ನಿಫಾ ಸೋಂಕು ತಡೆಗೆ ಕೇರಳ ಗಡಿಯಲ್ಲಿ ಕಣ್ಗಾವಲು ತಂಡ ನಿಯೋಜನೆ

ಮೈಸೂರು, ಜೂ 8 – ಕೇರಳ ಗಡಿಯ ಮೂಲಕ ರಾಜ್ಯಕ್ಕೆ ನಿಫಾ ವೈರಸ್‌ ಹರಡದಂತೆ ತಡೆಯಲು ಗಡಿಯ ಬಾವಲಿ ಎಂಬಲ್ಲಿ ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಣ್ಗಾವಲು ತಂಡವೊಂದನ್ನು ನಿಯೋಜಿಸಿದೆ
ಕೇರಳದಲ್ಲಿ ನಿಫಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇಲ್ಲಿನ ಎಚ್‌ ಡಿ ಕೋಟೆ ತಾಲೂಕಿನ ಕೇರಳ –ಕರ್ನಾಟಕ ಗಡಿಯ ಬಾವಲಿ ಎಂಬಲ್ಲಿ ಆರೋಗ್ಯ ಕಾರ್ಯಕರ್ತರು ಜನರ ಮೇಲೆ ತೀವ್ರ ನಿಗಾ ಇಟ್ಟಿದ್ದಾರೆ, ನೆರೆಯ ರಾಜ್ಯದಲ್ಲಿ ಮಾರಣಾಂತಿಕ ನಿಫಾ ಸೋಂಕಿನ ಪ್ರಕರಣ ಪತ್ತೆಯಾಗಿದ್ದರಿಂದ ಆರೋಗ್ಯ ಇಲಾಖೆಯ ಸಿಬ್ಬಂದಿ ಮುಂಜಾಗೃತಾ ಕ್ರಮವಾಗಿ ಶಂಕಿತರ ಆರೋಗ್ಯ ತಪಾಸಣೆಯನ್ನು ಮಾಡುತ್ತಿದ್ದಾರೆ
ರಾಜ್ಯದ ಮೈಸೂರು ಸೇರಿದಂತೆ ಎಂಟು ಜಿಲ್ಲೆಗಳಲ್ಲಿ ಸೋಂಕಿನ ಬಗ್ಗೆ ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಗಿದೆ. ಕೇರಳದಿಂದ ಬಾವಲಿ ಮೂಲಕ ರಾಜ್ಯ ಪ್ರವೇಶಿಸುವ ಪ್ರಯಾಣಿಕರಲ್ಲಿ ಯಾವುದೇ ರೀತಿಯ ಜ್ವರ ಇದೇಯೇ ಎಂಬುದನ್ನು ಆರೋಗ್ಯ ಇಲಾಖೆಯ ಕಾರ್ಯಕರ್ತರು ತಪಾಸಣೆ ನಡೆಸುತ್ತಿದ್ದಾರೆ.

ಪ್ರವಾಸೋದ್ಯಮ ಮತ್ತು ವ್ಯವಹಾರ, ಉದ್ಯಮ ಕಾರಣಗಳಿಗಾಗಿ ಕೇರಳದಿಂದ ಹೆಚ್ಚಿನ ಜನರು ಈ ಮಾರ್ಗದಲ್ಲಿ ರಾಜ್ಯಕ್ಕೆ ಬರುತ್ತಾರೆ. ಸರ್ಕಾರದ ಮುಂದಿನ ಆದೇಶದವರೆಗೆ ಈ ತಂಡ ಬಾವಲಿ ಎಂಬಲ್ಲಿ ಠೀಕಾಣಿ ಹೂಡಲಿದ್ದು, ಜನರ ತಪಾಸಣೆ ನಡೆಸುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ

ಮೈಸೂರು ಮೃಗಾಲಯ, ಅರಮನೆ, ಚಾಮುಂಡಿ ಬೆಟ್ಟ ಸೇರಿದಂತೆ ಪ್ರಮುಖ ಪ್ರವಾಸಿ ತಾಣಗಳಲ್ಲೂ ತಪಾಸಣಾ ತಂಡವನ್ನು ಸ್ಥಾಪಿಸಲಾಗಿದೆ. ಪ್ರವಾಸ ಕೈಗೊಳ್ಳುವ ಜನರಲ್ಲಿ ನಿಫಾ ವೈರಸ್‌ ಬಗ್ಗೆ ಅರಿವು ಮೂಡಿಸುವ ಕಾರ್ಯ ನಡೆಸಲಾಗುತ್ತಿದೆ. ಪ್ರವಾಸಿಗರು ಯಾವುದನ್ನು ಮಾಡಬೇಕು, ಯಾವುದನ್ನು ಮಾಡಬಾರದು ಎಂಬುದರ ಬಗ್ಗೆ ಮಾಹಿತಿ ಇರುವ ಕೈಪಿಡಿಯನ್ನು ಜಿಲ್ಲಾ ಆರೋಗ್ಯಾಧಿಕಾರಿ ವೆಂಕಟೇಶ್ ಬಿಡುಗಡೆ ಮಾಡಿದ್ದಾರೆ

Leave a Comment