ನೀತಿ ಸಂಹಿತೆ ಉಲ್ಲಂಘನೆ: ಯೋಗಿ, ಮಾಯಾವತಿ ಚುನಾವಣಾ ಪ್ರಚಾರಕ್ಕೆ ಆಯೋಗ ನಿಷೇಧ

ನವದೆಹಲಿ, ಏ 15 –  ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಬಿಎಸ್‌ಪಿ ವರಿಷ್ಠೆ ಮಾಯಾವತಿ ಅವರ ನಡವಳಿಕೆಗೆ ಛೀಮಾರಿ ಹಾಕಿರುವ ಕೇಂದ್ರ  ಚುನಾವಣಾ ಆಯೋಗ, ನಿರ್ದಿಷ್ಟ ಅವಧಿಯವರೆಗೆ  ಕ್ರಮವಾಗಿ ಇವರಿಬ್ಬರಿಗೆ 72  ಹಾಗೂ 48 ಗಂಟೆಗಳ ಚುನಾವಣಾ ಪ್ರಚಾರ ನಿಷೇಧ ಹೇರಿದೆ.

ಇಬ್ಬರು ನಾಯಕರು ಕೋಮುಪ್ರಚೋದನೆ ಹೇಳಿಕೆ ನೀಡುವ ಮೂಲಕ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ. ಅವರು ಸಾರ್ವಜನಿಕ ಸಭೆ, ಮೆರವಣಿಗೆ, ರೋಡ್‌ ಶೋ, ಮಾಧ್ಯಮಗಳಿಗೆ ಸಂದರ್ಶನ ನೀಡುವುದು,  ಸಾಮಾಜಿಕ ಮಾಧ್ಯಮ ಸೇರಿದಂತೆ ಯಾವುದೇ ರೀತಿಯ ಮಾಧ್ಯಮಗಳಿಗೆ ಹೇಳಿಕೆ ನೀಡುವುದಕ್ಕೆ ನಿಷೇಧ ಹೇರಲಾಗಿದೆ. ಏಪ್ರಿಲ್ 16ರಂದು ಬೆಳಗ್ಗೆ 6 ಗಂಟೆಯಿಂದ ಆದಿತ್ಯನಾಥ್ ಅವರಿಗೆ 72  ಹಾಗೂ 48 ಗಂಟೆಗಳವರೆಗೆ ಕ್ರಮವಾಗಿ ನಿಷೇಧ ವಿಧಿಸಿದೆ.

ಸಂವಿಧಾನದ ಪರಿಚ್ಛೇದ 324ರಡಿ, ಪ್ರಸಕ್ತ ಚುನಾವಣೆಗೆ ಸಂಬಂಧಿಸಿದಂತೆ,  ಆದಿತ್ಯನಾಥ್ ಅವರು ಏಪ್ರಿಲ್16ರಂದು ಬೆಳಗ್ಗೆ 6 ಗಂಟೆಯಿಂದ 72 ಗಂಟೆಗಳವರೆಗೆ ಯಾವುದೇ ರೀತಿಯ ಸಭೆ, ಸಾರ್ವಜನಿಕ ಸಭೆ, ಸಾರ್ವಜನಿಕ ಮೆರವಣಿಗೆ, ರೋಡ್ ಶೋ ನಡೆಸುವುದು, ಮಾಧ್ಯಮ ಸಂದರ್ಶನ, ಮಾಧ್ಯಮಗಳಿಗೆ ಹೇಳಿಕೆ (ಎಲೆಕ್ಟ್ರಾನಿಕ್, ಮುದ್ರಣ, ಸಾಮಾಜಿಕ ಮಾಧ್ಯಮ ಇತ್ಯಾದಿ) ನೀಡುವುದರ ಮೇಲೆ ನಿಷೇಧ ಹೇರಲಾಗಿದೆ ಎಂದು ಚುನಾವಣಾ ಆಯೋಗ ಆದೇಶದಲ್ಲಿ ತಿಳಿಸಿದೆ.

ಏಪ್ರಿಲ್16ರಂದು ಬೆಳಗ್ಗೆ 6 ಗಂಟೆಯಿಂದ 48 ಗಂಟೆಗಳವರೆಗೆ ಮಾಯಾವತಿಯವರಿಗೆ ಈ ನಿಷೇಧ ಅನ್ವಯವಾಗಲಿದೆ ಎಂದು ಆಯೋಗ ಮತ್ತೊಂದು ಆದೇಶದಲ್ಲಿ ತಿಳಿಸಿದೆ.

ಇದಕ್ಕೂ ಮೊದಲು, ಭಾರತೀಯ ಸೇನೆ “ಮೋದೀಜಿಯ ಸೇನೆ” ಎಂದು ಆದಿತ್ಯನಾಥ್ ಹೇಳಿಕೆ ನೀಡಿದ್ದರು. ಈ ಸಂಬಂಧ ಆಯೋಗ ಆದಿತ್ಯನಾಥ್ ಅವರಿಗೆ ಎಚ್ಚರಿಕೆ ನೀಡಿತ್ತು ಮತ್ತು ಇಂತಹ ಹೇಳಿಕೆಗಳನ್ನು ನೀಡದಂತೆ ಸೂಚಿಸಿತ್ತು.

