ನಿರಾಶ್ರಿತರಿಗೆ ಊಟಕ್ಕೆ ಲೋಪವಾಗದಂತೆ ನೋಡಿಕೊಳ್ಳಿ : ಕೆ.ಸಿ.ನಾರಾಯಣಗೌಡ

ಕೆ.ಆರ್.ಪೇಟೆ, ಏ.06: ಕೊರೋನಾ ಸೋಂಕು ತಡೆಯುವ ಸಲುವಾಗಿ ದೇಶಾದ್ಯಂತ ಲಾಕ್‍ಡೌನ್ ನಿಯಮ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ದಿನಸಿ, ತರಕಾರಿ, ಹಾಲು-ಮೊಸರು, ತುರ್ತು ಚಿಕಿತ್ಸೆ, ಔಷಧ ಸೇರಿದಂತೆ ದಿನಬಳಕೆ ವಸ್ತುಗಳಿಗೆ ಯಾವುದೇ ತೊಂದರೆಯಾಗದಂತೆ ಹಾಗೂ ಬಡವರಿಗೆ, ಕೂಲಿ ಕಾರ್ಮಿಕರಿಗೆ ನಿರಾಶ್ರಿತರಿಗೆ ಊಟಕ್ಕೆ ಯಾವುದೇ ಲೋಪವಾಗದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಅಧಿಕಾರಿಗಳ ಮೇಲಿದೆ ಎಂದು ರಾಜ್ಯ ಪೌರಾಡಳಿತ, ರೇಷ್ಮೆ, ತೋಟಗಾರಿಕಾ ಸಚಿವ ಕೆ.ಸಿ.ನಾರಾಯಣಗೌಡ ಹೇಳಿದರು.
ಅವರು ಪಟ್ಟಣದ ತಾಲೂಕು ಪಂಚಾಯಿತಿಯ ಸಭಾಂಗಣದಲ್ಲಿ ನಡೆದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ವಿವಿಧ ಅಧಿಕಾರಿಗಳಿಂದ ಕೊರೋನಾ ಸೋಂಕು ತಡೆಗೆ ಕೈಗೊಂಡಿರುವ ಕ್ರಮಗಳು ಹಾಗೂ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ತೆಗೆದುಕೊಂಡಿರುವ ಮುಂಜಾಗ್ರತಾ ಕ್ರಮಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು.
ಗ್ರಾಮೀಣ ಪ್ರದೇಶದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಜನತೆಗೆ ತಿಳಿ ಹೇಳಬೇಕು. ಗ್ರಾಮಗಳಲ್ಲಿ ಚರಂಡಿಗಳನ್ನು ಸ್ವಚ್ಚಗೊಳಿಸಬೇಕು. ಕುಡಿಯುವ ನೀರಿನ ತೊಂಬೆ, ಬೋರ್‍ವೆಲ್‍ಗಳ ಸುತ್ತಮುತ್ತ ಸ್ವಚ್ಚತೆ ಕಾಪಾಡಬೇಕು. ಹೊರದೇಶಗಳು ಹಾಗೂ ಹೊರರಾಜ್ಯಗಳಿಂದ ಬಂದಿರುವವರ ಬಗ್ಗೆ ಜಾಗ್ರತೆ ವಹಿಸಬೇಕು. ಹೊರ ರಾಜ್ಯಗಳಿಂದ ಬಂದವರು ಕಡ್ಡಾಯವಾಗಿ ಹೋಂ ಕ್ವಾರಂಟೈನ್‍ನಲ್ಲಿ ಇರುವಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ನೋಡಿಕೊಳ್ಳಬೇಕು. ಗ್ರಾಮೀಣ ಭಾಗದಲ್ಲಿ ಗ್ರಾಮ ಪಂಚಾಯಿತಿ ಟಾಸ್ಕ್‍ಪೋರ್ಸ್ ರಚಿಸಿ ಅದರ ಸದಸ್ಯರ ಸಹಕಾರದೊಂದಿಗೆ ಹೋಂ ಕ್ವಾರಂಟೈನ್, ಅಂಗಡಿ-ಮುಂಗಟ್ಟುಗಳ ಬಂದ್, ಸಾಮಾಜಿಕ ಅಂತರ ಕಾಪಾಡುವುದು ಸೇರಿದಂತೆ ವಿವಿಧ ಜವಾಬ್ದಾರಿಗಳನ್ನು ನಿರ್ವಹಣೆ ಮಾಡಿ ಲಾಕ್‍ಡೌನ್ ನಿಯಮವನ್ನು ಏ.14ವರೆಗೆ ಯಶಸ್ವಿಗೊಳಿಸಬೇಕು. ಈ ಮೂಲಕ ಕೊರೋನೋ ಸೋಂಕು ಬಾರದಂತೆ ತಡೆಯಬೇಕು ಎಂದು ಪಿಡಿಓಗಳಿಗೆ ಸಲಹೆ ನೀಡಿದರು. ಗ್ರಾಮ ಪಂಚಾಯಿತಿಗಳು 24ಘಿ7 ಮಾದರಿಯಲ್ಲಿ ಕೆಲಸ ಮಾಡಬೇಕು. ಆರೋಗ್ಯ ಇಲಾಖೆಯ ಅಧಿಕಾರಿಗಳು ಜ್ವರ, ಕೆಮ್ಮು, ನಗಡಿ ಇರುವವರನ್ನು ಕಡ್ಡಾಯವಾಗಿ ಪರೀಕ್ಷೆಗೆ ಒಳಪಡಿಸಲು ಸೂಕ್ತ ಚಿಕಿತ್ಸೆ ಕೊಡಿಸಬೇಕು. ಎಲ್ಲಾ ಜ್ವರ, ಕೆಮ್ಮು, ನೆಗಡಿ ಕೋರೋನಾ ವೈರಸ್ ಅಲ್ಲ ಇದನ್ನು ಜನತೆ ಅರ್ಥ ಮಾಡಿಕೊಳ್ಳಬೇಕು. ಯಾವುದೇ ಅನಾರೋಗ್ಯವಿದ್ದಲ್ಲಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು. ನಿಜಾಮುದ್ದೀನ್ ಸಭೆಗೆ ಹೋಗಿದ್ದವರು ಸ್ವಯಂ ಪ್ರೇರಿತರಾಗಿ ಬಂದು ತಾಲೂಕು ಆಡಳಿತಕ್ಕೆ ಮಾಹಿತಿ ನೀಡಬೇಕು. ತಾಲೂಕಿನಾದ್ಯಂತ ಕೂಲಿ ಇಲ್ಲದೆ ಊಟಕ್ಕೆ ತೊಂದರೆಗೆ ಸಿಲುಕಿರುವವರಿಗೆ ಗ್ರಾಮ ಪಂಚಾಯಿತಿಗಳು ಹಾಗೂ ಸಮಾಜ ಕಲ್ಯಾಣ ಇಲಾಖೆ, ಬಿಸಿಎಂ ಇಲಾಖೆಗಳು ಅಗತ್ಯ ಊಟದ ವ್ಯವಸ್ಥೆ ಕಲ್ಪಿಸಬೇಕು. ತೋಟಗಾರಿಕೆ ಇಲಾಖೆಯ ವತಿಯಿಂದ ಮನೆ ಮನೆಯ ಬಳಿ ವಾಹನದಲ್ಲಿ ಹೋಗಿ ತರಕಾರಿಗಳನ್ನು ಸುಲಭ ಬೆಲೆಯಲ್ಲಿ ಮಾರಾಟ ಮಾಡಲು ಸೂಚನೆ ನೀಡಲಾಗಿದೆ ಇದನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು. ಪುರಸಭೆಯ ಅಧಿಕಾರಿಗಳು ಪೌರಕಾರ್ಮಿಕರಿಗೆ ಅಗತ್ಯ ಊಟ ಒದಗಿಸಿಕೊಡಬೇಕು. ಎಲ್ಲಾ ವಾರ್ಡುಗಳು ಸ್ವಚ್ಚವಾಗಿರುವಂತೆ ನೋಡಿಕೊಳ್ಳಬೇಕು. ಪೌರಕಾರ್ಮಿಕರ ಸುರಕ್ಷತೆಗೆ ಹೆಚ್ಚಿನ ಆಧ್ಯತೆ ನೀಡಬೇಕು ಎಂದು ಸಚಿವರು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಮಂಡ್ಯ ಮೂಡ ಅಧ್ಯಕ್ಷ ಕೆ.ಶ್ರೀನಿವಾಸ್, ತಹಶೀಲ್ದಾರ್ ಎಂ.ಶಿವಮೂರ್ತಿ, ತಾಲೂಕು ಕೋವಿಡ್-19 ಅಧಿಕಾರಿ ಮುರುಳೇಶ್, ತಾಲೂಕು ಪಂ.ಇಒ ವೈ.ಎನ್.ಚಂದ್ರಮೌಳಿ, ತಾಲೂಕು ಆರೋಗ್ಯಾಧಿಕಾರಿ ಡಾ.ಎಚ್.ಟಿ.ಹರೀಶ್, ಪುರಸಭೆ ಮುಖ್ಯಾಧಿಕಾರಿ ಸತೀಶ್‍ಕುಮಾರ್, ಸರ್ಕಲ್ ಇನ್ಸ್‍ಪೆಕ್ಟರ್ ಕೆ.ಎನ್.ಸುಧಾಕರ್, ತೋಟಗಾರಿಕೆ ಸಹಾಯಕ ನಿರ್ದೇಶಕ ಡಾ.ಲೋಕೇಶ್, ಟೌನ್ ಸಬ್‍ಇನ್ಸ್ ಪೆಕ್ಟರ್ ಬ್ಯಾಟರಾಯಗೌಡ, ಗ್ರಾಮಾಂತರ ಠಾಣೆಯ ಸಬ್ ಇನ್ಸ್‍ಪೆಕ್ಟರ್ ಲಕ್ಷ್ಮಣ್ ಮತ್ತಿತರರು ಉಪಸ್ಥಿತರಿದ್ದರು.

Leave a Comment