ನಿಧಿಶೋಧ’ದ ಮಾಹಿತಿ ನೀಡಿದ್ದಕ್ಕೆ ಹತ್ಯೆ?

ವಿಚಾರಣೆಗಾಗಿ ಹಲವರು ವಶಕ್ಕೆ

ಮಂಗಳೂರು, ಏ.೨೧- ನಿನ್ನೆ ಮಧ್ಯಾಹ್ನ ಪಂಚಾಯತ್ ಕಚೇರಿಯಲ್ಲೇ ನಡೆದ ಕರೋಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಎ.ಅಬ್ದುಲ್ ಜಲೀಲ್(೪೨) ಹತ್ಯೆ ಪ್ರಕರಣದ ಹಿಂದೆ ಇತ್ತೀಚೆಗೆ ನಿಧಿಶೋಧ ಪ್ರಕರಣದಲ್ಲಿ ಭಾಗಿಯಾಗಿ ಜೈಲು ಸೇರಿದ್ದ ತಂಡದ ಕೃತ್ಯವಿರುವುದಾಗಿ ಮೇಲ್ನೋಟಕ್ಕೆ ಶಂಕಿಸಲಾಗಿದೆ. ವಿಟ್ಲ-ಕರೋಪಾಡಿ ಪ್ರದೇಶ ಕೇರಳದ ಗಡಿಭಾಗವಾಗಿದ್ದು ಇಲ್ಲಿ ನಿಧಿಗಾಗಿ ಶೋಧ ನಡೆಸುವ ಪ್ರಕರಣಗಳು ಆಗಿಂದಾಗ್ಗೆ ನಡೆಯುತ್ತಲೇ ಇವೆ. ಕಳೆದ ಜ.೨೪ರಂದು ಕರೋಪಾಡಿ ಗ್ರಾಮದ ಅರಸಳಿಕೆ ನಿವಾಸಿ ವಿಘ್ನರಾಜ್ ಎಂಬವರ ಮನೆಯಲ್ಲಿ ದುಷ್ಕರ್ಮಿಗಳ ತಂಡ ನಿಧಿಗಾಗಿ ಶೋಧ ಕಾರ್ಯ ನಡೆಸಿತ್ತು. ಮನೆಮಂದಿಯನ್ನು ಕಟ್ಟಿಹಾಕಿದ್ದ ದುಷ್ಕರ್ಮಿಗಳು ನಿಧಿ ಸಿಗದೇ ಇದ್ದಾಗ ಸಿ.ಸಿ. ಕೆಮರಾದ ಡಿವಿಆರ್ ಸಹಿತ ಪರಾರಿಯಾಗಿತ್ತು. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಗೆ ವಿಘ್ನರಾಜ್ ದೂರು ನೀಡಿದ್ದರು.

ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಫೆ.೩ರಂದು ಪೊಲೀಸರು ವಶಕ್ಕೆ ಪಡೆದು ಎರಡು ಕಾರುಗಳನ್ನು ಸ್ವಾಧೀನಪಡಿಸಿಕೊಂಡಿದ್ದರು. ನಿಧಿಶೋಧದಲ್ಲಿ ಭಾಗಿಯಾಗಿದ್ದ ಪರಿಸರದ ಕೆಲವು ಮಂದಿ ಆರೋಪಿಗಳ ಬಗ್ಗೆ ನಿನ್ನೆ ಹತ್ಯೆಗೀಡಾದ ಅಬ್ದುಲ್ ಜಲೀಲ್ ಅವರು ಪೊಲೀಸರಿಗೆ ಮಾಹಿತಿ ಕೊಟ್ಟು ಅವರನ್ನು ಬಂಧಿಸುವಲ್ಲಿ ಸಹಕರಿಸಿದ್ದರು ಎಂದು ಹೇಳಲಾಗಿತ್ತು. ಈ ಬಗ್ಗೆ ಜಲೀಲ್ ಅವರ ಮೊಬೈಲ್‌ಗೆ ಮೇಲಿಂದ ಮೇಲೆ ದುಬೈ ಮತ್ತಿತರ ಕಡೆಗಳಿಂದ ಕರೆ ಬರತೊಡಗಿದ್ದು ‘ನಿನ್ನನ್ನು ಜೀವಸಹಿತ ಬಿಡುವುದಿಲ್ಲ’ ಎಂದು ಬೆದರಿಸುತ್ತಲೇ ಇದ್ದರೆನ್ನಲಾಗಿದೆ. ಜಲೀಲ್ ಅವರು ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಗೆ ದೂರನ್ನು ಕೊಟ್ಟಿದ್ದರು ಮಾತ್ರವಲ್ಲದೆ ಕಾಂಗ್ರೆಸ್‌ನ ಹಿರಿಯ ಮುಖಂಡರಿಗೂ ತಮಗೆ ಪ್ರಾಣಾಪಾಯ ಇರುವುದಾಗಿ ಹೇಳಿಕೊಂಡಿದ್ದರೆನ್ನಲಾಗಿದೆ. ಆದರೆ ಪೊಲೀಸ್ ಇಲಾಖೆ ಸಹಿತ ಪಕ್ಷದ ಹಿರಿಯರು ಅದನ್ನು ನಿರ್ಲಕ್ಷ್ಮಿಸಿದ್ದರು ಎಂಬ ಆರೋಪ ಕೇಳಿಬಂದಿದೆ. ನಿಧಿಶೋಧ ಪ್ರಕರಣದಲ್ಲಿ ಭಾಗಿಯಾಗಿ ಜೈಲುಸೇರಿದ್ದ ಕೆಲವರಿಗೆ ಎರಡು ದಿನಗಳ ಹಿಂದಷ್ಟೇ ಜಾಮೀನು ದೊರೆತು ಜೈಲಿಂದ ಹೊರಬಂದಿದ್ದು ಪೊಲೀಸರು ಅವರ ಶೋಧಕಾರ್ಯದಲ್ಲಿ ನಿರತರಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಎಂದಿನಂತೆ ಬೆಳಗ್ಗಿನಿಂದ ಮಧ್ಯಾಹ್ನದ ತನಕ ಜಲೀಲ್ ಕರೋಪಾಡಿ ಗ್ರಾ.ಪಂ. ನಲ್ಲೇ ಇರುವ ಬಗ್ಗೆ ಮಾಹಿತಿ ಪಡೆದಿದ್ದ ತಂಡವೇ ಕೃತ್ಯವೆಸಗಿರುವುದು ಸ್ಪಷ್ಟವಾಗಿದೆ. ನಿನ್ನೆಯೂ ಮಧ್ಯಾಹ್ನದ ವೇಳೆ ಕಚೇರಿಯಲ್ಲಿ ಒಬ್ಬರೇ ಇರುವ ಬಗ್ಗೆಯೂ ಪಂಚಾಯತ್ ಆವರಣದಿಂದಲೇ ಹಂತಕರಿಗೆ ಮಾಹಿತಿ ಹೋಗಿರುವ ಶಂಕೆ ವ್ಯಕ್ತವಾಗಿದೆ. ತಲವಾರಿನಿಂದ ದಾಳಿ ನಡೆಸಿದ ಆರೋಪಿಗಳು ಬೈಕ್ ಏರಿ ಪಂಚಾಯಿತಿ ರಸ್ತೆಯಿಂದ ಇಳಿದು ಒಂದು ಬೈಕ್ ಬಲ ಬದಿಯ ಪದ್ಯಾಣ-ಸುಂಕದಕಟ್ಟೆ-ಕುರಡುಪದವು ಮೂಲಕ ನೇರವಾಗಿ ಕೇರಳ ಸಂಪರ್ಕ ರಸ್ತೆಯಲ್ಲಿ ಪರಾರಿಯಾಗಿದೆ. ಇನ್ನೊಂದು ಬೈಕ್ ಎಡಬದಿಗೆ ಹೋಗುವ ಕುಡ್ಪಲ್ತಡ್ಕ-ಆನೆಕಲ್ ಮೂಲಕವಾಗಿ ಕೇರಳ ಸಂಪರ್ಕದ ರಸ್ತೆಯ ಮೂಲಕ ತೆರಳಿರುವ ಬಗ್ಗೆ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಸಚಿವ ರಮಾನಾಥ ರೈ, ಯು.ಟಿ.ಖಾದರ್ ಸಹಿತ ಕಾಂಗ್ರೆಸ್ ಮುಖಂಡರು ಮೃತರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಕರೋಪಾಡಿ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಚರ್ಚ್, ಮಸೀದಿ, ದೇವಸ್ಥಾನಗಳಲ್ಲಿ ನಡೆಯುವ ಪ್ರತಿಯೊಂದು ಕಾರ್ಯಕ್ರಮದಲ್ಲಿ ಕೈ ಜೋಡಿಸುತ್ತಿದ್ದರು. ಸದ್ಯ ನಡೆಯುತ್ತಿರುವ ಆನೆಕಲ್ಲು ಜಲದುರ್ಗ ದೇವಸ್ಥಾನದ ಬ್ರಹ್ಮಕಲಶೋತ್ಸವದ ಸಂದರ್ಭ ದೇವಸ್ಥಾನಕ್ಕೆ ತೆರಳಲು ರಸ್ತೆವಿಲ್ಲದೇ ತೊಂದರೆ ಎದುರಿಸುತ್ತಿದ್ದ ವೇಳೆ ಈ ಬಗ್ಗೆ ಸ್ಪಂದಿಸಿದ ಜಲೀಲ್ ಅವರು ಜಿಲ್ಲಾ ಉಸ್ತುವಾರಿ ಸಚಿವರ ಮೂಲಕ ಇಲ್ಲಿಗೆ ಕಾಂಕ್ರಿಟ್ ರಸ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಈ ಬಗ್ಗೆ ಬುಧವಾರ ರಾತ್ರಿ ದೇವಸ್ಥಾನದ ಧಾರ್ಮಿಕ ಸಭೆಯಲ್ಲಿ ಜಲೀಲ್ ಅವರನ್ನು ಗೌರವಿಸಲಾಗಿತ್ತು. ಇದೇ ರೀತಿಯಾಗಿ ಸರ್ವ ಧರ್ಮಿಯರ ಜತೆ ಉತ್ತಮ ಬಾಂಧವ್ಯ ಇಟ್ಟಿಕೊಂಡಿದ್ದರು ಎನ್ನಲಾಗಿದೆ.

