ನೀರಿಗೆ ಆಗ್ರಹಿಸಿ ಖಾಲಿಕೊಡ ಹಿಡಿದು ಪ್ರತಿಭಟನೆ

ರಾಯಚೂರು.ಸೆ.14- ಕುಡಿವ ನೀರಿಗೆ ಆಗ್ರಹಿಸಿ, ಮಹಿಳೆಯರು ಖಾಲಿ ಕೊಡ ಹಿಡಿದು ಮಾನ್ವಿ ತಾಲೂಕಿನ ಗಣದಿನ್ನಿ ಗ್ರಾಮ ಪಂಚಾಯತ್ ಕಚೇರಿ ಮುಂದೆ ಪ್ರತಿಭಟನಾ ಧರಣಿ ನಡೆಸಿದರು.
ಗ್ರಾಮದಲ್ಲಿ ಕುಡಿವ ನೀರಿನ ಸಮಸ್ಯೆ ಉಲ್ಬಣಗೊಂಡಿದ್ದರೂ ಅಧಿಕಾರಿಗಳು ನೀರಿನ ಸಮಸ್ಯೆ ಪರಿಹಾರಕ್ಕೆ ಮುಂದಾಗದಿರುವುದರಿಂದ ಮಹಿಳೆಯರು ಏಕಾಏಕಿ ಖಾಲಿ ಕೊಡ ಹಿಡಿದು ಪ್ರತಿಭಟನೆಗಿಳಿದಿದ್ದಾರೆ. ನೀರಿಗಾಗಿ ಕಿ.ಮೀ.ಗಟ್ಟಲೆ ಕಾಲ್ನಡಿಗೆಯಲ್ಲಿ ತೆರಳುವ ದುಸ್ಥಿತಿ ಒದಗಿಬಂದಿದೆ. ಇದ್ದಲ್ಲದೇ ಗ್ರಾಮದಲ್ಲಿ ಮೂಲಭೂತ ಸೌಲಭ್ಯಗಳಾದ ರಸ್ತೆ ಹಾಗೂ ಚರಂಡಿ ವ್ಯವಸ್ಥೆ ಕಲ್ಪಿಸದೇ ಇರುವುದರಿಂದ ದುರ್ವಾಸನೆಗೆ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಉದ್ಯೋಗಖಾತ್ರಿ ಯೋಜನೆಯಡಿ ಪಂಚಾಯತ್ ಅಧಿಕಾರಿಗಳು ರೈತ ಮತ್ತು ಕಾರ್ಮಿಕರಿಗೆ ಕೆಲಸ ಒದಗಿಸುತ್ತಿಲ್ಲ ಎಂದು ಆರೋಪಿಸಿ ಪಂಚಾಯತ್ ಆಡಳಿತಾಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮಸ್ಥರು ಗ್ರಾ.ಪಂ. ಮುಂದೆ ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಅಧಿಕಾರಿಗಳು ಆಗಮಿಸಿ ಸ್ಪಂದಿಸದಿರುವುದರಿಂದ ಪ್ರತಿಭಟನಾಕಾರರ ಕಾವು ಜೋರಾಗಿತ್ತು.
ಮಹಿಳೆಯರು ಸೇರಿದಂತೆ ಇನ್ನಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Leave a Comment