ನಿರ್ಭಯಾ ಗಲ್ಲು ಶಿಕ್ಷೆ ಪ್ರಕರಣ; ಇಬ್ಬರು ಅತ್ಯಾಚಾರಿಗಳ ಅರ್ಜಿ ವಜಾ

ನವದೆಹಲಿ (ಜ. 14): ದೆಹಲಿಯಲ್ಲಿ 2012ರಲ್ಲಿ ನಡೆದ ನಿರ್ಭಯಾ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಗಲ್ಲು ಶಿಕ್ಷೆಯನ್ನು ರದ್ದುಗೊಳಿಸಬೇಕೆಂದು ಕೋರಿ ಇಬ್ಬರು ಆರೋಪಿಗಳು ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿಯನ್ನು ವಜಾಗೊಳಿಸಲಾಗಿದೆ. ಸುಪ್ರೀಂಕೋರ್ಟ್ನಲ್ಲಿ ಇಂದು ಕ್ಯುರೇಟಿವ್ ಅರ್ಜಿ ವಿಚಾರಣೆ ನಡೆಸಿದ ಐವರು ನ್ಯಾಯಮೂರ್ತಿಗಳ ನ್ಯಾಯಪೀಠ ಅರ್ಜಿಯನ್ನು ವಜಾಗೊಳಿಸಿ ಆದೇಶ ಹೊರಡಿಸಿದೆ.

ನಾಲ್ವರು ಅಪರಾಧಿಗಳ ಪೈಕಿ ಇಬ್ಬರು ಅಪರಾಧಿಗಳಾದ ವಿನಯ್ ಶರ್ಮಾ, ಮುಖೇಶ್ ಸುಪ್ರೀಂಕೋರ್ಟ್ ಎದುರು ಕ್ಷಮಾಪಣೆ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಸುಪ್ರೀಂಕೋರ್ಟ್ ನ್ಯಾ. ಎನ್.ವಿ. ರಮಣ್, ನ್ಯಾ. ಅರುಣ್ ಮಿಶ್ರಾ, ನ್ಯಾ. ಆರ್.ಎಫ್. ನಾರಿಮನ್, ನ್ಯಾ. ಭಾನುಮತಿ ಹಾಗೂ ನ್ಯಾ. ಅಶೋಕ್ ಭೂಷಣ್ ನೇತೃತ್ವದ ನ್ಯಾಯಪೀಠ ಇಂದು ಅರ್ಜಿ ವಿಚಾರಣೆ ನಡೆಸಿ ತೀರ್ಪು ಪ್ರಕಟಿಸಿದೆ.

ಈ ಮೂಲಕ ನಿರ್ಭಯಾ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ನಾಲ್ವರು ಅಪರಾಧಿಗಳ ಮೇಲ್ಮನವಿ ಅರ್ಜಿಗಳೂ ವಜಾಗೊಂಡಂತಾಗಿದೆ. ಜ. 22ರಂದು ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಲು ದಿನ ನಿಗದಿಗೊಳಿಸಲಾಗಿದೆ. ಇಂದಿನ ತೀರ್ಪಿನಿಂದಾಗಿ ನಾಲ್ವರು ಅಪರಾಧಿಗಳಿಗೆ ಕಾನೂನಿನ ಎಲ್ಲ ಬಾಗಿಲುಗಳೂ ಮುಚ್ಚಿದ್ದು, ಗಲ್ಲು ಶಿಕ್ಷೆ ಖಚಿತವಾದಂತಾಗಿದೆ.

Leave a Comment