ನಿರಾಸೆ ಮಾಡುವುದಿಲ್ಲ… ಪುನೀತ್ ’ರಾಜಕುಮಾರ’

ಬಹು ನಿರೀಕ್ಷಿತ ಚಿತ್ರ ’ರಾಜಕುಮಾರ’ ಪೂರ್ಣಗೊಂಡಿದೆ. ಇದರ ಬೆನ್ನಲ್ಲೆ “ಅಂಜನಿಪುತ್ರ ಆರಂಭವಾಗಿದೆ. ಈ ನಡುವೆ ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ ಚಿತ್ರದಲ್ಲಿ ನಟಿಸುವುದು ಪಕ್ಕಾ ಆಗಿದೆ. ಇದಲ್ಲದೆ ಇನ್ನೂ ಹಲವು ಕಥೆಗಳನ್ನು ಕೇಳುವುದರಲ್ಲಿ ಬ್ಯುಸಿಯಾಗಿದ್ದಾರೆ. ಹೀಗಾಗಿ ಈ ವರ್ಷವೂ ಬ್ಯುಸಿಯಾಗುವ ಮನಸ್ಸೂಚನೆ ನೀಡಿದ್ದಾರೆ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್.

“ರಾಜಕುಮಾರ” ಅಪ್ಪಾಜಿ ಅವರ ಹೆಸರಿಗೆ ಯಾವುದೇ ಸಂಬಂಧವಿಲ್ಲ. ಸರ್ ನೇಮ್ ಇದೆ ಹಾಗಾಗಿ ಕುತೂಹಲ ಕೆರಳಿಸಿದೆ. ಕುತೂಹಲವಿದ್ದರೆ ತಾನೆ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತೆರಲು ಸಾಧ್ಯ. ಟೈಟಲ್‌ನಿಂದಲೇ ಚಿತ್ರಕ್ಕೆ ಜೋಶ್ ಬರುವುದು. ಅದು ನಿರೀಕ್ಷೆಯನ್ನೂ ಹೆಚ್ಚು ಮಾಡಿದೆ. ಒಂದಂತೂ ಸತ್ಯ ಚಿತ್ರ ಪ್ರೇಕ್ಷಕರಿಗೆ, ಅಭಿಮಾನಿಗಳಿಗೆ ಯಾವುದೇ ನಿರಾಸೆ ಮಾಡುವುದಿಲ್ಲ ಹೀಗಂತ ಭರವಸೆ ನೀಡಿದರು ಪುನೀತ್ ರಾಜ್‌ಕುಮಾರ್.

ಬೇರೆ ಚಿತ್ರಗಳ ಕಾರ್ಯಕ್ರಮದಲ್ಲಿ ಭಾಗವಹಿಸಿದಾಗ ಪುನೀತ್ ರಾಜ್‌ಕುಮಾರ್ ಅವರು,ತಮ್ಮ ಸಿನಿಮಾ ಬಗ್ಗೆ ಮಾತನಾಡುವುದಿಲ್ಲ.ಅದು ಅವರು ಪಾಲಿಸಿಕೊಂಡು ಬಂದಿರುವ ನಿಯಮವೂ ಕೂಡ. ಕಳೆದ ಶನಿವಾರ ’ಶ್ರೀವಲ್ಲಿ ಸಿಡಿ ಬಿಡುಗಡೆಯಲ್ಲಿ ಭಾಗವಹಿಸಿದ್ದ ಅವರು ನಿಗಧಿತ ಸಮಯಕ್ಕೆ ಮುಂಚೆಯೇ ಆಗಮಿಸಿದ್ದರು. ಕೋರಿಕೆಯ ಮೇರೆ ಅವರು ಅಳುಕಿನಿಂದಲೇ ರಾಜಕುಮಾರ ಸೇರಿದಂತೆ ಹಲವು ವಿಷಯಗಳ ಕುರಿತು ಮಾಹಿತಿ ಹಂಚಿಕೊಂಡರು.ಆದರೂ ಚಿತ್ರದ ಬಗ್ಗೆ ಹೆಚ್ಚಿನ ಗುಟ್ಟು ಬಿಟ್ಟುಕೊಡಲಿಲ್ಲ…

