ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ -ಜಿಲ್ಲಾಧಿಕಾರಿ

ಧಾರವಾಡ,ಮಾ.26: ಶಂಕಿತ ಕೊರೊನಾ ಲಕ್ಷಣಗಳಿರುವವರನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದೆ.  ಅವರ ಮನೆ ಬಾಗಿಲಿಗೆ ಪೋಸ್ಟರಗಳನ್ನು ಅಂಟಿಸಿ, ಕೈಗಳ ಮೇಲೆ ಮೊಹರು ಹಾಕುವ ಕಾರ್ಯ ಕೈಗೊಳಲಾಗುತ್ತಿದೆ. ಹೋಮ್ ಕ್ವಾರಂಟೈನ್‍ನಲ್ಲಿ ಇರುವವರ ಮೇಲೆ ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ  ನಿಗಾ ಇಡಬೇಕು. ನಿಯಮ ಉಲ್ಲಂಘಿಸಿ ಅವರ ಮನೆಗಳಿಂದ ಹೊರ ಬಂದರೆ ಕಠಿಣ ಕಾನೂನು ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸರ್ಕಾರದ ಮುಖ್ಯಕಾರ್ಯದರ್ಶಿಗಳೊಂದಿಗೆ ವಿಡಿಯೋ ಸಂವಾದ ಬಳಿಕ ಜಿಲ್ಲಾ ಆರೋಗ್ಯ ಕಾರ್ಯಪಡೆಯ ಸಭೆ ಉದ್ದೇಶಿಸಿ  ಅವರು ಮಾತನಾಡಿದರು.
ಸರ್ಕಾರದಿಂದ ಬರುವ ನಿರ್ದೇಶನಗಳನ್ನು ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಎಲ್ಲ ಸಂಬಂಧಿತ ಇಲಾಖೆಗಳ ಅಧಿಕಾರಿಗಳು ಶ್ರಮಿಸಬೇಕು. ಕೊರೊನಾ ವೈರಸ್ ನಿಯಂತ್ರಣ ಕೋಶದಲ್ಲಿ ದೂರುಗಳನ್ನು ಸ್ವೀಕರಿಸುವ ಮತ್ತು ಪರಿಹರಿಸುವ ಕಾರ್ಯ ಚುರುಕಾಗಬೇಕು. ಸಮುದಾಯಗಳಲ್ಲಿ ರೋಗ ಹರಡುವುದನ್ನು ತಡೆಯಲು ಮಾನವ ಸಂಪನ್ಮೂಲ ಮತ್ತು ಸಾಮಗ್ರಿಗಳ ನಿರ್ವಹಣೆ ಮುಖ್ಯವಾಗಿದೆ. ಕೊರೊನಾ ಕುರಿತು ಹರಡುವ ವದಂತಿಗಳನ್ನು ಆಗಿಂದಾಗ್ಗೆ ನಿಯಂತ್ರಿಸಿ ಸುಳ್ಳು ಮಾಹಿತಿಗಳನ್ನು ನಂಬದಿರಲು ಸರ್ಕಾರದ ವಿವಿಧ ಇಲಾಖೆಗಳ ವೆಬ್‍ಸೈಟ್‍ಗಳು ಹಾಗೂ  ಸಾಮಾಜಿಕ ಜಾಲತಾಣಗಳ ಮೂಲಕ ಮನವಿ ಮಾಡಿಕೊಂಡು ಸ್ಪಷ್ಟಿಕರಣ ನೀಡಬೇಕು.
ಕೋವಿಡ್-19 ಪಾಸಿಟಿವ್ ಹೊಂದಿರುವ ವ್ಯಕ್ತಿಯೋಂದಿಗೆ ಪ್ರಾಥಮಿಕ ಸಂಪರ್ಕ ಹಾಗೂ 2ನೇ ಹಂತದ ಸಂಪರ್ಕ ಹೊಂದಿದವರು ಮತ್ತು ವಿದೇಶಗಳಿಂದ ಆಗಮಿಸಿರುವ ಜನರ ಚಲನ ವಲನಗಳಿಗೆ ಅವಕಾಶ ನೀಡದೆ ಪ್ರತಿ ದಿನ ಅವರ ಹೋಮ್ ಕ್ವಾರಂಟೈನ್ ನಿಗಾ ಇಟ್ಟು ಖಚಿತಪಡಿಸಿಕೊಳ್ಳಬೇಕು. ಈ ಕಾರ್ಯಕ್ಕೆ ಆರೋಗ್ಯ ಇಲಾಖೆಯ ಜೊತೆಗೆ ಬೇರೆ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗುವುದು.
ಕಿಮ್ಸ್ ಸಂಸ್ಥೆಗೆ ಕರ್ತವ್ಯಕ್ಕೆ ಆಗಮಿಸುವ ಸಿಬ್ಬಂದಿಯ ಸೌಕರ್ಯಕ್ಕಾಗಿ ಜಿಲ್ಲಾಡಳಿತ ಸಾರಿಗೆ ವ್ಯವಸ್ಥೆ ಕಲ್ಪಿಸಲಿದೆ. ಆರೋಗ್ಯ ಇಲಾಖೆಗೂ ವಾಹನಗಳನ್ನು ನೀಡಲಾಗುವುದು. ಪ್ರತಿ ದಿನ ಆ ವಾಹನಗಳನ್ನು ಮಹಾನಗರ ಪಾಲಿಕೆಯವರು ಶುಚಿಗೊಳಿಸಿಕೊಡಬೇಕು ಎಂದು ಸೂಚಿಸಿದರು.

Leave a Comment