ನಿವೃತ್ತ ಸಾರಿಗೆ ನೌಕರನ ಮನೆ ಕಳವು

ಬೆಂಗಳೂರು,ಫೆ.೧೭-ಸಾರಿಗೆ ಇಲಾಖೆಯ ನಿವೃತ್ತ ನೌಕರರೊಬ್ಬರ ಮನೆಯ ಹಿಂಬಾಗಿಲು ಮುರಿದು ಒಳನುಗ್ಗಿರುವ ದುಷ್ಕರ್ಮಿಗಳು ನಗದು ಸೇರಿ ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿರುವ ದುರ್ಘಟನೆ ಅನ್ನಪೂರ್ಣೇಶ್ವರಿನಗರದಲ್ಲಿ ನಡೆದಿದೆ.
ಅನ್ನಪೂರ್ಣೇಶ್ವರಿನಗರದ ಗಾಂಧಿಪಾರ್ಕ್‌ನ ೪ನೇ ಮುಖ್ಯರಸ್ತೆಯಲ್ಲಿ ವಾಸಿಸುತ್ತಿದ್ದ ನಿವೃತ್ತ ನೌಕರ ಹನುಮಂತರಾಯ ಅವರು ಬಳ್ಳಾರಿಗೆ ಹೋಗಿದ್ದರು ಮಗ ಸೊಸೆ ಕೂಡ ಬೇರೆಡೆ ಹೋಗಿದ್ದರು.
ಮನೆಗೆ ಬೀ ಹಾಕಿರುವುದು ಸಿಸಿ ಟಿವಿ ಕ್ಯಾಮರ ಹಾಕಿರುವುದನ್ನು ಕಂಡ ದುಷ್ಕರ್ಮಿಗಳು ಹಿಂಬಾಗಿಲು ಮುರಿದು ಒಳನುಗ್ಗಿ ಮನೆಯಲ್ಲಿನ ವಸ್ತುಗಳನ್ನೆಲ್ಲಾ ಚೆಲ್ಲಾಪಿಲ್ಲಿ ಮಾಡಿ ನಗದು ಸೇರಿ ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ.
ಪ್ರಕರಣ ದಾಖಲಿಸಿರುವ ಅನ್ನಪೂರ್ಣೇಶ್ವರಿನಗರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಮನೆಕಳವು
ಸೋಲದೇವನಹಳ್ಳಿಯ ಉರುಳಿಚಿಕ್ಕನಹಳ್ಳಿಯ ಮನೆಗೆ ಬೀಗ ಹಾಕಿಕೊಂಡು ಕೆಲಸಕ್ಕೆ ಹೋಗಿದ್ದ ಮಹಿಳೆಯೊಬ್ಬರ ಮನೆಗೆ ಹಾಡುಹಗಲೇ ನುಗ್ಗಿರುವ ದುಷ್ಕರ್ಮಿಗಳು ನಗದು ೩೦ ಗ್ರಾಂ ಚಿನ್ನಾಭರಣ ಸೇರಿ ಲಕ್ಷಾಂತರ ಮೌಲ್ಯದ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ.
