ನೀರಿನಾಂಶದ ಆದರ ಸೌತೆಕಾಯಿ

ಬೇಸಿಗೆಯಲ್ಲಿ ದಣಿವನ್ನು ನೀಗಿಸಿಕೊಳ್ಳಲು ಹಲವು ಮಾರ್ಗಗಳಿವೆ. ಸಹಜವಾಗಿ ಬೇಸಿಗೆಯಲ್ಲಿ ದಾಹ ಹೆಚ್ಚಾಗುತ್ತದೆ. ದಾಹ ತಣಿಸಲು ಸದಾ ನಮ್ಮೊಂದಿಗೆ ನೀರಿನ ಬಾಟಲಿಯೊಂದನ್ನು ಕೊಂಡೊಯ್ಯುವುದು ಕಷ್ಟವಾಗಬಹುದು. ಅಂತಹ ಸಂದರ್ಭಗಳಲ್ಲಿ ನೀರಿನಾಂಶ ಹೆಚ್ಚಾಗಿರುವ ಹಣ್ಣು ಹಂಪಲುಗಳನ್ನು ಸೇವಿಸುವುದರ ಮೂಲಕ ದಾಹ ತೀರಿಸಿಕೊಳ್ಳಬಹುದಾಗಿದೆ.

ಈ ಸಾಲಿಗೆ ಸೌತೆಕಾಯಿ ಸೇರುತ್ತದೆ. ಸೌತೆಕಾಯಿಯಲ್ಲಿ ಶೇ. 95 ರಷ್ಟು ಅಪ್ಪಟ ನೀರಿನಾಂಶ ಇರುತ್ತದೆ. ಸೌತೆಕಾಯಿ ತಿಂದರೆ ಒಂದು ರೀತಿ ನೀರು ಕುಡಿದಷ್ಟೇ ತೃಪ್ತಿ ಸಿಗಲಿದೆ. ಸೌತೆಕಾಯಿ ಸೇವನೆಯಿಂದ ದೇಹಕ್ಕೆ ತಂಪು ನೀಡುತ್ತದೆ. ಅಲ್ಲದೆ, ದೇಹಕ್ಕೆ ಅಗತ್ಯ ಪ್ರಮಾಣದಲ್ಲಿ ನೀರನ್ನು ನೀಡುತ್ತದೆ.

ಸೌತೆಕಾಯಿಯಲ್ಲಿ ನೀರಿನ ಹೊರತಾಗಿ ವಿಟಮಿನ್ ಕೆ, ಬಿ, ಸಿ, ತಾಮ್ರ, ಪೊಟ್ಯಾಷಿಯಂ ಹಾಗೂ ಮ್ಯಾಂಗನೀಸ್ ಅಂಶಗಳು ಹೇರಳವಾಗಿವೆ.
ಸೌತೆಕಾಯಿ ತಿನ್ನುವುದರಿಂದ ಈ ಎಲ್ಲಾ ಅಂಶಗಳು ದೇಹಕ್ಕೆ ಸೇರ್ಪಡೆಯಾಗುತ್ತವೆ. ಮಾತ್ರವಲ್ಲ, ಸುಲಭವಾಗಿ ಜೀರ್ಣಗೊಂಡು ದೇಹದಲ್ಲಿ ಈ ಅಂಶಗಳ ಕೊರತೆಯನ್ನು ತುಂಬಿಕೊಡಲಿದೆ.

ಸಸ್ಯಶಾಸ್ತ್ರದ ಪ್ರಕಾರ, ಸೌತೆಕಾಯಿ ಸಹ ಕುಂಬಳ, ಸಿಹಿಗುಂಬಳ ಮತ್ತು ಕಲ್ಲಂಗಡಿ ಹಣ್ಣುಗಳ ಗುಂಪಿಗೆ ಸೇರಿದೆ. ಸಲಾಡ್ ರೂಪದಲ್ಲಿ ಹಸಿಯಾಗಿ ತಿನ್ನಬಹುದಾದ ತರಕಾರಿಗಳಲ್ಲಿ ಸೌತೆಕಾಯಿ ಸ್ಥಾನ ಪಡೆದಿದೆ. ಇದರ ಸೇವನೆಯಿಂದ ಹಲವು ಕಾಯಿಲೆಗಳಿಗೆ ಚಿಕಿತ್ಸೆ ದೊರೆಯಲಿದೆ. ಸೌತೆಕಾಯಿಯಲ್ಲಿರುವ ಪೋಷಕಾಂಶಗಳು ದೇಹದಲ್ಲಿರುವ ವಿಷಕಾರಿ ವಸ್ತುಗಳನ್ನು ಸುಲಭವಾಗಿ ಹೊರಹಾಕಲು ಸಹಕಾರಿಯಾಗುತ್ತದೆ.

ಪ್ರತಿನಿತ್ಯ ಸೌತೆಕಾಯಿ ಒಂದನ್ನು ತಿಂದರೆ, ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಇದರಿಂದ ದೇಹದ ಆರೋಗ್ಯ ಸ್ಥಿತಿಯಲ್ಲಿ ಸುಧಾರಣೆ ಕಂಡುಬರಲಿದೆ. ಸೌತೆಕಾಯಿಯಲ್ಲಿರುವ ಕರಗುವ ನಾರು ಜೀರ್ಣಶಕ್ತಿಯನ್ನು ಉತ್ತಮಗೊಳಿಸುತ್ತದೆ. ಜೀವ ರಾಸಾಯನಿಕ ಕ್ರಿಯೆಯೂ ಚುರುಕುಗೊಳ್ಳುತ್ತದೆ.

