ನಿರ್ಗತಿಕರಿಗೆ ತಿಂಡಿ, ಊಟದ ಸೇವೆ

ಹನೂರು: ಏ.2- ಲಾಕ್‍ಡೌನ್ ತುರ್ತು ಪರಿಸ್ಥಿತಿಯಲ್ಲಿ ಆಹಾರಕ್ಕಾಗಿ ಪರಿತಪಿಸುವುದನ್ನು ಮನಗಂಡು ಇಲ್ಲೊಂದು ಯುವಕರ ತಂಡ ಪ.ಪಂ.ಪೌರಕಾರ್ಮಿಕರು ಸೇರಿದಂತೆ ಪ್ರತಿ ದಿನ 50 ಜನ ನಿರ್ಗತಿಕರಿಗೆ ಬೆಳಿಗ್ಗಿನ ತಿಂಡಿ, ಮಧ್ಯಾಹ್ನ ಮತ್ತು ರಾತ್ರಿಯ ಮೂರು ಹೊತ್ತಿನ ಊಟವನ್ನು ನೀಡುವ ಮೂಲಕ ಸದ್ದಿಲ್ಲದೆ ತಮ್ಮ ನಿಸ್ವಾರ್ಥ ಸೇವೆಯನ್ನು ಮಾಡುತ್ತಿದ್ದಾರೆ.
ಹೌದು, ಲಾಕ್‍ಡೌನ್ ಆದ ದಿನಗಳಿಂದ ಲಾಕ್‍ಡೌನ್ ಅವಧಿ ಮುಗಿಯುವವರೆಗೂ ತಮ್ಮ ಕೈಲಾದ ಸೇವೆಯನ್ನು ಮಾಡುವ ಹಂಬಲದೊಂದಿಗೆ ಎಲೆಮರೆ ಕಾಯಿಯಾಗಿ ಸಮಾಜಮುಖಿ ಸೇವೆಯಲ್ಲಿ ತೊಡಗಿರುವವರು ಆರ್.ಎಸ್.ದೊಡ್ಡಿ ಶಿವರಾಜು ಮತ್ತು ಇವರ ತಂಡದವರೇ ಇಂತಹ ಸೇವಾ ಕಾರ್ಯಕ್ಕೆ ಮುಂದಾಗಿರುವುದು. ಈ ಮೂಲಕ ಇತರರಿಗೆ ಮಾದರಿಯೂ ಕೂಡ ಆಗಿದ್ದಾರೆ.
ಈ ಬಗ್ಗೆ ಆರ್.ಎಸ್.ದೊಡ್ಡಿ ಶಿವರಾಜು ಮಾತನಾಡಿ, ಇಂತಹ ಸಂದರ್ಭದಲ್ಲಿ ನಮ್ಮ ಕೈಲಾದ ಸೇವೆಯನ್ನು ಮಾಡುತ್ತಿದ್ದೇವೆ. ನಮ್ಮ ಪ.ಪಂ.ವ್ಯಾಪ್ತಿಯಲ್ಲಿ ಶುಚಿತ್ವ ಕಾರ್ಯದಲ್ಲಿ ತೊಡಗಿರುವ ಪೌರ ಕಾರ್ಮಿಕರ ಸೇವೆ ಹಿರಿದಾದದ್ದು, ಮನೆಯಿಂದ ಹೊರಗಡೆ ಬರಲು ಹೆದರುವ ಈ ದಿನದಲ್ಲೂ ಪೌರ ಕಾರ್ಮಿಕರು ನಮ್ಮೆಲ್ಲರ ಆರೋಗ್ಯದ ದೃಷ್ಟಿಯಿಂದ ಶ್ರಮಿಸುತ್ತಿದ್ದಾರೆ. ಅಂತಹವರಿಗೆ ನಾವು ಊಟವನ್ನು ನೀಡುವುದು ಪುಣ್ಯದ ಕೆಲಸ. ನಾವು ಕೂಡ ಹಸಿವು ಏನೆಂಬುದನ್ನು ತಿಳಿದಿರುವುದರಿಂದ ನಿರ್ಗತಿಕರ ಪರಿಸ್ಥಿತಿಯನ್ನು ತಿಳಿದು ಅವರು ಇರುವಲ್ಲಿಗೆ ತೆರಳಿ ಆಹಾರವನ್ನು ನೀಡುತ್ತಿದ್ದೇವೆ. ನಿರ್ಗತಿಕರಲ್ಲದವರೂ ಕೂಡ ಎಷ್ಟೋ ಜನ ಹಸಿವಿನಿಂದ ಬಳಲುತ್ತಿರುವುದನ್ನು ಕಂಡಿದ್ದೇವೆ ಅಂತಹವರಿಗೂ ಊಟದ ವ್ಯವಸ್ಥೆಯನ್ನು ಕಲ್ಪಿಸಿರುವುದು ಸಮಾಧಾನ ತಂದಿದೆ ಎಂದಿದ್ದಾರೆ.

Leave a Comment