ಐಎಸ್‌ಎಸ್‌ಆರ್ ಸಂಸ್ಥೆಯ ಉದ್ಯೋಗಿಯಾಗಿರುವ ವೀಣಾ ಅವರು ನಿನ್ನೆ ಬೆಳಿಗ್ಗೆ ೯.೩೦ರ ವೇಳೆ ಉರುಳಿಚಿಕ್ಕನಹಳ್ಳಿಯ ಹನುಮಂತಪ್ಪ ಲೇಔಟ್‌ನ ಮನೆಗೆ ಬೀಗ ಹಾಕಿಕೊಂಡು ಕೆಲಸಕ್ಕೆ ಹೋಗಿ ಕೆಲಸ ಮುಗಿಸಿಕೊಂಡು ಸಂಜೆ ೫ಕ್ಕೆ ಮನೆಗೆ ವಾಪಸಾಗುವಷ್ಟರಲ್ಲಿ ಮುಂಬಾಗಿಲು ಮುರಿದು ಒಳನುಗ್ಗಿರುವ ದುಷ್ಕರ್ಮಿಗಳು ಕಳವು ಮಾಡಿ ಪರಾರಿಯಾಗಿದ್ದಾರೆ.ಪ್ರಕರಣ ದಾಖಲಿಸಿರುವ ಸೋಲದೇವನಹಳ್ಳಿ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ರಸ್ತೆ ತಡೆಗೋಡೆಗೆ ಬೈಕ್ ಡಿಕ್ಕಿ ಬ್ಯಾಂಕ್ ನೌಕರ ಸಾವು

ಬೆಂಗಳೂರು,ಫೆ.೧೭-ಕುಡಿದ ಅಮಲಿನಲ್ಲಿ ವೇಗವಾಗಿ ಚಲಾಯಿಸಿಕೊಂಡು ಹೋಗುತ್ತಿದ್ದ ಬೈಕ್ ರಸ್ತೆ ಪಕ್ಕದ ಗೋಡೆಗೆ ಡಿಕ್ಕಿ ಹೊಡೆದು ಖಾಸಗಿ ಬ್ಯಾಂಕ್‌ನ ಹಣಕಾಸು ಅಧಿಕಾರಿಯೊಬ್ಬರು ಮೃತಪಟ್ಟರೆ ಹಿಂಬದಿ ಸವಾರ ಗಾಯಗೊಂಡಿರುವ ದುರ್ಘಟನೆ ಕೊನಪ್ಪನ ಅಗ್ರಹಾರದ ಬಳಿ ನಿನ್ನೆ ರಾತ್ರಿ ನಡೆದಿದೆ.
ಬ್ಯಾಡರಹಳ್ಳಿಯ ಶೇಖರ್(೨೪)ಮೃತಪಟ್ಟವರು,ಗಾಯಗೊಂಡಿರುವ ಕಿರಣ್ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವರ ಸ್ಥಿತಿ ಗಂಭೀರವಾಗಿದೆ.
ಹೊಸರೋಡ್ ಬಳಿಯ ಖಾಸಗಿ ಬ್ಯಾಂಕ್‌ನಲ್ಲಿ ಹಣಕಾಸು ಅಧಿಕಾರಿಯಾಗಿದ್ದ ಶೇಖರ್ ತನ್ನೊಂದಿಗೆ ಕೆಲಸ ಮಾಡುತ್ತಿದ್ದ ಸ್ನೇಹಿತ ಕಿರಣ್ ಜೊತೆ ಕುಡಿದು ರಾತ್ರಿ ೧೧.೪೫ರ ವೇಳೆ ಪಲ್ಸರ್ ಬೈಕ್‌ನಲ್ಲಿ ವೇಗವಾಗಿ ಬ್ಯಾಡರಹಳ್ಳಿಯ ಮನೆಗೆ ವಾಪಸಾಗುತ್ತಿದ್ದರು.
ಮಾರ್ಗ ಮಧ್ಯೆ ಕೊನಪ್ಪನ ಅಗ್ರಹಾರದ ಪ್ರವೇಶದ್ವಾರ ದಾಟಿ ನೈಸ್ ರಸ್ತೆಯ ತಡೆಗೋಡೆಗೆ ಆಯತಪ್ಪಿ ಡಿಕ್ಕಿ ಹೊಡೆದು ಕೆಳಗೆಬಿದ್ದ ಬೈಕ್ ಚಲಾಯಿಸುತ್ತಿದ್ದ ಶೇಖರ್ ಹಿಂಬದಿ ಸವಾರ ಕಿರಣ್ ಗಂಭೀರವಾಗಿ ಗಾಯಗೊಂಡರು.
ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಶೇಖರ್ ಮೃತಪಟ್ಟರು,ಕಿರಣ್ ಗಂಭೀರವಾಗಿ ಗಾಯಗೊಂಡರೂ ಪ್ರಾಣಪಾಯದಿಂದ ಪಾರಾಗಿದ್ದಾರೆ.ಶೇಖರ್ ಸಿಎಆರ್‌ನ ಮುಖ್ಯಪೇದೆಯಾಗಿರುವ ಗೋವಿಂದಪ್ಪ ಅವರ ಪುತ್ರನಾಗಿದ್ದಾನೆ.
