ನಿಜಾಮುದ್ದೀನ್ ಧಾರ್ಮಿಕ ಸಭೆ – ಜಿಲ್ಲೆಯ ಇಬ್ಬರು ಪಾಲ್ಗೊಳ್ಳುವಿಕೆ ಖಚಿತ

* ಪೊಲೀಸ್ ನೆರವಿನೊಂದಿಗೆ ಆರೋಗ್ಯ ಇಲಾಖೆ ಸಿಬ್ಬಂದಿಯಿಂದ ತಪಾಸಣೆ
ರಾಯಚೂರು.ಏ.02- ದೇಶದಲ್ಲಿ ಸಂಚಲನ ಮೂಡಿಸಿದ ದೆಹಲಿಯ ನಿಜಾಮುದ್ದೀನ್ ಧರ್ಮ ಸಭೆಯ ಸಂಬಂಧ ಈಗ ಜಿಲ್ಲೆಗೂ ವಿಸ್ತರಿಸಿದೆ.
ದೆಹಲಿಯ ನಿಜಾಮುದ್ದೀನ್ ಪ್ರದೇಶದ ಅಲಾಮಿ ಮಾರ್ಕಜ್ ಬಂಗ್ಲೇವಾಲಿ ಮಸ್ಜೀದಿ ಮಾ.13 ರಿಂದ 15 ರವರೆಗೆ ನಡೆದ ಧಾರ್ಮಿಕ ಸಮಾವೇಶದಲ್ಲಿ ನೂರಾರು ವಿದೇಶಿಗರು ಹಾಗೂ ದೇಶಿಯ ಜನರು ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಈ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡವರನ್ನು ಬಹುತೇಕರಿಗೆ ಈಗ ಕೊರೊನಾ ಪಾಸಿಟಿವ್ ಖಚಿತವಾಗಿದ್ದರಿಂದ ದೇಶದಲ್ಲಿ ಈಗ ಗಂಭೀರದ ವಾತಾವರಣ ನಿರ್ಮಾಣವಾಗಿದೆ.
ಈ ಧಾರ್ಮಿಕ ಸಭೆಗೆ ಜಿಲ್ಲೆಯ ಇಬ್ಬರು ಪಾಲ್ಗೊಂಡಿರುವ ಅಂಶ ಈಗ ಬೆಳಕಿಗೆ ಬಂದಿದ್ದು, ಜಿಲ್ಲೆಯಲ್ಲಿಯೂ ಕೊರೊನಾ ವೈರಸ್ ಭೀತಿ ತಲೆಯೆತ್ತುವಂತೆ ಮಾಡಿದೆ. ಮಸ್ಕಿ ಹಾಗೂ ಮೆದಕಿನಾಳ ಗ್ರಾಮದ ಇಬ್ಬರು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಈಗ ಖಚಿತಪಟ್ಟಿದೆ. ಮಸ್ಕಿಯ ಸಾದೀಕ್ ಪಾಷಾ, ಮೆದಕಿನಾಳ ಶೇಖ್ ಹುಸೇನ್ ಎಂಬುವವರು ಈ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದರೆಂದು ಖಚಿತಪಟ್ಟಿದೆ.
ಧಾರ್ಮಿಕ ಸಭೆ ನಂತರ ತಮ್ಮ ತಮ್ಮ ಗ್ರಾಮಗಳಿಗೆ ಆಗಮಿಸಿದ ಅವರು, ಸಾಮಾನ್ಯವಾಗಿ ಎಲ್ಲಾರೊಂದಿಗೆ ಒಡನಾಟದಲ್ಲಿದ್ದರು. ನಿಜಾಮುದ್ದೀನ್ ಧರ್ಮಸಭೆ ಪಾಲ್ಗೊಂಡ ಅನೇಕರಲ್ಲಿ ಕೊರೊನಾ ವೈರಸ್ ಹರಡುವಿಕೆ ಕಾರಣದಿಂದ ಈ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡವರ ಮೇಲೆ ನಿಗಾ ತೀವ್ರಗೊಳಿಸಲಾಗಿದೆ. ಜಿಲ್ಲೆಯಿಂದಲೂ ಕೆಲವರು ಈ ಸಭೆಗೆ ಪಾಲ್ಗೊಂಡಿದ್ದರು ಎನ್ನುವ ಖಚಿತ ಮಾಹಿತಿ ಹಿನ್ನೆಲೆ, ಪೊಲೀಸ್ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಮಸ್ಕಿ ಮತ್ತು ಮೆದಕಿನಾಳ ಗ್ರಾಮಗಳಿಗೆ ತೆರಳಿ, ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದ ಸಾದೀಕ್ ಪಾಷಾ ಮತ್ತು ಶೇಖ್ ಹುಸೇನ್ ವಿಚಾರಿಸಿ ಪರಿಶೀಲಿಸಿದರು.
