ನಿರ್ಭಯ ಪ್ರಕರಣ ಮಾದರಿಯಲ್ಲೇ ಸಾಮೂಹಿಕ ಅತ್ಯಾಚಾರ ಮಹಿಳೆ ಕೊಲೆ

ರಾಂಚಿ, ನ. ೯- ಸಾಮೂಹಿಕ ಅತ್ಯಾಚಾರವೆಸಗಿ ಗುಪ್ತಾಂಗಕ್ಕೆ ದೊಣ್ಣೆ ತುರುಕಿದ ಪರಿಣಾಮವಾಗಿ ಮಹಿಳೆಯೊಬ್ಬಳು ಸತ್ತ `ನಿರ್ಭಯ’ದಂತಹ ದಾರುಣ ಘಟನೆ ಜಾರ್ಖಂಡ್‌ನ ಜಮ್‌ತಾರಾ ಜಿಲ್ಲೆಯಲ್ಲಿ ನಡೆದಿದೆ.

ಅತ್ಯಾಚಾರವೆಸಗಿದ ಪಾತಕಿಗಳಲ್ಲಿ ಅವಳ ಮಾಜಿ ಗಂಡನೂ ಇದ್ದನೆನ್ನಲಾಗಿದೆ.

ಮಹಿಳೆಯ ಗಂಡನನ್ನು ಬಂಧಿಸಲಾಗಿದ್ದು, ದುಷ್ಕೃತ್ಯದಲ್ಲಿ ಪಾಲ್ಗೊಂಡಿದ್ದ ಇತರ ಇಬ್ಬರಿಗಾಗಿ ಪೊಲೀಸರು ಶೋಧ ನಡೆಸಿರುವುದಾಗಿ ಉಪವಿಭಾಗೀಯ ಪೊಲೀಸ್ ಅಧಿಕಾರಿ ಬಿ.ಎನ್. ಸಿಂಗ್ ಹೇಳಿದ್ದಾರೆ.

ಬುಧವಾರ ರಾತ್ರಿ ಕಾಳಿಪೂಜೆ ಸಂದರ್ಭದಲ್ಲಿ ನಾಟಕವೊಂದನ್ನು ವೀಕ್ಷಿಸಲು ತೆರಳಿದ್ದ ಮಹಿಳೆಯನ್ನು ಆಕೆಯ ಮಾಜಿ ಗಂಡ ಹಾಗೂ ಇತರ ಇಬ್ಬರು ಬಲವಂತವಾಗಿ ಹಳ್ಳಿಯ ಹೊಲವೊಂದಕ್ಕೆ ಎಳೆದೊಯ್ದು ಅತ್ಯಾಚಾರವೆಸಗಿದ್ದು ಮಾತ್ರವಲ್ಲದೆ ಆಕೆಯ ಗುಪ್ತಾಂಗಕ್ಕೆ ದೊಣ್ಣೆಯಿಂದ ತಿವಿದಿದ್ದಾರೆ.

ಮಹಿಳೆಯ ಆಕ್ರಂದನ ಕೇಳಿ ಓಡಿ ಬಂದ ಗ್ರಾಮಸ್ಥರು ಅವಳನ್ನು ನಾರಾಯಣಪುರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಆಕೆಗೆ ಆಗಿದ್ದ ಗಾಯಗಳು ಗಂಭೀರ ಸ್ವರೂಪದ್ದಾಗಿದ್ದ ಕಾರಣ ಜಾಮುತಾರಾ ಸಾದರ್ ಆಸ್ಪತ್ರೆಗೆ ವರ್ಗಾಯಿಸಲಾಗಿದೆ. ಆ ಹೊತ್ತಿಗೆ ಮಹಿಳೆ ಸತ್ತಿದ್ದಳು.

ಅಷ್ಟರಲ್ಲಿ ಮಹಿಳೆ ತನ್ನ ಮಾಜಿ ಗಂಡ ಹಾಗೂ ಇತರ ಇಬ್ಬರ ಹೆಸರು ಹೇಳಿದ್ದನ್ನು ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ.

ಪೊಲೀಸರು ಮೂವರ ವಿರುದ್ಧವೂ ಮೊಕದ್ದಮೆ ದಾಖಲಿಸಿ ಗಂಡನನ್ನು ಬಂಧಿಸಿದ್ದಾರೆ.

Leave a Comment