ನಿಗದಿತ ಗುರಿ ಸಾಧಿಸದಿದ್ದರೆ ಮೊಕದ್ದಮೆ ದಾಖಲು- ಜಿಲ್ಲಾಧಿಕಾರಿ

ಧಾರವಾಡ, ಫೆ.28: ಕರ್ನಾಟಕ ಸರ್ಕಾರದ ವಿಶೇಷ ಘಟಕ ಯೋಜನೆ (ಎಸ್‍ಸಿಪಿ) ಹಾಗೂ ಗಿರಿಜನ ಉಪಯೋಜನೆ (ಟಿಎಸ್‍ಪಿ) ಗಳಡಿ ವಿವಿಧ 37 ಇಲಾಖೆಗಳು ಜಿಲ್ಲೆಯಲ್ಲಿ ಕಳೆದ ಜನವರಿ ಅಂತ್ಯದವರೆಗೆ ಶೇ.59 ರಷ್ಟು ಪ್ರಗತಿ ಸಾಧಿಸಿವೆ. ಪ್ರಸಕ್ತ ಆರ್ಥಿಕ ವರ್ಷದ ಮುಕ್ತಾಯದೊಳಗಾಗಿ ಅಂದರೆ ಮಾರ್ಚ್ ಅಂತ್ಯದೊಳಗೆ ಬಾಕಿ ಇರುವ ಎಲ್ಲ ಕಾರ್ಯಗಳನ್ನು ಪೂರ್ಣಗೊಳಿಸಿ ನಿಗದಿತ ಗುರಿ ಸಾಧಿಸಬೇಕು. ವಿಫಲವಾದರೆ ಅಂತಹ ಅಧಿಕಾರಿಗಳ ವಿರುದ್ಧ ಎಸ್‍ಸಿಪಿ ಟಿಎಸ್‍ಪಿ ಕಾಯ್ದೆಯಡಿ ಮೊಕದ್ದಮೆ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ 2019-20ನೇ ಸಾಲಿನ ಜನವರಿ ಅಂತ್ಯದವರೆಗೆ ವಿವಿಧ ಇಲಾಖೆಗಳು ಎಸ್‍ಸಿಪಿ ಟಿಎಸ್‍ಪಿ ಯೋಜನೆಯಡಿ ಕೈಗೊಂಡ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರಸಕ್ತ ಸಾಲಿಗೆ ಎಸ್‍ಸಿಪಿ ಯೋಜನೆಯಡಿ 137 ಕೋಟಿ ರೂ. ಅನುದಾನ ನಿಗದಿಗೊಳಿಸಿ 1,62,720 ಕಾರ್ಯಕ್ರಮಗಳ ಗುರಿ ನೀಡಲಾಗಿತ್ತು. ಅದರಲ್ಲಿ 103 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, 62.67ಕೋಟಿ ರೂ. ವೆಚ್ಚವಾಗಿದೆ. 78846.33 ಭೌತಿಕ ಸಾಧನೆ ಮಾಡಿ ಶೇ.61 ರಷ್ಟು ಪ್ರಗತಿ ಸಾಧಿಸಲಾಗಿದೆ.
ಟಿಎಸ್‍ಪಿ ಯೋಜನೆಯಡಿ 53 ಕೋಟಿ ರೂ. ಅನುದಾನ ನಿಗದಿಗೊಳಿಸಿ 105507.2 ಕಾರ್ಯಕ್ರಮಗಳ ಗುರಿ ನೀಡಲಾಗಿತ್ತು. ಅದರಲ್ಲಿ 40ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, 22ಕೋಟಿ ರೂ. ವೆಚ್ಚವಾಗಿದೆ. 54883 ಭೌತಿಕ ಸಾಧನೆ ಮಾಡಿ ಶೇ.54 ರಷ್ಟು ಪ್ರಗತಿ ಸಾಧಿಸಲಾಗಿದೆ.
ಎಸ್‍ಸಿಪಿ ಟಿಎಸ್‍ಪಿ ಎರಡೂ ಸೇರಿ ಒಟ್ಟು 190 ಕೋಟಿ ರೂ. ಅನುದಾನ ನಿಗದಿಗೊಳಿಸಿ 268227 ಕಾರ್ಯಕ್ರಮ ಗುರಿ ನೀಡಲಾಗಿತ್ತು. ಅದರಲ್ಲಿ 143.96ಕೋಟಿ ರೂ.ಅನುದಾನ ಬಿಡುಗಡೆಯಾಗಿದ್ದು, 84ಕೋಟಿ ರೂ. ವೆಚ್ಚವಾಗಿದೆ. 133729 ಭೌತಿಕ ಸಾಧನೆ ಮಾಡಿ ಒಟ್ಟು ಶೇ.59 ರಷ್ಟು ಪ್ರಗತಿ ಸಾಧಿಸಲಾಗಿದೆ.