ಮಸ್ಕಿಯಿಂದ ಈ ಇಬ್ಬರು ಗಂಗಾವತಿಗೆ ತೆರಳಿ, ಅಲ್ಲಿಂದ ಹೊಸಪೇಟೆ ನಂತರ ಹೈದ್ರಾಬಾದ್ ಮುಖಾಂತರ ದೆಹಲಿಗೆ ಪ್ರಯಾಣ ಬೆಳೆಸಿದ್ದರು. ದೆಹಲಿಯಿಂದ ಹಿಂದಿರುಗುವಾಗ ರೈಲು ಮುಖಾಂತರ ಹುಬ್ಬಳ್ಳಿಗೆ ಆಗಮಿಸಿ, ಅಲ್ಲಿಂದ ಗಂಗಾವತಿ, ಗಂಗಾವತಿಯಿಂದ ಮಸ್ಕಿಗೆ ಆಗಮಿಸಿದ್ದರು. ಕಳೆದ 15 ದಿನಗಳಿಂದ ಇವರ ಒಡನಾಟವನ್ನು ಈಗ ಪರಿಶೀಲಿಸಲಾಗುತ್ತದೆ. ಉಭಯರ ಆರೋಗ್ಯ ಸ್ಥಿತಿಯ ಬಗ್ಗೆ ತಪಾಸಣೆ ಮಾಡಲಾಯಿತು.
ದೆಹಲಿಯ ನಿಜಾಮುದ್ದೀನ್ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಂತಹ ಅನೇಕರು ಕೊರೊನಾ ಸೋಂಕು ಕಂಡು ಬಂದಿರುವುದರಿಂದ ಈ ಇಬ್ಬರ ಮಾದರಿಗಳನ್ನು ತಪಾಸಣೆಗೆ ಕಳುಹಿಸುವ ಸಾಧ್ಯತೆಗಳಿವೆ. ಈಗಾಗಲೇ ನಗರದಲ್ಲಿ ಧಾರ್ಮಿಕ ಸಭೆ ನಡೆದ ಸಂದರ್ಭದಲ್ಲಿ ದೆಹಲಿ ಪ್ರವಾಸದಲ್ಲಿದ್ದ ಏಳು ಜನರನ್ನು ಆರೋಗ್ಯ ದಿಗ್ಬಂಧನಾದಲ್ಲಿರಿಸಲಾಗಿದೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಇದುವರೆಗೆ ಯಾವುದೇ ಕೊರೊನಾ ಪತ್ತೆಯಾಗಿಲ್ಲ.
ನಿಜಾಮುದ್ದೀನ್ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಈ ಇಬ್ಬರ ಬಗ್ಗೆ ಈಗ ಶಂಕೆ ತೀವ್ರಗೊಂಡಿದೆ. ಓಪೆಕ್ ಆಸ್ಪತ್ರೆಯಲ್ಲಿ ವಿವಿಧ ಕಾರಣಕ್ಕೆ ದಾಖಲಾಗಿದ್ದ 11 ಜನರ ಮಾದರಿ ವರದಿ ಬಂದಿದ್ದು, ಯಾವುದೇ ಕೊರೊನಾ ಪ್ರಕರಣ ಪತ್ತೆಯಾಗಿಲ್ಲ. ಇಂದು ಮೂರು ಜನರ ಮಾದರಿ ವರದಿಯೂ ಲಭ್ಯವಾಗಿದೆ. ಎಲ್ಲಾ ಪ್ರಕರಣಗಳಲ್ಲೂ ನೆಗೆಟಿವ್ ಬಂದ ಕಾರಣ ಜಿಲ್ಲೆ ಇಲ್ಲಿವರೆಗೂ ಕೊರೊನಾ ಮುಕ್ತವಾಗಿ ಉಳಿದುಕೊಂಡಿದೆ.

Leave a Comment