ನಿಯಮ ಪಾಲಿಸದೆ ಬ್ಯಾಂಕ್ ಮುಂದೆ ಕ್ಯೂ

ಬ್ಯಾಂಕ್ ಗ್ರಾಹಕರಿಗೆ ಎಚ್ಚರಿಕೆ ನೀಡಿದ ತಹಸೀಲ್ದಾರ್
ಪಿರಿಯಾಪಟ್ಟಣ: ಏ.3- ಲಾಕ್ ಡೌನ್ ನಿಯಮ ಪಾಲಿಸದೆ ಬ್ಯಾಂಕ್ ಮುಂದೆ ಕ್ಯೂ ನಿಂತಿದ್ದ ಗ್ರಾಹಕರನ್ನು ಗಸ್ತು ವೇಳೆ ಗಮನಿಸಿದ ತಹಸೀಲ್ದಾರ್ ಶ್ವೇತಾ ಎನ್ ರವೀಂದ್ರ ಲಾಠಿ ಹಿಡಿದು ಎಚ್ಚರಿಕೆ ನೀಡಿದ ಘಟನೆ
ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಸೀಗೂರು ಎಸ್ಬಿಐ ಶಾಖೆಯ ಆವರಣದಲ್ಲಿ ಗುರುವಾರ ನಡೆದಿದೆ.
ಗ್ರಾಮಾಂತರ ಪ್ರದೇಶದ ರೈತರ ಅನುಕೂಲಕ್ಕಾಗಿ ತಾಲೂಕಿನ ಸೀಗೂರು ಬಳಿ ಎಸ್ಬಿಐ ಬ್ಯಾಂಕ್ ಬಹಳ ವರ್ಷದಿಂದ ಕರ್ತವ್ಯ ನಿರ್ವಹಿಸುತ್ತಿದ್ದು ಬಹುಪಾಲು ಹೆಚ್ಚಿನ ಮಂದಿ ರೈತರೇ ಇಲ್ಲಿ ಖಾತೆ ಹೊಂದಿದ್ದಾರೆ, ಲಾಕ್ ಡೌನ್ ಸಂದರ್ಭದ ನಿಯಮಗಳಂತೆ ಬ್ಯಾಂಕ್ ಆವರಣದಲ್ಲಿ ಬಾಕ್ಸ್ ರಚಿಸಿದ್ದರೂ ಗೇಟ್ ಹೊರಭಾಗ ತಮ್ಮ ಸರದಿಗಾಗಿ ಒಬ್ಬರ ಹಿಂದೊಬ್ಬರು ಅಂತರ ಕಾಯ್ದುಕೊಳ್ಳದೆ ನಿಂತಿದ್ದನ್ನು ಗಸ್ತು ವೇಳೆ ಗಮನಿಸಿದ ತಹಸೀಲ್ದಾರ್ ಶ್ವೇತಾ ಎನ್ ರವೀಂದ್ರ ತಕ್ಷಣ ತಮ್ಮ ವಾಹನ ನಿಲ್ಲಿಸಿ ಲಾಠಿ ಹಿಡಿದು ಗ್ರಾಹಕರಿಗೆ ಎಚ್ಚರಿಕೆ ನೀಡಿ ಬ್ಯಾಂಕ್ ವ್ಯವಸ್ಥಾಪಕರನ್ನು ಕರೆದು ನಿಯಮಗಳನ್ನು ಪಾಲಿಸದಿದ್ದರೆ ಗ್ರಾಹಕರಿಗೆ ತೊಂದರೆಯಾದರೂ ಸರಿ ಬ್ಯಾಂಕ್ ಬಂದ್ ಮಾಡಿ ಎಂದು ಹೇಳಿದಾಗ ಅಲ್ಲಿನ ಸಿಬ್ಬಂದಿ ಬ್ಯಾಂಕ್ ಮುಂಭಾಗದ ಬಾಗಿಲನ್ನು ಬಂದ್ ಮಾಡಿದರು, ಈ ವೇಳೆ ತಹಸೀಲ್ದಾರ್ ಶ್ವೇತಾ ಎನ್ ರವೀಂದ್ರ ಸ್ಥಳದಲ್ಲಿದ್ದ ಗ್ರಾಹಕ ರೈತರೊಂದಿಗೆ ಮಾತನಾಡಿ ನಾವೆಲ್ಲರೂ ಮೊದಲು ಆರೋಗ್ಯದ ಬಗ್ಗೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು, ನಾವು ಚೆನ್ನಾಗಿದ್ದರಲ್ಲವೇ ಜೀವನ ನಡೆಸಲು ಸಾಧ್ಯ, ಇಡೀ ವಿಶ್ವವೇ ಕೋರೋನಾ ವೈರಸ್ ಹಾವಳಿಯಿಂದ ತತ್ತರಿಸಿದ್ದು ಕೊರೋನಾ ವೈರಸ್ ಹರಡುವಿಕೆ ಮತ್ತು ತಡೆಗಟ್ಟುವ ಬಗ್ಗೆ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಗ್ರಾಹಕರಿಗೆ ಅರಿವು ಮೂಡಿಸಿದರು.
ಈ ವೇಳೆ ಬ್ಯಾಂಕ್ ವ್ಯವಸ್ಥಾಪಕರು ಮಾತನಾಡಿ ಪ್ರತಿನಿತ್ಯ ನಮಗೆ ಇದೇ ತೊಂದರೆಯಾಗುತ್ತಿದ್ದು ಗ್ರಾಹಕರು ಎಷ್ಟೇಳಿದರೂ ನಿಬಂಧನೆಗಳನ್ನು ಪಾಲಿಸುತ್ತಿಲ್ಲ ಎಂದು ದೂರಿದಾಗ ತಹಸೀಲ್ದಾರ್ ಶ್ವೇತಾ ಎನ್ ರವೀಂದ್ರ ಬ್ಯಾಂಕ್ ನ ಮೇಲಧಿಕಾರಿಗಳೊಂದಿಗೆ ಚರ್ಚಿಸಿ ರೈತರಿಗೆ ಅನುಕೂಲವಾಗುವ ಸಮಯದಲ್ಲಿ ಕರ್ತವ್ಯ ನಿರ್ವಹಿಸುವಂತೆ ಆದೇಶ ಹೊರಡಿಸುವ ಭರವಸೆ ನೀಡಿದರು.
ಈ ಸಂದರ್ಭ ಬೆಟ್ಟದಪುರ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಲೋಕೇಶ್, ಎಎಸ್ಐ ನಟರಾಜ್ ಮತ್ತು ಸಿಬ್ಬಂದಿ ಮಂಜುನಾಥ್ ಸ್ಥಳಕ್ಕಾಗಮಿಸಿ ಗ್ರಾಹಕರಿಗೆ ಎಚ್ಚರಿಕೆ ನೀಡಿ ಬ್ಯಾಂಕ್ ಕರ್ತವ್ಯದ ವೇಳೆ ಎಎಸ್ಐ ಸಿಬ್ಬಂದಿ ನಿಯೋಜಿಸಿದರು.

Leave a Comment