ನೀರಿನ ಸಮಸ್ಯೆಗೆ ಅವೈಜ್ಞಾನಿಕ ಕಾಮಗಾರಿ ಕಾರಣ: ಕಟೀಲ್

ಪುತ್ತೂರು, ಅ.೯- ಕುಡಿಯುವ ನೀರು ಮತ್ತು ಕಸ ವಿಲೇವಾರಿ ದೇಶಕ್ಕೆ ದೊಡ್ಡ ಸಮಸ್ಯೆಯಾಗಿದೆ. ನಮ್ಮಲ್ಲಿ ನದಿ ಸಮುದ್ರ ಇದ್ದರೂ ಕುಡಿಯುವ ನೀರಿನ ಸಮಸ್ಯೆ ಕಾಡುತ್ತದೆ. ಇದಕ್ಕೆ ಅವೈಜ್ಞಾನಿಕ ಕಾಮಗಾರಿಗಳೇ ಕಾರಣ. ನಮ್ಮ ನಗರಗಳು ಹೇಗೆ ಬೆಳೆಯಬೇಕು ಎನ್ನುವ ಮಾನಸಿಕಕತೆ ಅಗತ್ಯ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಅಭಿಪ್ರಾಯಪಟ್ಟರು.
ಸೋಮವಾರ ಕೆಯುಐಡಿಎಫ್‌ಸಿ ಹಾಗೂ ಪುತ್ತೂರು ನಗರಸಭೆ ಇದರ ಜಂಟಿ ಸಹಯೋಗದಲ್ಲಿ ಎಡಿಬಿ ಯೋಜನೆಯಡಿ ಜಲಸಿರಿ ಯೋಜನೆ ಮತ್ತು ಯೋಜನೆಗಳ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ನಗರದಲ್ಲಿ ೩೦ ವರ್ಷ ಹಳೆಯ ರಸ್ತೆಗಳು, ಕುಡಿಯುವ ನೀರಿನ ಪೈಪ್‌ಗಳು ಸಮರ್ಪಕವಾದ ದೂರಾಲೋಚನೆ ಇಲ್ಲದೆ ನಡೆಸಿದ ಯೋಜನೆಗಳಿಂದ ಸಮಸ್ಯೆ ಉಂಟಾಗಿದೆ ಎಂದ ಅವರು ಚುನಾವಣೆ ಕಳೆದು ಒಂದೂವರೆ ವರ್ಷವಾದರೂ ನಗರಸಭಾ ಸದಸ್ಯರಿಗೆ ಅಧಿಕಾರ ಸಿಕ್ಕಿಲ್ಲ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಜತೆ ಮಾತುಕತೆ ನಡೆಸಲಾಗಿದೆ. ಶೀಘ್ರದಲ್ಲಿ ಅಧಿಕಾರ ದೊರೆಯಲಿದೆ. ನಗರೋತ್ಥಾನದಲ್ಲಿ ಹೆಚ್ಚು ಅನುದಾನ ಪುತ್ತೂರಿಗೆ ಬಂದಿದ್ದು, ಕೇಂದ್ರ ಸರಕಾರವೂ ನೆರೆ ಪರಿಹಾರಕ್ಕೆ ಅನುದಾನ ನೀಡಿದೆ. ಕೇಂದ್ರ ಸರಕಾರ ಪುತ್ತೂರಿಗೆ ದೀನ್ ದಯಾಳ್ ಉಪಾಧ್ಯಾಯರ ಯೋಜನೆಯಡಿಯಯಲ್ಲಿ ಸುಮಾರು ರೂ. ೪೫ ಕೋಟಿ ಹಣ ಬಿಡುಗಡೆ ಮಾಡಿದೆ. ಈಗಾಗಲೇ ಹಾರಾಡಿಯ ರೈಲ್ವೇ ಸ್ಟೇಷನ್ ರಸ್ತೆಗೆ ರೂ.೧.೬೦ ಕೋಟಿ ಬಿಡುಗಡೆಯಾಗಿದೆ. ಪುತ್ತೂರಿಗೆ ಯುಜಿಡಿ ಮುಂದಿನ ಗುರಿಯಾಗಿದೆ ಎಂದರು.
ರೂ. ೧೧೨.೦೮ಕೋಟಿ ವೆಚ್ಚದಲ್ಲಿ ಪುತ್ತೂರು ನಗರಕ್ಕೆ ೨೪x೭ ನಿರಂತರ ಕುಡಿಯುವ ನೀರು ಸರಬರಾಜು ಯೋಜನೆಗೆ ಚಿಕ್ಕಮುಡ್ನೂರು ಗ್ರಾಮದ ಕೆಮ್ಮಾಯಿಯಲ್ಲಿ ಶಿಲಾನ್ಯಾಸ ಮತ್ತು ಪುರಭವನದಲ್ಲಿ ಯೋಜನೆಗಳ ಕಾಮಗಾರಿ ಗಳಿಗೆ ಶಾಸಕ ಸಂಜೀವ ಮಠಂದೂರು ಶಿಲಾನ್ಯಾಸ ನೆರವೇರಿಸಿ ಕಾರ್ಯಕ್ರಮದ
ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ನಗರಸಭೆಗೆ
ಎಸ್‌ಎಫ್‌ಸಿ ಅನುದಾನದಲ್ಲಿ ರೂ. ೫ ಕೋಟಿ ಅನುದಾನ ಬಿಡುಗಡೆಯಾಗಿದ್ದು, ಇದರ ಜತೆಗೆ ರೂ. ೩೫ ಕೋಟಿ ದ.ಕ ಜಿಲ್ಲೆಗೆ ಬಿಡುಗಡೆಯಾಗಿದೆ. ಇದರಿಂದ ರಸ್ತೆಯ ಗುಂಡಿಗಳ ದುರಸ್ಥಿ ಕಾರ್ಯ ನಡೆಯಲಿದೆ ಎಂದು ಸಂಜೀವ ಮಠಂದೂರು ತಿಳಿಸಿದರು.
ಪೌರಾಯುಕ್ತೆ ರೂಪಾ ಶೆಟ್ಟಿ ಸ್ವಾಗತಿಸಿದರು. ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ತಾ.ಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಪುತ್ತೂರು ಉಪವಿಭಾಗದ ಹಿರಿಯ ಉಪವಿಭಾಗಾಧಿಕಾರಿ ಎಚ್.ಕೆ.ಕೃಷ್ಣಮೂರ್ತಿ, ಕಾಮಗಾರಿ ಗುತ್ತಿಗೆದಾರ ಪ್ರಮೋದ್ ವೇದಿಕೆಯಲ್ಲಿ ಹಾಜರಿದ್ದರು.
ಕೆಯುಐಡಿಎಫ್‌ಸಿಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮಾದೇಶ್ ವಂದಿಸಿದರು. ಶಿಕ್ಷಕ ಬಾಲಕೃಷ್ಣ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿದರು.

Leave a Comment