ಇದಾದ ಬಳಿಕ ಇಂಡಿಯನ್ ಯೂನಿಯನ್‌ ಮುಸ್ಲಿಂ ಲೀಗ್‌  ಪಕ್ಷವನ್ನು “ಹಸಿರು ವೈರಸ್” ಎಂದು ಯೋಗಿ ಹೇಳಿದ್ದರು. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕಣಕ್ಕಿಳಿದಿರುವ ಕೇರಳದ ವಯನಾಡ್ ಕ್ಷೇತ್ರ ಮುಸ್ಲಿಮ್‌ ಲೀಗ್‌ನ  ಭದ್ರಕೋಟೆಯಾಗಿದೆ ಎಂದು ಹೇಳಿಕೆ ನೀಡಿದ್ದರು.

ಇದಾದ ಕೆಲವು ದಿನಗಳ ಬಳಿಕ, ಕಾಂಗ್ರೆಸ್, ಸಮಾಜವಾದಿ ಪಕ್ಷ ಮತ್ತು ಬಿಎಸ್‌ಪಿ ಪಕ್ಷಗಳು, ಅಲಿ ಮೇಲೆ ವಿಶ್ವಾಸವಿಟ್ಟರೆ, ನಾವು ಬಜರಂಗಬಲಿ ಮೇಲೆ ವಿಶ್ವಾಸವಿಡುತ್ತದೆ ಎಂದು ಹೇಳಿದ್ದರು.

“ಹಸಿರು ವೈರಸ್, ಬಜರಂಗಬಲಿ ಹೇಳಿಕೆ ನೀಡಿರುವುದನ್ನು ಆದಿತ್ಯನಾಥ್ಒಪ್ಪಿಕೊಂಡಿದ್ದರು. ಒಂದು ರಾಜ್ಯದ ಮುಖ್ಯಮಂತ್ರಿಯಾಗಿ ಭಾರತೀಯ ಸಂವಿಧಾನದ ಮೂಲತತ್ವ, ಜಾತ್ಯತೀತ ಸಿದ್ಧಾಂತವನ್ನು ಎತ್ತಿಹಿಡಿಯಬೇಕು ಮತ್ತು ಇವುಗಳು ಸಾರ್ವಜನಿಕ ಸಭೆ, ಭಾಷಣಗಳಲ್ಲೂ ಪ್ರದರ್ಶನಗೊಳ್ಳಬೇಕು ಎಂದು ಆಯೋಗ ಹೇಳಿದೆ.

ವಿವಿಧ ಧಾರ್ಮಿಕ ಸಮುದಾಯಗಳ ನಡುವೆ ಈಗಿರುವ ಭಿನ್ನಾಭಿಪ್ರಾಯಗಳನ್ನು ಉಲ್ಭಣಗೊಳಿಸುವ ಮಾದರಿಯಲ್ಲಿ ಅವರ ಹೇಳಿಕೆ ಇದೆ ಎಂದು ಆಯೋಗ ಮನಗಂಡಿದೆ. ಈ ಹೇಳಿಕೆಗಳ ಮೂಲಕ ಅವರು ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಆಯೋಗ ಹೇಳಿದೆ.

ಮೈತ್ರಿ ಪಕ್ಷಗಳ ಅಭ್ಯರ್ಥಿಗಳ ಪರವಾಗಿ ಅಲ್ಪಸಂಖ್ಯಾತ ಮುಸ್ಲಿಮ್‌ ಸಮುದಾಯಗಳ ಮತಗಳನ್ನು ಕ್ರೋಢೀಕರಿಸುವ ಉದ್ದೇಶದಿಂದ ಹೇಳಿಕೆ ನೀಡಿರುವುದಾಗಿ ಮಾಯಾವತಿ ಒಪ್ಪಿಕೊಂಡಿದ್ದಾರೆ. ಹಿರಿಯ ನಾಯಕಿಯಾಗಿ ಮಾಯಾವತಿಯವರು ಮತಗಳ ಧ್ರುವೀಕರಣಕ್ಕಾಗಿ ಇಂತಹ ಹೇಳಿಕೆಗಳನ್ನು ನೀಡುವುದರಿಂದ ದೂರ ಇರಬೇಕಾಗಿತ್ತು. ಈ ಡಿಜಿಟಲ್‌ ಯುಗದಲ್ಲಿ ಅವರ ಹೇಳಿಕೆ ಕೇವಲ ಒಂದು ಕ್ಷೇತ್ರಕ್ಕೆ ಮಾತ್ರ ಸೀಮಿತವಾಗುವುದಿಲ್ಲ, ಅದು ಎಲ್ಲಾ ಕ್ಷೇತ್ರಗಳ ಮೇಲೆ ಪ್ರಭಾವ ಬೀರುತ್ತದೆ ಎಂದು ಆಯೋಗ ಹೇಳಿದೆ.

ಲೋಕಸಭಾ ಚುನಾವಣೆಯ ಸಂದರ್ಧದಲ್ಲಿ ಕೋಮು ಹೇಳಿಕೆಗಳು ಮತ್ತು ದ್ವೇಷದ ಹೇಳಿಕೆಗಳ ವಿರುದ್ಧ ಚುನಾವಣಾ ಆಯೋಗ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಸುಪ್ರೀಂಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ ಆಯೋಗ ಈ ಕ್ರಮಕ್ಕೆ ಮುಂದಾಗಿದೆ.

Leave a Comment