ನಿಯಮ ಉಲ್ಲಂಘಿಸಿ ಖಾಸಗಿ ಕಾಲೇಜುಗಳಲ್ಲಿ ಪ್ರವೇಶ ಆರಂಭ ಎನ್.ಎಸ್.ಯು.ಐ ಆರೋಪ

ಬಳ್ಳಾರಿ, ಮೇ.25: ನಗರದಲ್ಲಿನ ಖಾಸಗಿ ಕಾಲೇಜುಗಳಲ್ಲಿ ಸರ್ಕಾರದ ನಿಯಮ ಉಲ್ಲಂಘನೆ ಮಾಡಿ ಪ್ರಥಮ ಪಿಯುಸಿ ಪ್ರವೇಶ ಆರಂಭ ಮಾಡಿದೆಂದು ರಾಷ್ಟ್ರೀಯ ವಿದ್ಯಾರ್ಥಿ ಕಾಂಗ್ರೆಸ್ ಸಂಘಟನೆ (ಎನ್.ಎಸ್.ಯು.ಐ) ಆರೋಪಿಸಿದೆ.

ಸಂಘಟನೆಯ ಜಿಲ್ಲಾ ಅಧ್ಯಕ್ಷ ಸಿದ್ದುಹಳ್ಳೇಗೌಡ ಇಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ರಾಜ್ಯದಲ್ಲಿ ಇನ್ನು ಎಸ್.ಎಸ್.ಎಲ್.ಸಿ ಪರೀಕ್ಷೆಗಳೇ ಆರಂಭವಾಗಿಲ್ಲ ಸರ್ಕಾರ ಸಹ ಫಲಿತಾಂಶಕ್ಕೆ ಮೊದಲು ಪ್ರವೇಶಾತಿ ಆರಂಭಿಸಬಾರದೆಂದು ಹೇಳಿದೆ.

ಆದರೂ ನಗರದಲ್ಲಿ ಬಹುತೇಕ ಖಾಸಗೀ ಕಾಲೇಜುಗಳು ಈಗಾಗಲೇ ಪ್ರವೇಶಾತಿ ಆರಂಭಿಸಿವೆ. ನಗರದ ಚೈತನ್ಯ ಕಾಲೇಜು ಈ ಸಂಬಂಧ ಸೀಟು ನೊಂದಾಯಿಸಲು 5ಸಾವಿರ ರೂಪಾಯಿ ಮತ್ತು ನಾರಾಯಣ ಕಾಲೇಜು 10 ಸಾವಿರ ರೂ ಗಳನ್ನು ಪಡೆದು ರಸೀದಿ ನೀಡಿರುವುದನ್ನು ಪ್ರದರ್ಶಿಸಿದ ಅವರು, ಹಾಸ್ಟೆಲ್ ಸೇರಿದಂತೆ ವಿದ್ಯಾಭ್ಯಾಸಕ್ಕೆ ಒಂದು ವರ್ಷಕ್ಕೆ ಒಂದರಿಂದ 1 ವರೆ ಲಕ್ಷದವರೆಗೆ ಶುಲ್ಕ ನಿಗಧಿಪಡಿಸಿರುವ ಕರಪತ್ರವನ್ನು ಸಹ ನೀಡಿದರು.

ಇನ್ನು ಕೆಲ ಕಾಲೇಜುಗಳನ್ನು ಆರಂಭಿಸಲು ಅನುಮತಿ ಪಡೆಯದೇ ಪ್ರವೇಶ ನೀಡಲು ಕರಪತ್ರಗಳನ್ನು ಹಂಚಲಾಗುತ್ತಿದೆ.

ಚೈತನ್ಯ ಕಾಲೇಜು 3 ಸ್ಥಳಗಳಲ್ಲಿ ಕಾಲೇಜು ನಡೆಸಲು ಅನುಮತಿ ಪಡೆದು 5 ಕಡೆಗಳಲ್ಲಿ ನಡೆಸುತ್ತಿದೆಂದು ಆರೋಪಿಸಿದರು.

ನಾರಾಯಣ ಕಾಲೇಜಿನಲ್ಲಿ ಆಟದ ಮೈದಾನ ಇಲ್ಲ, ಲ್ಯಾಬ್ ವ್ಯವಸ್ಥೆಯೂ ಸರಿ ಇಲ್ಲ ಎಂದು ಆರೋಪಿಸಿದ ಅವರು ಡೊನೇಷನ್ ವಸೂಲಿಯನ್ನು ಸಹ ಮಾಡಲಾಗುತ್ತಿದೆ.

ಇನ್ನು ದ್ವಿತೀಯ ಪಿಯುಸಿಯ ವಿದ್ಯಾರ್ಥಿಗಳು ಕೊರೊನಾದಿಂದ ಕಾಲೇಜಿಗೆ ಬರದಿದ್ದರೂ ಶುಲ್ಕ ಪಾವತಿಸುವಂತೆ ಒತ್ತಾಯಿಸುತ್ತಿದ್ದಾರೆ. ಕಾನೂನು ಬಾಹಿರವಾಗಿ ಪ್ರವೇಶಾತಿ ಆರಂಭಿಸಿರುವ ಕಾಲೇಜುಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ನಾಳೆ ಮನವಿ ಸಲ್ಲಿಸಲಿದೆ. ಕೆಲ ದಿನಗಳಲ್ಲಿ ಯಾವುದೇ ಕ್ರಮ ಜರುಗದಿದ್ದರೆ ಬೀದಿಗಿಳಿದು ಹೋರಾಟ ನಡೆಸಲಿದೆಂದು ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಮಲ್ಲು ಪಾಟೀಲ್, ಉಪಾಧ್ಯಕ್ಷ ವಿವೇಕ್, ನಗರ ಅಧ್ಯಕ್ಷ ಮಹೇಶ್ ಗೌಡ, ಗ್ರಾಮೀಣ ಅಧ್ಯಕ್ಷ ಧರ್ಮ ಮೊದಲಾದವರು ಇದ್ದರು.

Share

Leave a Comment