ಇನ್ನು ಅವರದೇ ಮಾತುಗಳಲ್ಲಿ ಕೇಳುವುದಾದರೆ…ರಾಜಕುಮಾರ ಚಿತ್ರ ಪೂರ್ಣಗೊಂಡಿದೆ. ಆದರೆ ಈ ಬಗ್ಗೆ ವಿವರ ಹೇಳುವ ಹಾಗಿಲ್ಲ. ಹಾಗಂತ ಈ ಚಿತ್ರ ಅಪ್ಪಾಜಿ ಹೆಸರಿಗೆ ಯಾವುದೇ ಸಂಬಂಧವಿಲ್ಲ .ಚಿತ್ರ ನಿರೀಕ್ಷೆಗಿಂತ ಚೆನ್ನಾಗಿ ಮೂಡಿಬಂದಿದೆ. ಬಹುತಾರಾಗಣ ಚಿತ್ರದಲ್ಲಿದೆ. ಶರತ್ ಕುಮಾರ್ ಸೇರಿದಂತೆ ಹಲವು ಕಲಾವಿದರೊಂದಿಗೆ ಮೊದಲ ಭಾರಿಗೆ ನಟಿಸಿದ್ದೇನೆ.

ಚಿತ್ರ ಮನರಂಜನೆಗೆ ಮೋಸ ಮಾಡುವುದಿಲ್ಲ. ಎಲ್ಲವೂ ಅಂದುಕೊಂಡಂತೆ ಆದರೆ ಅಪ್ಪಾಜಿ ಹುಟ್ಟುಹಬ್ಬ ಏಪ್ರಿಲ್ ೨೪ಕ್ಕೆ ಚಿತ್ರವನ್ನು ತೆರೆಗೆ ತರುವ ಉದ್ದೇಶವಿದೆ. ಆದರೆ ಅದು ಇನ್ನೂ ಪಕ್ಕಾ ಆಗಿಲ್ಲ.ನಿರ್ದೇಶಕ ಆನಂದ್‌ರಾಮ್ ಮೊದಲ ಚಿತ್ರದಲ್ಲಿ ವಿಷ್ಣುವರ್ಧನ್ ಅವರನ್ನು ತೆರೆಯ ಮೇಲೆ ತಂದಿದ್ದರು. ’ರಾಜಕುಮಾರ’ದಲ್ಲಿ ಅಪ್ಪಾಜಿ ಅವರ ಪಾತ್ರ ಇಲ್ಲವೇ ಅವರ ಕುರಿತ ಬಗೆಗಿನ ಸಿನಿಮಾನಾ? ಎನ್ನುವುದಕ್ಕೆ ಪುನೀತ್ ಹಾಗೇನೂ ಇಲ್ಲ. ಆದರೆ ಒಂದಷ್ಟು ಕುತೂಹಲವಿರಲಿ ಎನ್ನುವ ಕಾರಣಕ್ಕೆ ಚಿತ್ರಕ್ಕೆ ’ರಾಜಕುಮಾರ’ ಎನ್ನುವ ಹೆಸರಿಡಲಾಗಿದೆ.

ನಿರ್ದೇಶಕ ಎ.ಹರ್ಷ ನಿರ್ದೇಶನದ “ಅಂಜನಿಪುತ್ರ ಈಗಾಗಲೇ ಆರಂಭವಾಗಿದೆ. ಹರ್ಷ ನನ್ನ ಎರಡನೇ ಸಿನಿಮಾದಿಂದಲೇ ನನಗೆ ಪರಿಚಯ. ಜೊತೆಗೆ ನನ್ನ ಎಲ್ಲಾ ಚಿತ್ರಗಳಿಗೆ ಆತ ನೃತ್ಯ ಸಂಯೋಜನೆ ಮಾಡಿದ್ದಾರೆ. ಶಿವಣ್ಣ ಅವರೊಂದಿಗೆ ಸತತ ಎರಡು ಯಶಸ್ವಿ ಚಿತ್ರಗಳನ್ನು ನೀಡಿದ್ದು ಈ ಚಿತ್ರದ ಬಗ್ಗೆ ಕುತೂಹಲ ಹಾಗು ನಿರೀಕ್ಷೆ ಹೆಚ್ಚಾಗಿದೆ.

ರಾಕ್‌ಲೈನ್ ವೆಂಕಟೇಶ್ ಅವರ ನಿರ್ಮಾಣದ ಚಿತ್ರ ’ಅಂಜನಿಪುತ್ರದ ಬಳಿಕ ಕೈಗೆತ್ತಿಕೊಳ್ಳಲಾಗುವುದು. ಈ ನಡುವೆ ಇನ್ನೂ ಹಲವು ಕಥೆಗಳನ್ನು ಕೇಳುತ್ತಿದ್ದೇನೆ. ಜೊತೆಗೆ ನಮ್ಮದೇ ಬ್ಯಾನರ್ ಚಿತ್ರ ನಿರ್ಮಾಣ ಮಾಡುವ ಉದ್ದೇಶವಿದೆ. ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರ ನಿರ್ದೇಶನ ಮಾಡಿದ್ದ ಹೇಮಂತ್ ರಾವ್ ಅವರು ಹೇಳಿದ ಕಥೆ ಇಷ್ಟವಾಯಿತು. ಆ ಚಿತ್ರ ನಿರ್ಮಾಣ ಮಾಡಲು ನಿರ್ಧರಿಸಿದ್ದೇವೆ.

