ನೀರಿನ ಟ್ಯಾಂಕ್, ಬಸ್ ನಿಲ್ದಾಣ ದುರಸ್ಥಿಗೆ ಆಗ್ರಹ

ಹನೂರು: ಏ.7- ಸಮೀಪದ ಲೊಕ್ಕನ ಹಳ್ಳಿ ಗ್ರಾ.ಪಂ.ವ್ಯಾಪ್ತಿಗೆ ಒಳಪಡುವ ಜಡೇಸ್ವಾಮಿ ದೊಡ್ಡಿ ಸೋಲಿಗರ ಹಾಡಿಯಲ್ಲಿರುವ ಕುಡಿಯುವ ನೀರಿನ ಟ್ಯಾಂಕ್ ದುರಸ್ಥಿ ಹಾಗೂ ಇದೇ ಹಾಡಿಯ ಜನತೆಗೆ ಅನುಕೂಲವಾಗುವ ನಿಟ್ಟಿನಲ್ಲಿ ನಿರ್ಮಾಣ ಮಾಡಲಾಗಿರುವ ಲೊಕ್ಕನಹಳ್ಳಿ ಮುಖ್ಯ ರಸ್ತೆಯಲ್ಲಿರುವ ಬಸ್ ತಂಗುದಾಣವನ್ನು ಕೆಡವಿ ಹೊಸದಾಗಿ ಬಸ್ ನಿಲ್ದಾಣವನ್ನು ಮಾಡಿಕೊಡಬೇಕೆಂದು ಸೋಲಿಗ ಸಂಘದ ಸಂಘಟನಾ ಕಾರ್ಯದರ್ಶಿ ರಂಗೇಗೌಡ ಆಗ್ರಹಿಸಿದ್ದಾರೆ.
ತುರ್ತಾಗಿ ಟ್ಯಾಂಕ್ ದುರಸ್ಥಿಗೊಳಿಸಿ: ಸೋಲಿಗರ ದೊಡ್ಡಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಳೆದ ಮೂರು ತಿಂಗಳ ಹಿಂದೆಯಷ್ಟೆ ನಿರ್ಮಾಣ ಮಾಡಲಾಗಿದ್ದ ಕುಡಿಯುವ ನೀರಿನ ಟ್ಯಾಂಕ್ ಹೊಡೆದು ಹೋಗಿರುವ ಹಿನ್ನಲೆಯಲ್ಲಿ ಇಲ್ಲಿನ ಜನತೆ ನೀರಿಗಾಗಿ ಆಹಾಕಾರ ಪಡುವಂತಾಗಿದೆ. ಆಗಾಗಿ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ನೀರಿನ ಟ್ಯಾಂಕ್‍ನ್ನು ದುರಸ್ಥಿ ಮಾಡಿಸಿಕೊಡುವ ಮೂಲಕ ಜನತೆಯ ಸಮಸ್ಯೆಯನ್ನು ಬಗೆಹರಿಸಬೇಕೆಂದು ಒತ್ತಾಯಿಸಿದ್ದಾರೆ.
ನೂತನ ಬಸ್ ನಿಲ್ದಾಣನಿರ್ಮಾಣಕ್ಕೆ ಒತ್ತಾಯ:ಗ್ರಾಮದ ಜನತೆ ಹನೂರು ಕೊಳ್ಳೇಗಾಲ ಇತ್ತಾ ಒಡೆಯರ ಪಾಳ್ಯ ಇನ್ನಿತರಡೆ ತೆರಳಲು ಅನುಕೂಲವಾಗುವ ದಿಸೆಯಲ್ಲಿ ಅನೇಕ ವರ್ಷಗಳ ಹಿಂದೆ ನಿರ್ಮಾಣ ಮಾಡಲಾಗಿದ್ದ ಬಸ್ ನಿಲ್ದಾಣ ಸಂಪೂರ್ಣ ಶಿಥಿಲಗೊಂಡಿದ್ದು, ಬಸ್ ನಿಲ್ದಾಣದ ಒಂದು ಬದಿಯ ಕಟ್ಟಡ ಸಂಪೂರ್ಣ ಕುಸಿದಿದ್ದು ಅಪಾಯಕ್ಕೆ ಆಹ್ವಾನ ನೀಡುವಂತೆ ಇರುವುದರಿಂದ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಶಿಥಿಲಾವಸ್ಥೆಯಲ್ಲಿರುವ ಬಸ್ ನಿಲ್ದಾಣವನ್ನು ಕೆಡವಿ ನೂತನ ಬಸ್ ನಿಲ್ದಾಣವನ್ನು ಮಾಡಬೇಕೆಂದು ಗ್ರಾಮಸ್ಥರ ಪರವಾಗಿ ಒತ್ತಾಯಿಸಿದ್ದಾರೆ.

Leave a Comment