ಸುಳಿವು ಪತ್ತೆ

ಕೊಲೆ ನಡೆದ ಸ್ಥಳ ಪರಿಶೀಲನೆ ಸಂದರ್ಭ ಕೆಲವು ಸುಳಿವುಗಳು ಸಿಕ್ಕಿದ್ದು, ೨೪ರಿಂದ ೪೮ ಗಂಟೆ ಒಳಗೆ ಆರೋಪಿಗಳನ್ನು ಬಂದಿಸುವ ಸಲುವಾಗಿ ೫ ತಂಡಗಳನ್ನು ರಚಿಸಲಾಗಿದೆ. ಪೊಲೀಸ್ ತಂಡ ಈಗಾಗಲೇ ಗಡಿಭಾಗದಲ್ಲಿ ತಂಡ ತೀವ್ರವಾದ ಶೋಧವನ್ನು ನಡೆಸುತ್ತಿದೆ. ಮಂಗಳೂರು, ಉಡುಪಿ, ಕಾರವಾರ, ಚಿಕ್ಕಮಂಗಳೂರು ಭಾಗದಲ್ಲಿ ಕೊಲೆ ಅಥವಾ ಕೊಲೆ ಪ್ರಯತ್ನದಲ್ಲಿ ಪ್ರಕರಣಗಳಲ್ಲಿ ಜೈನಿಲಿಂದ ಬೇಲ್‌ನಲ್ಲಿ ಬಂದವರು, ಕೇಸಿನಲ್ಲಿ ಶಿಕ್ಷೆಯಾಗಿ ಬಿಡುಗಡೆಯಾದವರು, ಪ್ರಕರಣದಲ್ಲಿ ಕುಲಾಸೆಯಾದವರನ್ನು ಪತ್ತೆ ಮಾಡಬೇಕು. ಮುಂದಿನ ದಿನದಲ್ಲಿ ಎಲ್ಲರನ್ನು ಜಿಲ್ಲಾ ಕೇಂದ್ರದಲ್ಲಿ ಪುನರ್ ತನಿಖೆ ನಡೆಸಬೇಕೆಂದು ಎಸ್‌ಪಿ ಹಾಗೂ ಅಡಿಶನಲ್ ಎಸ್‌ಪಿ ಅವರಿಗೆ ಆದೇಶ ನೀಡಲಾಗಿದೆ ಎಂದು ಪಶ್ಚಿಮ ವಲಯ ಐಜಿಪಿ ಪಿ.ಹರಿಶೇಖರನ್ ತಿಳಿಸಿದ್ದಾರೆ.

Leave a Comment