ಈ ಚಿತ್ರದಲ್ಲಿ ಬರೀ ಬಂಡವಾಳ ಹಾಕುವುದು ನಮ್ಮ ಕೆಲಸ. ಮೇ ಇಲ್ಲವೇ ಜೂನ್‌ನಲ್ಲಿ ಚಿತ್ರ ಆರಂಭಿಸು

ವ ಉದ್ದೇಶವಿದೆ. ಇನ್ನು ಕಿರುತೆರೆಯಲ್ಲಿ ಧಾರಾವಾಹಿ ನಿರ್ಮಾಣ ಮಾಡುತ್ತಿದ್ದು ಅದರ ಉಸ್ತುವಾರಿಯನ್ನು ಪತ್ನಿ ನೋಡಿಕೊಳ್ಳುತ್ತಿದ್ದಾರೆ. ಎಲ್ಲವೂ ಚೆನ್ನಾಗಿ ನಡೆಯುತ್ತಿದೆ.
ಸಾಕಷ್ಟು     ಸ್ನೇಹಿತರಿದ್ದಾರೆ.ಆಗಾಗ ಪಾರ್ಟಿಗಳು, ಸಭೆ ಸಮಾರಂಭಗಳು ಇದ್ದೇ ಇರುತ್ತವೆ, ಬಹು ಬೇಗ ದಪ್ಪನಾಗಿ ಬಿಡುತ್ತೇನೆ. ಆದರೆ ಸಣ್ಣ ಆಗುವುದು ನನ್ನ ಮುಂದಿರುವ ದೊಡ್ಡ ಸವಾಲು. ಮುಖದಲ್ಲಿ ಕಾಂತಿ ಹೆಚ್ಚಾಗಲು ಹೆಚ್ಚು ನೀರು ಕುಡಿಯುತ್ತೇನೆ. ಜೊತೆಗೆ  ದಿನಕ್ಕೆ ಒಂದರಿಂದ ಒಂದೂವರೆ ಗಂಟೆ ವರ್ಕ್‌ಔಟ್ ಹಾಗು ವಾರಕ್ಕೊಮ್ಮೆ ಯೋಗ ಮಾಡುವ ಅಭ್ಯಾಸವಿದೆ. ಇದೆ ಕಾರಣಕ್ಕೆ ಪ್ರೆಶ್ ಆಗಿ ಕಾಣುತ್ತಿರಬಹುದು.

ವಿನಯ್ ರಾಜ್‌ಕುಮಾರ್ ಅವರಿಗೆ ಪವನ್ ಒಡೆಯಾರ್ ಕಥೆ ಮಾಡುತ್ತಿದ್ದಾರೆ. ಅವರು ವಿನಯ್‌ಗೆ ಚಿತ್ರ ಮಾಡಲಿದ್ದಾರೆ. ಬ್ಯಾಡ್ಮಿಂಟನ್,ಸ್ವ್ಕಾಶ್ ಆಡುವ ಆಸೆ ಇದೆ. ಆದರೆ ಸಮಯವೇ ಸಿಗುತ್ತಿಲ್ಲ. ಸೈಕಲಿಂಗ್ ಟೀಮ್ ಜೊತೆ ಲಾಂಗ್ ಟ್ರಿಪ್ ಹೋಗಿ ಬರುವುದು ಮಾಡುತ್ತೇನೆ ಎಂದರು.

ಇನ್ನೂ ಮಾತನಾಡುವ ಮೂಡ್‌ನಲ್ಲಿ ಪುನೀತ್ ರಾಜ್‌ಕುಮಾರ್ ಇದ್ದರು. ಆ ವೇಳೆಗೆ ಅವರ ಆಪ್ತ ರಾಜ್‌ಕುಮಾರ್ ಚಿತ್ರದ ಧ್ವನಿ ಸುರುಳಿ ಬಿಡುಗಡೆ ಆಗಲಿದೆ ಎಂದು ಹೇಳುತ್ತಿದ್ದಂತೆ ಮತ್ತೆ ಸಿಗೋಣ ಎಂದು ಸಿಡಿ ಬಿಡುಗಡೆಗೆ ತೆರಳಿದರು.

Leave a Comment