ನಿಜಾಮುದ್ದೀನ್‌ ಸಮಾವೇಶದಲ್ಲಿ ಭಾಗವಹಿಸಿದ್ದ 10 ಮಂದಿಗೆ ಕ್ವಾರಂಟೈನ್​

ತುಮಕೂರು, ಏ. ೧- ದೆಹಲಿಯಲ್ಲಿ ಇತ್ತೀಚೆಗೆ ನಡೆದ ಮುಸ್ಲಿಂ ಧಾರ್ಮಿಕ ಸಮಾವೇಶದಲ್ಲಿ ಭಾಗವಹಿಸಿದ್ದ ನಗರದ 10 ಮಂದಿಯನ್ನು ಒಂದೆಡೆ ಕ್ವಾರಂಟೈನ್‌ನಲ್ಲಿ ಇಡಲಾಗಿದ್ದು, ಎಲ್ಲರನ್ನೂ ಒಂದು ದೊಡ್ಡ ಕೋಣೆಯಲ್ಲಿರಿಸಿ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಲಾಗಿದೆ.

13 ಮಂದಿ ಒಟ್ಟಿಗೆ ತುಮಕೂರು ರೈಲ್ವೆ ನಿಲ್ದಾಣದಿಂದ ದೆಹಲಿಗೆ ತೆರಳಿದ್ದರು. ಅಲ್ಲಿ ಮೂರು ದಿನಗಳ ಕಾಲ ನಡೆದ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದರು. ಅದರಲ್ಲಿ  ನಗರದ 10 ಮಂದಿ ಹಾಗೂ ನಾಗಮಂಗಲ ಮತ್ತು ತಿಪಟೂರು ಪಟ್ಟಣದ ತಲಾ ಒಬ್ಬರಿದ್ದಾರೆ.

ಈಗಾಗಲೇ 10 ಮಂದಿಯ ರಕ್ತ ಮತ್ತು ಕಫದ ಪರೀಕ್ಷೆ ನಡೆಸಲಾಗಿದೆ. ಫಲಿತಾಂಶ ನೆಗೆಟಿವ್ ಬಂದಿದೆ. 3 ದಿನಗಳ ಕಾಲ ದೆಹಲಿಯಲ್ಲಿ ನಡೆದ ಸಭೆಯಲ್ಲಿ 2 ಸಾವಿರ ಜನ ಭಾಗವಹಿಸಿದ್ದರು ಎಂದು ತಿಳಿದು ಬಂದಿದೆ.

ದೆಹಲಿಯಲ್ಲಿದ್ದಾಗ ಯಾರೂ ಅನಾರೋಗ್ಯ ಪೀಡಿತರಾಗಿರೋದು ಕಂಡು ಬಂದಿರಲಿಲ್ಲ. ನಾವೆಲ್ಲರೂ ದೆಹಲಿಗೆ ಹೋಗುವಾಗ ಮತ್ತು ವಾಪಸ್ ಬರುವಾಗ ಕೂಡ ಆರಾಮವಾಗಿದ್ದೆವು. ಅಲ್ಲದೆ ಕೊರೊನಾ ಸೋಂಕಿನಿಂದ ಮೃತಪಟ್ಟಿರುವ ಸಿರಾದ ವೃದ್ಧರು ಕೂಡ ವಾಪಸ್ ಬರುವ ಸಂದರ್ಭದಲ್ಲಿ ಆರೋಗ್ಯವಾಗಿದ್ದರು ಎಂದು ವ್ಯಕ್ತಿಯೊಬ್ಬರು ತಿಳಿಸಿದ್ದಾರೆ.

ದೆಹಲಿಯ ನಿಜಾಮುದ್ದೀನ್ ಮಸೀದಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದ ಸಿರಾದ ವೃದ್ಧರೊಬ್ಬರು ಈಗಾಗಲೇ ಕೊರೊನಾ ಸೋಂಕಿಗೆ ಬಲಿಯಾಗಿರುವುದರಿಂದ ಈ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದವರಿಗೆ ಸೋಂಕು ಹರಡಿರುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.

Leave a Comment