತು.

ಸ್ಪರ್ಧಿಗಳನ್ನು ಹೇಗೆ ಪತ್ತೆ ಹಚ್ಚುತ್ತಾರೆ?

ಆನ್‌ಲೈನ್ ಹುಳುಗಳಾಗಿದ್ದು, ಸಾಮಾಜಿಕ ತಾಣಗಳಲ್ಲಿ ತಮ್ಮ ಮನೋವೇದನೆಗಳನ್ನು ಹಂಚಿಕೊಳ್ಳುತ್ತಾ, ದುರ್ಬಲ ಮನಸ್ಥಿತಿಯನ್ನು ಹೊರಗೆಡಹಿದ ಮಾನಸಿಕ ವ್ಯಕ್ತಿಗಳನ್ನು ಆಟ ಆಡಿಸುವವರು ಬೇಗನೆ ಸೆಳೆಯುತ್ತಾರೆ. ಇನ್ಸ್ಟ್ರಾಗ್ರಾಮ್ ಸೇರಿದಂತೆ ಹಲವು ಸಾಮಾಜಿಕ ತಾಣಗಳಲ್ಲಿ ಕಣ್ಣಿಟ್ಟಿರುವ ದುರುಳರು ಮನೋ ವ್ಯಾಕುಲತೆಯ ಪೋಸ್ಟ್ಗಳು ಕಂಡಿದ್ದೇ ತಡ, ಹರಕೆಯ ಕುರಿಗಳನ್ನಾಗಿಸುತ್ತಾರೆ.

ಮಧ್ಯದಲ್ಲೇ ವಾಪಾಸಾಗಲು ಸಾಧ್ಯವಿಲ್ಲ?

ಒಂದು ಸಲ ಈ ಮರಣಕೂಪ ಪ್ರವೇಶಿಸಿದರೆ ಮತ್ತೆ ವಾಪಾಸಾಗುವ ಅವಕಾಶವೇ ಇರುವುದಿಲ್ಲ. ಸ್ಪರ್ಧಿಯ ಸಂಪೂರ್ಣ ಆನ್ಲೈನ್ ಡೇಟಾದ ನಿಯಂತ್ರಿಸಲು ಅಗತ್ಯ ವಿವರಗಳನ್ನು ಆಗಲೇ ಪಡೆದುಕೊಳ್ಳಲಾಗಿರುತ್ತದೆ. ಸ್ಪರ್ಧೆಯಿಂದ ಹಿಂದೆ ಸರಿಯಲು ಯತ್ನಿಸಿದರೆ ಬ್ಲಾಕ್ಮೇಲ್ಗೆ ಒಳಗಾಗಿ ಅನಿವಾರ್ಯವಾಗಿ ಆಟದಲ್ಲಿ ಮುಂದುವರಿಯಬೇಕಾಗುತ್ತದೆ

ಗೇಮ್‌ಅನ್ನು ನಾಶ ಪಡಿಸಲು ಸಾಧ್ಯವಿಲ್ಲ ಏಕೆ? ಮೊದಲೇ ಹೇಳಿರುವಂತೆ ಇದೊಂದು ಗೇಮ್ ಅಲ್ಲ. ಇದೊಂದು ಸವಾಲುಗಳಿರುವ ಟಾಸ್ಕ್ಗಳ ಗುಚ್ಛ. ಇದರ ನಿರ್ಮಾತೃ ಜೈಲು ಸೇರಿದ್ದರೂ, ಈ ಮಾರಣಾಂತಿಕ ಆಟ ಹೇಗೆ ಹರಡುತ್ತಿದೆ ಎಂಬುದೇ ಹೆಚ್ಚಿನವರಿಗೆ ಅಚ್ಚರಿ. ಯಾರು, ಎಲ್ಲಿಂದ, ಯಾರನ್ನು ಟಾರ್ಗೆಟ್ ಮಾಡಿದ್ದಾರೆ ಎಂಬುದನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ. ಇದೊಂದು ಸಾಫ್ಟ್ವೇರ್ ಅಲ್ಲದಿರುವುದರಿಂದ ಐಪಿ ಅಡ್ರೆಸ್ ಮೂಲಕ ಬ್ಲಾಕ್ ಮಾಡಲು ಸಾಧ್ಯವಾಗುತ್ತಿಲ್ಲ.

ಪೋಷಕರು ಏನು ಮಾಡಬೇಕು

* ಮಕ್ಕಳ ಜತೆಗೆ ಉತ್ತಮ ಸಂವಹನ, ಬಾಂಧವ್ಯ ಸಾಧಿಸಬೇಕು. ಏನು ಮಾಡುತ್ತಾರೆ ಎಂದು ಗಮನಿಸುತ್ತ ಅವರೊಂದಿಗೆ ಹೆಚ್ಚು ಸಮಯ ಕಳೆಯಬೇಕು.

* ಯಾವುದೇ ಅಂಜಿಕೆಯಿಲ್ಲದೆ ತಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಮಕ್ಕಳಿಗೆ ಅವಕಾಶ ನೀಡಿ.

* ಮಕ್ಕಳು ತಮ್ಮಷ್ಟಕ್ಕೆ ತಾವಿದ್ದು ಸಮಯ ವ್ಯರ್ಥ ಮಾಡುತ್ತಿದ್ದರೆ/ಅಳುತ್ತಿದ್ದರೆ ಬೈಯುವುದನ್ನು ಬಿಟ್ಟು ಆ ರೀತಿ ವರ್ತಿಸಲು ಕಾರಣಗಳೇನು ಎಂದು ಪತ್ತೆ ಹಚ್ಚಿ.

* ಪ್ರತಿದಿನ ಕನಿಷ್ಠ ೨೦ ನಿಮಿಷ ನಿಮ್ಮ ಮಕ್ಕಳ ಜತೆ ಮಾತನಾಡುವ/ಅವರಿಗೆ ಮಾತನಾಡಲು ಅವಕಾಶ ನೀಡುವ ಅಭ್ಯಾಸ ರೂಢಿಸಿಕೊಳ್ಳಿ.

*ಇಂಟರ್ನೆಟ್ನಲ್ಲಿ ಏನು ಮಾಡುತ್ತಾರೆ, ಏನು ನೋಡುತ್ತಾರೆ ಎಂಬಿತ್ಯಾದಿ ಬಗ್ಗೆ ಹೆಚ್ಚು ಗಮನ ನೀಡಿ.

*ಮಕ್ಕಳ ಮಾನಸಿಕ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

* ಯಾವುದೋ ಗುಪ್ತ ಸ್ಥಳದಲ್ಲಿ ಕುಳಿತ ಗುಮ್ಮನ ಕೈಗೆ ನಿಮ್ಮ ಮಕ್ಕಳ ಮನಸ್ಸು ನಿಯಂತ್ರಣಕ್ಕೆ ಸಿಗದಂತೆ ಎಚ್ಚರಿಕೆ ವಹಿಸಿ.

 

Leave a Comment