ಪ್ರಕರಣ ದಾಖಲಿಸಿರುವ ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಸಿಮೆಂಟ್ ಟ್ಯಾಂಕರನ್ನೇ ಕದ್ದ ಖದೀಮರು
ಬೆಂಗಳೂರು,ಫೆ.೧೭-ಸುಮಾರು ೩೬ ಟನ್ ಸಿಮೆಂಟ್ ತುಂಬಿದ್ದ ಬೃಹತ್ ಟ್ಯಾಂಕರ್ ಲಾರಿಯನ್ನು ಕದ್ದೊಯ್ದಿದ್ದ ಖದೀಮರು ಒಂದು ಕಡೆ ಸಿಮೆಂಟ್ ಸುರಿದು ಮತ್ತೊಂದು ಕಡೆ ಲಾರಿ ಬಿಟ್ಟು ಪರಾರಿಯಾಗಿರುವ ಕೃತ್ಯ ನಗರದ ಹೊರವಲಯದ ಹೊಸಕೋಟೆ ಬಳಿ ನಿನ್ನೆ ರಾತ್ರಿ ನಡೆದಿದೆ.
ಹೊಸಕೋಟೆಯಿಂದ ಸಿಮೆಂಟ್ ಟ್ಯಾಂಕರ್ ಕಳವು ಮಾಡಿದ್ದ ಖದೀಮರು, ೩೬ ಟನ್ ಸಿಮೆಂಟ್‌ನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ-ಹೊಸಕೋಟೆ ಮಾರ್ಗದ ವೈಜಕೂರು ಗ್ರಾಮದ ಬಳಿಯ ಬಡಾವಣೆಯ ರಸ್ತೆಯಲ್ಲಿ ಸಿಮೆಂಟ್ ಸುರಿದು ಲಾರಿಯನ್ನು ಹೆಚ್ ಕ್ರಾಸ್‌ನಲ್ಲಿ ಬಿಟ್ಟು ಪರಾರಿಯಾಗಿದ್ದಾರೆ.
ಎಂಎಸ್‌ಕೆ ಲಾಜಿಸ್ಟಿಕ್ಸ್ ಕಂಪನಿಗೆ ಸೇರಿದ ಟಿಎನ್-೨೮ ಎಎಲ್ -೯೧೧೦ ನಂಬರಿನ ಟ್ಯಾಂಕರ್ ಇದಾಗಿದೆ. ದಾಲ್ಮಿಯಾ ಕಂಪನಿಗೆ ಸೇರಿದ ಸಿಮೆಂಟ್‌ನ್ನು ಜಮ್ಮಲಮಡುಗುವಿನಿಂದ ಹೊಸಕೋಟೆಗೆ ತುಂಬಿಕೊಂಡು ಬರಲಾಗಿತ್ತು. ನಿಂತಿದ್ದ ಲಾರಿಯನ್ನು ಖದೀಮರು ಕದ್ದು ಈ ಕೃತ್ಯ ಎಸಗಿದ್ದಾರೆ, ಪ್ರಕರಣ ದಾಖಲಿಸಿಕೊಂಡಿರುವ ಹೊಸಕೋಟೆ ಪೊಲೀಸರು ಶೋಧ ನಡೆಸಿದ್ದಾರೆ.

ಅರುಣ್ ಸಾಗರ್ ಅವರ ಆರ್ಟ್ ಗ್ಯಾಲರಿಗೆ ಬೆಂಕಿ ಅಪಾರ ನಷ್ಟ
ಬೆಂಗಳೂರು,ಫೆ.೧೭-ಉತ್ತರಹಳ್ಳಿಯಲ್ಲಿರುವ ನಟ ಹಾಗೂ ಕಲಾ ನಿರ್ದೇಶಕ ಅರುಣ್ ಸಾಗರ್ ಅವರ ಆರ್ಟ್ ಗ್ಯಾಲರಿ ಮತ್ತು ಗೋದಾಮಿನಲ್ಲಿ ಸಂಭವಿಸಿರುವ ಆಗ್ನಿ ಆಕಸ್ಮಿಕದಲ್ಲಿ ಲಕ್ಷಾಂತರ ಮೌಲ್ಯದ ಕಲಾಕೃತಿಗಳು ಬೆಂಕಿಗಾಹುತಿಯಾಗಿವೆ.