ಸೌತೆಕಾಯಿ, ಬಾಯಿಂದ ಬರುವ ದುರ್ವಾಸನೆಯನ್ನೂ ಹೋಗಲಾಡಿಸುತ್ತದೆ. ಸೌತೆಕಾಯಿ ತುಂಡನ್ನು ಬಾಯಲ್ಲಿ ಸ್ವಲ್ಪಹೊತ್ತು ಇಟ್ಟುಕೊಂಡು, ನಂತರ ಉಗುಳಬೇಕು. ದುರ್ವಾಸನೆ ಸೂಸುವ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಸಾಮರ್ಥ್ಯ ಇದಕ್ಕಿದೆ.

ಸೌತೆಕಾಯಿಯಲ್ಲಿ ಕ್ಯಾನ್ಸರ್ ರೋಗದ ವಿರುದ್ಧ ಹೋರಾಡುವ ಸಾಮರ್ಥ್ಯವಿದೆ ಎಂಬ ಅಂಶ ಸಂಶೋಧನೆಗಳಿಂದ ತಿಳಿದುಬಂದಿದೆ. ಪ್ರತಿನಿತ್ಯದ ಊಟದ ಜತೆ ಸೌತೆಕಾಯಿ ಸೇವಿಸುವಂತೆ ವೈದ್ಯರೂ ಸಹಜವಾಗಿ ಸಲಹೆ ನೀಡುತ್ತಾರೆ.

ಸೌತೆಕಾಯಿ ಸೇವನೆಯಿಂದ ದೇಹದಲ್ಲಿನ ಯೂರಿಕ್ ಆಮ್ಲದ ಪ್ರಮಾಣವನ್ನು ಕಡಿಮೆಗೊಳಿಸಲಿದೆ. ಆ ಮೂಲಕ ಮೂತ್ರಪಿಂಡಗಳ ಮೇಲೆ ಬೀಳುವ ಹೆಚ್ಚಿನ ಒತ್ತಡವನ್ನು ತಗ್ಗಿಸಲಿದೆ. ಇದರಿಂದ ಮೂತ್ರಪಿಂಡಗಳ ಕಾರ್ಯಕ್ಷಮತೆ ವೃದ್ಧಿಯಾಗುತ್ತದೆ.

`ಎ’ ಮತ್ತು ಇತರ ಅಗತ್ಯ ಪ್ರೋಟೀನ್‌ಗಳು ಹೇರಳವಾಗಿರುವ ಮುಳ್ಳು ಸೌತೆಕಾಯಿ, ಕಣ್ಣಿನ ದೃಷ್ಟಿಯನ್ನು ಉತ್ತಮಗೊಳಿಸುತ್ತದೆ. ಕಣ್ಣುರೆಪ್ಪೆಗಳನ್ನು ಮುಚ್ಚಿ ಅಲ್ಲಿ ಮುಳ್ಳು ಸೌತೆಕಾಯಿ ತುಂಡುಗಳನ್ನು ಸ್ವಲ್ಪ ಹೊತ್ತು ಇಡುವುದರಿಂದ ಕಣ್ಣುಗಳು ತಂಪಾಗಿರುತ್ತವೆ.  ಸೌತೆಕಾಯಿ ರಸ ಸೇವನೆಯಿಂದ ಕಣ್ಣಿನ ಆರೋಗ್ಯ ವೃದ್ಧಿಗೂ ಸಹಕಾರಿಯಾಗಲಿದೆ.

ಬೆಂಗಳೂರು ನಗರದ ಕೆಲವು ಪಾರ್ಕ್‌ಗಳಿಗೆ ಮುಂಜಾನೆ ವಾಯುವಿಹಾರಕ್ಕೆ ಬರುವ ನಾಗರೀಕರಿಗೆ ಸೌತೆಕಾಯಿ ರಸ ಸೇರಿದಂತೆ, ವಿವಿಧ ರಸಗಳ ಮಾರಾಟ ಮಾಡುತ್ತಿರುವ ದೃಶ್ಯವನ್ನು ಕಾಣಬಹುದಾಗಿದೆ.

ಮಾರುಕಟ್ಟೆಯಲ್ಲಿ ಸದಾ ಲಭ್ಯವಿರುವ ಸೌತೆಕಾಯಿಯನ್ನು ಎಲ್ಲಾ ಕಾಲದಲ್ಲೂ ಸೇವಿಸಬಹುದಾಗಿದೆ. ಇದರಿಂದ ಅಡ್ಡಪರಿಣಾಮಗಳು ಉಂಟಾಗುವುದಿಲ್ಲ. ಇದರ ವಿಶೇಷ ಸಾಮರ್ಥ್ಯವೆಂದರೆ, ದೇಹದಲ್ಲಿನ ವಿಷಕಾರಿ ಅಂಶಗಳನ್ನು ಹೊರಹಾಕುವ ಮೂಲಕ ಆರೋಗ್ಯ ಸುಧಾರಣೆ ನಿಟ್ಟಿನಲ್ಲಿ ಸಹಕರಿಸುತ್ತದೆ.

Leave a Comment