ನೀರೆಯರಿಂದ ಸಂಸ್ಕೃತಿ ಬಿಂಬಿಸುವ ರಂಗು ರಂಗಿನ ವಸ್ತ್ರಧಾರಣೆ

ಮೈಸೂರು, ಜ.11- ಕೆಲವು ನೀರೆಯರು ಸೀರೆಯುಟ್ಟು ಸಂಭ್ರಮಿಸುತ್ತಿದ್ದರೆ, ಮತ್ತೆ ಕೆಲವರು ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸುವಂತೆ ವೈವಿಧ್ಯಮಯ ರಂಗು ರಂಗಿನ ವಸ್ತ್ರಧಾರಿಗಳಾಗಿ ನಲಿಯುತ್ತಿದ್ದರು. ಎಲ್ಲರ ಮೊಗದಲ್ಲಿ ಉತ್ಸಾಹದ ಚಿಲುಮೆ ಗರಿಬಿಚ್ಚಿತ್ತು. ಸ್ವರ್ಗವೇ ಧರೆಗಿಳಿದು ಬಂದಂತೆ ಭಾಸವಾಗುತ್ತಿತ್ತು. ಹಿಂದೂ-ಮುಸ್ಲಿಂ-ಕ್ರೈಸ್ತ ಎಂಬ ಭೇದ-ಭಾವವಿಲ್ಲದೇ ನಾವೆಲ್ಲರೂ ಒಂದೇ ಎಂಬ ಐಕ್ಯತಾ ಮನೋಭಾವದಿಂದ ವಿವಿಧ ಧರ್ಮಗಳ ಮತ್ತು ಜನಾಂಗಗಳ ದಿರಿಸುಗಳನ್ನು ತೊಟ್ಟು ತಮ್ಮ ಸಂಸ್ಕೃತಿಯನ್ನು ತೆರೆದಿಟ್ಟಿದ್ದರು.
ಇವೆಲ್ಲಾ ಕಂಡು ಬಂದಿದ್ದು ಮೈಸೂರಿನ ಶ್ರೀ ನಟರಾಜ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ. ಕಾಲೇಜು ವತಿಯಿಂದ ಶ್ರೀ ನಟರಾಜ ಭವನದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ‘ಪಾರಂಪರಿಕ ದಿನಾಚರಣೆ’ ಯಲ್ಲಿ.
ಸುಗ್ಗಿ ಕಾಲದ ಸಂಕೇತವಾಗಿ ಭತ್ತದ ತೆನೆಗೆ ಹಾಲೆರೆಯುವ ಮೂಲಕ ಕಾರ್ಯಕ್ರಮವನ್ನು ಸಾಂಪ್ರದಾಯಿಕವಾಗಿ ಉದ್ಘಾಟಿಸಲಾಯಿತು. ಸಂಕ್ರಾಂತಿ ಹಬ್ಬದ ಪ್ರಯುಕ್ತ ಉಪಸ್ಥಿತರಿದ್ದ ಅತಿಥಿಗಳಿಗೆ ಎಳ್ಳು-ಬೆಲ್ಲ ಹಂಚಲಾಯಿತು. ನಂತರ ಉದ್ಘಾಟನಾ ನುಡಿಗಳನ್ನಾಡಿದ ವಿಶ್ರಾಂತ ಕುಲಪತಿ ಪ್ರೊ.ಅಂಬಳಿಕೆ ಹಿರಿಯಣ್ಣ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಪಾರಂಪರಿಕ ನಗರಿಯಲ್ಲಿ ವಿದ್ಯಾಭ್ಯಾಸ ಪಡೆಯುತ್ತಿರುವುದು ಅವರ ಸುದೈವವಾಗಿದೆ. ಸಾಂಸ್ಕೃತಿಕ ನಗರಿ ಭವ್ಯ ಇತಿಹಾಸ ಪರಂಪರೆಯನ್ನು ಹೊಂದಿರುವ ನಾಡು. ಆದರೆ ದೀಪದ ಕೆಳಗೆ ಕತ್ತಲು ಎನ್ನುವ ಹಾಗೆ ನಮ್ಮ ನಾಡು-ನುಡಿಯ ಪರಂಪರೆಯ ಬಗ್ಗೆ ನಮಗೆ ತಿಳಿದಿಲ್ಲದಿರುವುದು ಬೇಸರದ ಸಂಗತಿ ಎಂದರು.
ರಿಯಾಲಿಟಿ ಷೋಗಳು ಹೆಚ್ಚಾಗಿ ನಡೆಯುತ್ತಿರುವ ಇಂದಿನ ದಿನಗಳಲ್ಲೂ ಸಹ ನಮ್ಮ ಪರಂಪರೆಯ ಬಗ್ಗೆ ಇಷ್ಟೊಂದು ಕಾಳಜಿ ಹೊಂದಿರುವುದು ಸಂತಸದ ವಿಷಯ. ಮನುಷ್ಯನ ಅನುಭವವೇ ಪರಂಪರೆ. ಪಾರಂಪರಿಕ ಜ್ಞಾನ ನಿಂತ ನೀರಲ್ಲ. ಚಲನಶೀಲ ಗುಣವನ್ನು ಒಳಗೊಂಡಿದೆ. ಮಾನವ ತನ್ನ ಅಗತ್ಯಕ್ಕೆ ತಕ್ಕಂತೆ, ಅಭಿವೃದ್ಧಿಯ ಪಥದತ್ತ ಸಾಗುವ ನಿಟ್ಟಿನಲ್ಲಿ ಕಾಲ ಕಾಲಕ್ಕೆ ಪರಂಪರಾ ಜ್ಞಾನವನ್ನು ಮಾರ್ಪಡಿಸಿಕೊಳ್ಳುತ್ತಾ ಬಂದಿದ್ದಾನೆ. ಅದು ಅಪರಿಮಿತ ಭೌಗೋಳಿಕ ವ್ಯಾಪ್ತಿಯನ್ನು ಹೊಂದಿದೆ. ಪಾರಂಪರಿಕ ನಡೆ-ನುಡಿಗಳನ್ನು ರಕ್ತಗತವಾಗಿ ಮೈಗೂಡಿಸಿಕೊಂಡು ಬಂದಿದ್ದೇವೆ ಎಂಬ ಹೆಮ್ಮೆ ನಮ್ಮಲ್ಲಿದೆ.
ಕರ್ನಾಟಕದಲ್ಲಿ ನಮ್ಮ ಪರಂಪರೆ ಮತ್ತು ಜನಪದವನ್ನು ಉಳಿಸಿ ಬೆಳೆಸುವ ಸಲುವಾಗಿ ಅನೇಕ ವಿವಿಗಳು ಮತ್ತು ಸಂಶೋಧನಾ ಕೇಂದ್ರಗಳನ್ನು ರಾಜ್ಯ ಸರ್ಕಾರ ಸ್ಥಾಪಿಸಿದೆ. ಮಂಡ್ಯ, ಬೀದರ್, ಮೈಸೂರು, ಶಿಗ್ಗಾವಿ ಇನ್ನೂ ಮೊದಲಾದ ಕಡೆಗಳಲ್ಲಿ ಪರಂಪರೆ ಜ್ಞಾನ ಮತ್ತು ವಿಜ್ಞಾನವನ್ನು ಪುನಶ್ಚೇತನಗೊಳಿಸಲು ಅಧ್ಯಯನ ವಿಭಾಗಗಳನ್ನು ತೆರೆಯಲಾಗಿದೆ ಎಂದು ಹೇಳಿದರು. ವಿದ್ಯಾರ್ಥಿಗಳು ನಮ್ಮ ಪರಂಪರೆಯನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಮಹತ್ತರ ಕಾರ್ಯವನ್ನು ಮಾಡಬೇಕಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹೊಸಹುಂಡಿ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ‍್ಯಾಯ ಜಿ.ಎಸ್.ಸೋಮಲಿಂಗೇಗೌಡ, ಸತ್ಯನಾರಾಯಣ, ಶಾರದ ಎಂ, ವಿ.ಡಿ.ಸುನೀತಾರಾಣಿ, ಬಿ.ರಾಧ, ಸತ್ಯ ಸುಲೋಚನ ಕಾಲೇಜಿನ ಪ್ರಾಂಶುಪಾಲ ಜಿ.ಪ್ರಸಾದಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

Leave a Comment