ನೀರಿನಲ್ಲಿ ಕಾಲು ಜಾರಿ ಬಿದ್ದು ವ್ಯಕ್ತಿ ಸಾವು

ಕೆ.ಆರ್.ಪೇಟೆ,ಸೆ.10- ವಾಯು ವಿಹಾರಕ್ಕೆ ಹೋಗಿದ್ದ ವ್ಯಕ್ತಿಯೊಬ್ಬರು ಕೃಷಿ ಹೊಂಡದ ನೀರಿನಲ್ಲಿ ಕೈಕಾಲು ತೊಳೆಯಲು ಹೋಗಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಸಾವನ್ನಪ್ಪಿರುವ ಘಟನೆ ಪಟ್ಟಣದ ಹೊರ ವಲಯದ ಚಿಕ್ಕೋನಹಳ್ಳಿ ಬಳಿ ನಡೆದಿದೆ.
ಪಟ್ಟಣದ ಜಾಮಿಯಾ ಮಸೀದಿಯ ಹಿಂಭಾಗದಲ್ಲಿ ಹೋಟೆಲ್ ನಡೆಸುತ್ತಿದ್ದ ಅಕ್ರಂ(45) ಅವರೇ ಮೃತ ವ್ಯಕ್ತಿಯಾಗಿದ್ದಾರೆ.
ಘಟನೆ ವಿವರ: ಅಕ್ರಂ ಅವರು ಇಂದು ಮುಂಜಾನೆ ಚಿಕ್ಕೋನಹಳ್ಳಿ ರೇಷ್ಮೆ ತರಬೇತಿ ಬಳಿ ವಾಯು ವಿಹಾರ ಮಾಡಿ ನಂತರ ಸಮೀಪದ ದೇವೇಗೌಡ ಅವರ ಕೃಷಿ ಹೊಂಡದಲ್ಲಿ ಕೈಕಾಲು ತೊಳೆಯಲು ಹೋಗಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಗ್ರಾಮಾಮತರ ಪೊಲೀಸ್ ಠಾಣೆಯ ಎ.ಎಸ್.ಐ ಈರೇಗೌಡ ಮಹಜರು ನಡೆಸಿ ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿ ವಾರಸುದಾರರಿಗೆ ನೀಡಿದರು. ಮೃತ ಅಕ್ರಂ ಅವರು ಪತ್ನಿ ಶಮೀನಾಬೇಗಂ, ಪುತ್ರ ಮಹಮದ್ ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಮೃತರ ಅಂತಿಮ ದರ್ಶನ ಪಡೆದ ಮಾಜಿ ಸ್ಪೀಕರ್ ಕೃಷ್ಣ ಅವರು ತಮ್ಮ ಅಪ್ಪಟ ಅಭಿಮಾನಿ ಅಕ್ರಂ ಅವರ ನಿಧನಕ್ಕೆ ಕಂಬನಿ ಮಿಡಿದರು. ಪುರಸಭೆ ಸದಸ್ಯರಾದ ಕೆ.ಗೌಸ್‍ಖಾನ್, ಕೆ.ಆರ್.ಹೇಮಂತ್‍ಕುಮಾರ್, ಡಿ.ಪ್ರೇಮಕುಮಾರ್, ಸಂತೋಷ್‍ಕುಮಾರ್ ಮತ್ತಿತರರು ಸಂತಾಪ ಸೂಚಿಸಿದರು.

Leave a Comment