ಉತ್ತರಹಳ್ಳಿಯನ ಅರೇಹಳ್ಳಿಯ ಅರ್ಚ್ ಬಳಿಯ ಕುಮಾರನ್ ಸ್ಕೂಲ್ ಹಿಂಭಾಗ ಸುಮಾರು ೧.೫ ಎಕರೆ ಜಾಗದಲ್ಲಿ ಅರುಣ್ ಸಾಗರ್ ಅವರ ಗೋದಾಮು ಇದ್ದು, ೩ ಗೋದಾಮಿನಲ್ಲಿ ಕಲಾಕೃತಿಗಳು ಹಾಗೂ ಇನ್ನಿತರೆ ವಸ್ತುಗಳನ್ನು ಸಂಗ್ರಹಿಸಡಲಾಗಿತ್ತು.
ಫೆ.೧೫ರಂದು ಮಧ್ಯರಾತ್ರಿ ಅಕಸ್ಮಿಕ ಬೆಂಕಿ ತಗುಲಿದ್ದು ಸ್ವಲ್ಪ ಪ್ರಮಾಣದಲ್ಲಿ ಕಾಣಿಸಿಕೊಂಡ ಬೆಂಕಿ ಕ್ಷಣಕ್ಷಣಕ್ಕೂ ಹೆಚ್ಚಾಗಿ ಚಲನಚಿತ್ರ ಹಾಗೂ ಧಾರವಾಹಿಗಳಿಗೆ ಬಳಸಲಾಗುತ್ತಿದ್ದ ಸಾವಿರಾರು ಅಪೂರ್ವ ಕಲಾಕೃತಿಗಳು ಸುಟ್ಟು ಭಸ್ಮವಾಗಿವೆ.
ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡು ದಟ್ಟ ಹೊಗೆ ಹೊರಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು ಬೆಂಕಿ ನಂದಿಸಲು ಪ್ರಯತ್ನ ಪಟ್ಟಿದರಾದರೂ ಬೆಂಕಿ ನಂದಿಸಲು ಸಾಧ್ಯವಾಗಿಲ್ಲ. ನಂತರ ಅಗ್ನಿ ಶಾಮಕದಳ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದಾರೆ.
ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕಾಗಮಿಸುವಷ್ಟರಲ್ಲಿ ಬೆಂಕಿ ಕೆನ್ನಾಲಿಗೆ ಮೂರು ಗೋದಾಮುಗಳಿಗೆ ಹೊತ್ತಿಕೊಂಡಿದೆ. ಬೆಂಕಿ ನಂದಿಸಲು ಸಾಕಷ್ಟು ಅಗ್ನಿಶಾಮಕ ದಳದ ಸಿಬ್ಬಂದಿಗಳು ಸಾಕಷ್ಟು ಹರಸಾಹಸ ಪಟ್ಟಿದ್ದು ನಿನ್ನ ರಾತ್ರಿ ಸಂಪೂರ್ಣವಾಗಿ ನಂದಿಸಲಾಗಿದೆ.ಬೆಂಕಿಯಿಂದ ೭೫ ಲಕ್ಷಕ್ಕೂ ಅಧಿಕ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
೧೫ ವರ್ಷಗಳಿಂದ ಪಟ್ಟ ಪರಿಶ್ರಮಗಳು ಗೋದಾಮಿನಲ್ಲಿರಿಸಲಾಗಿತ್ತು. ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಅವಘಡ ಸಂಭವಿಸಲು ಸಾಧ್ಯವಿಲ್ಲ. ಸ್ಥಳದಲ್ಲಿ ವಿದ್ಯುತ್ ಸಂಬಂಧಿಸಿದ ವೈರ್ ಗಳಾಗಲೀ ಇನ್ನಾವುದೇ ವಸ್ತುಗಳಿರಲಿಲ್ಲ. ಪಕ್ಕದಲ್ಲಿ ಖಾಲಿ ಜಾಗವಿದ್ದು, ಅಲ್ಲಿಂದ ಬೆಂಕಿ ಬಂದಿರಬಹುದು. ಯಾವ ಕಾರಣಕ್ಕೆ ಬೆಂಕಿ ತಗುಲಿದೆ ಎಂಬುದು ಗೊತ್ತಾಗುತ್ತಿಲ್ಲ. ನನಗೆ ಯಾರ ಮೇಲೆಯೂ ಅನುಮಾನಗಳಿಲ್ಲ. ಈಗಾಗಲೇ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ ಎಂದು ಅರುಣ್ ಸಾಗರ್ ತಿಳಿಸಿದ್ದಾರೆ.

Leave a Comment