ನೀರಿಗೆ ಆಗ್ರಹಿಸಿ ರೈತರ ಮಿಂಚಿನ ರಸ್ತೆತ‌ಡೆ

ಸಿಂಧನೂರು.ಸೆ.12- ತುಂಗಭದ್ರಾ ಎಡದಂ‌ಡೆ ಕಾಲುವೆಯ ಕೊನೆ ಭಾಗದ ಜಮೀನಿಗೆ ನೀರು ಪೂರೈಕೆ ವಿಳಂಬದಿಂದ ಆಕ್ರೋಶಗೊಂಡ ರೈತರು ಶ್ರೀಪುರಂ ಜಂಕ್ಷನ್ ಬಳಿ ರಸ್ತೆ ತಡೆದು ಪ್ರತಿಭಟಿಸಿದರು.
ತಾಲ್ಲೂಕಿನ ಗೋರೆಬಾಳ 36 ನೇ ಕಾಲುವೆ ಕೆಳಗಿನ ರೈತರ ಜಮೀನಿಗೆ ಇಲ್ಲಿವರೆಗೂ ನೀರು ಬಾರದಿರುವುದರಿಂದ ರೊಚ್ಚಿಗೆದ್ದ ಸುಮಾರು 400ಕ್ಕೂ ಅಧಿಕ ರೈತರು ಶ್ರೀಪುರಂ ಜಂಕ್ಷನ್ ಬಳಿ ಜಮಾಯಿಸಿ, ರಾಜ್ಯ ಹೆದ್ದಾರಿ ತಡೆದು ಕೆಳ ಭಾಗಕ್ಕೆ ನೀರು ಒದಗಿಸುವಂತೆ ಆಗ್ರಹಿಸಿದರು. ರೈತರ ಈ ದಿಢೀರ್ ರಸ್ತೆ ತಡೆ ಚಳುವಳಿಯಿಂದ ಬೆಂಗಳೂರು-ಗುಲ್ಬರ್ಗಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಗಂಟೆಗೂ ಅಧಿಕ ಕಾಲ ವಾಹನಗಳು ಸಾಲುಗಟ್ಟಿ ನಿಲ್ಲುವಂತಾಯಿತು. ಇದರಿಂದ ದೂರದ ಪ್ರಯಾಣದಲ್ಲಿ ತೊಡಗಿದ್ದ ಜನ ಕಕ್ಕಾಬಿಕ್ಕಿಯಾದರು.
ಈ ಪ್ರತಿಭಟನೆಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಬಸವರಾಜ ಹಿರೇಗೌಡರ, ಭೀಮನಗೌಡ, ರಂಗನಗೌಡ ಗೋರೆಬಾಳ, ರಂಗಾರೆಡ್ಡಿ, ಶರಣೇಗೌಡ ಸಾಸಲಮರಿ ಕ್ಯಾಂಪ್ ಸೇರಿದಂತೆ ಇತರರು ಹೋರಾಟದಲ್ಲಿ ಭಾಗವಹಿಸಿದ್ದರು.
ನೀರಾವರಿ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಈರಣ್ಣ ಸೇರಿದಂತೆ ಇತರ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ನಾಳೆ 36 ನೇ ಕಾಲುವೆಯ ಕೆಳ ಭಾಗದ ರೈತರಿಗೆ ನೀರು ತಲುಪಿಸುವ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ ಮೇಲೆ ರೈತರು ರಸ್ತೆ ತಡೆ ಚಳುವಳಿ ಹಿಂದಕ್ಕೆ ಪಡೆದರು

Leave a Comment