ನಿವೇಶನ ಸ್ಕೀಮ್ ಹೆಸರಿನಲ್ಲಿ ವಂಚನೆ – ಆರೋಪ

ರಾಯಚೂರು.ಅ.16- ನಿವೇಶನ ನೀಡುವ ಸ್ಕೀಮ್ ಹೆಸರಿನಲ್ಲಿ ಆಯೋಜಿಸಿದ ಗುರುದೇವ್ ಪ್ಲಾಟ್ ಸೇಲ್ ಕಂಪನಿಯಿಂದ ಐವರಿಗೆ ವಂಚಿಸಿದೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕರಾದ ರಾಜು ಪಟ್ಟಿ ಅವರು  ಆರೋಪಿಸಿದ್ದಾರೆ.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ವಿಜಯಕುಮಾರ, ಶಾರದಾ, ಬಾಲಮುನಿ, ಬದ್ರಿನಾಥ ಹಾಗೂ ನಲ್ಲಾರೆಡ್ಡಿ ಇವರುಗಳು ತಮಗೆ ನ್ಯಾಯ ಕೊಡೆಸುವಂತೆ ತಮ್ಮನ್ನು ಸಂಪರ್ಕಿಸಿರುವುದಾಗಿ ಹೇಳಿದರು. ಈ ಹಿನ್ನೆಲೆಯಲ್ಲಿ ಯಾವ ರೀತಿ ವಂಚನೆ ಕಾರ್ಯ ನಡೆಯಬಹುದೆಂಬ ಉದ್ದೇಶದಿಂದ ಮಾಹಿತಿ ನೀಡುತ್ತಿದ್ದೇವೆ. ಗುರುದೇವ್ ಪ್ಲಾಟ್ ಸೇಲ್ಸ್ ಪ್ರೈ.ಲಿ. ಕಂಪನಿ ಕಾಯ್ದೆಯಡಿ ನೋಂದಣಿಯಾಗಿದೆ.
ಈ ಪ್ರಮಾಣ ಪತ್ರದಲ್ಲಿ ವ್ಯಾಪಾರ ನಡೆಸಲು ಅಥವಾ ಸಾರ್ವಜನಿಕರಿಂದ ಠೇವಣಿ ಅಥವಾ ಹಣ ಕೋರಲು ಪರವಾನಿಗೆ ಇರುವುದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ಕಂಪನಿಯ ಪ್ರಮಾಣ ಪತ್ರದಲ್ಲಿ ಸೂಚಿಸಿದಂತೆ ಕಂಪನಿ ಕಾಯ್ದೆ ಉಲ್ಲಂಘಿಸಿ, ಸಾರ್ವಜನಿಕರಿಂದ ಪ್ಲಾಟ್ ಸ್ಕೀಮ್ ಹೆಸರಿನಲ್ಲಿ ಹಣ ಮತ್ತು ಠೇವಣಿ ಸಂಗ್ರಹ ಮಾಡುತ್ತಿದ್ದಾರೆ. ಈ ರೀತಿಯಲ್ಲಿ ಮಾಡುವುದು ಸರಿಯಲ್ಲ.
ಕಂಪನಿ ನಿರ್ದೇಶಕರಾದ ಸುರೇಶಕುಮಾರ ಅವರು ಆಧಾರ್ ಕಾರ್ಡ್‌ನನ್ವಯ ಹೊರ ರಾಜ್ಯದ ರಾಜಸ್ಥಾನ್ ಮೂಲದವರಾಗಿದ್ದಾರೆ. ಕರ್ನಾಟಕ ರಾಜ್ಯದ ಯಾವುದೇ ದಾಖಲೆಗಳು ಇರುವುದಿಲ್ಲ. ಕೇವಲ ಕಂಪನಿ ಹೆಸರಿನಲ್ಲಿ ವ್ಯಾಪಾರ ಮಾಡಲಾಗುತ್ತದೆ. ಕಂಪನಿಯೂ ತಮ್ಮ ವೆಬ್ ಸೈಟ್‌ನಲ್ಲಿ ರಿಯಲ್ ಎಸ್ಟೇಟ್ ಎಂದು ಘೋಷಿಸಿದೆ. ರಿಯಲ್ ಎಸ್ಟೇಟ್ ಪ್ರಾರಂಭಿಸಲು ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ ಕರ್ನಾಟಕ (ರೇರಾ) ಇವರಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕಾಗುತ್ತದೆ.
ಈ ರೀತಿ ನೋಂದಣಿ ಮಾಡಿಸಿಕೊಳ್ಳದೇ ನಿಯಮ ಬಾಹೀರವಾಗಿ ಪ್ಲಾಟ್ ಸ್ಕೀಮ್ ಹೆಸರಿನಲ್ಲಿ ಜಾಹೀರಾತು ನೀಡಿರುವುದು, ಕರಪತ್ರ ಮುದ್ರಿಸುವುದು ಕಾನೂನು ಬಾಹೀರವಾಗಿದೆಂದು ಹೇಳಿದ ಅವರು, ಕಂಪನಿಯೂ ಹಲವಾರು ನಿಯಮಗಳನ್ನು ಉಲ್ಲಂಘಿಸಿದೇ, ಈ ಹಿನ್ನೆಲೆಯಲ್ಲಿ ಸ್ಕೀಮ್ ಸದಸ್ಯರೊಂದಿಗೆ ಸ್ಥಳೀಯ ಪೊಲೀಸ್ ಠಾಣೆಗೆ ದೂರು ದಾಖಲಿಸಿ, ನ್ಯಾಯ ಒದಗಿಸಲು ಪ್ರಯತ್ನಿಸಲಾಗುತ್ತಿದೆ.
ಈ ಸಂದರ್ಭದಲ್ಲಿ ವಿಶ್ವನಾಥ ಪಟ್ಟಿ, ಮಹೇಶಕುಮಾರ, ಶಬನಾ, ವಿಜಯಕುಮಾರ, ಹುಲಿರಾಜ, ಬದ್ರಿನಾಥ, ನಲ್ಲಾರೆಡ್ಡಿ ಉಪಸ್ಥಿತರಿದ್ದರು.

Leave a Comment