ಬರುವ 15 ರಿಂದ 20 ದಿನಗಳಲ್ಲಿ ಬಾಕಿ ಇರುವ ಎಲ್ಲ ಕಾರ್ಯಗಳನ್ನು ಪೂರ್ಣಗೊಳಿಸಿ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಕಲ್ಯಾಣಕ್ಕೆ ಮೀಸಲಿಟ್ಟಿರುವ ಅನುದಾನದ ಸದ್ಬಳಕೆ ಮಾಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಹಣ ವೆಚ್ಚವಾಗದೇ ಉಳಿಯಬಾರದು. ಸರ್ಕಾರದ ಉದ್ದೇಶ ಈಡೇರಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಮುತುವರ್ಜಿಯಿಂದ ಕಾರ್ಯನಿರ್ವಹಿಸಬೇಕು. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯು ಎಸ್‍ಸಿಪಿ ಟಿಎಸ್‍ಪಿ ಅನುದಾನ ಬಳಕೆಗೆ ಹೆಚ್ಚು ಒತ್ತು ನೀಡಬೇಕು. ಧಾರವಾಡದಲ್ಲಿರುವ    ಡಾ: ಬಿ.ಆರ್. ಅಂಬೇಡ್ಕರ್ ಭವನದ ದುರಸ್ತಿ ಮತ್ತು ಅಲ್ಲಿನ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರಕ್ಕೆ ಈ ಯೋಜನೆಯಡಿ ಪ್ರತಿ ವರ್ಷ ಅನುದಾನ ಮೀಸಲಿಡಬೇಕು ಎಂದು ಸೂಚಿಸಿದರು.

ಸಮಾಜ ಕಲ್ಯಾಣ ಇಲಾಖೆ ಜಂಟಿನಿರ್ದೇಶಕ ಎನ್.ಆರ್. ಪುರುಷೋತ್ತಮ ಮಾತನಾಡಿ, ಕಳೆದ ಎರಡು ವರ್ಷಗಳ ಅವಧಿಯಲ್ಲಿ ಎಸ್‍ಸಿಪಿ ಟಿಎಸ್‍ಪಿ ಯೋಜನೆಯಡಿ ಜಿಲ್ಲೆಯ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಕಾಲೋನಿಗಳಲ್ಲಿ ನಿರ್ಮಿಸಿರುವ ಕಾಂಕ್ರೀಟ್ ರಸ್ತೆಗಳ ಸಮೀಕ್ಷೆ ಕಾರ್ಯಕ್ಕೆ ಧಾರವಾಡ ಹಾಗೂ ಬಳ್ಳಾರಿ ಜಿಲ್ಲೆಗಳನ್ನು ಸರ್ಕಾರದಿಂದ ಪ್ರಾಯೋಗಿಕವಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು ಸಮೀಕ್ಷೆ ಸಮಯದಲ್ಲಿ ಎಲ್ಲ ಕಾಮಗಾರಿಗಳ ಜಿಪಿಎಸ್ ಮಾಡಿಸಿ ಜಿಯೋ ಟ್ಯಾಗಿಂಗ್ ಮಾಡಿದರೆ ಕಾಮಗಾರಿಗಳ ಪುನರಾವರ್ತನೆ ತಡೆಯಲು ಸುಲಭವಾಗುತ್ತದೆ ಎಂದು ಸಲಹೆ ನೀಡಿದರು.
ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ವಿನಾಯಕ ಪಾಲನಕರ, ಹೆಸ್ಕಾಂ ಅಧೀಕ್ಷಕ ಅಭಿಯಂತರ ಎಂ.ಆರ್. ಶಾನಭಾಗ್, ಡಿಡಿಪಿಐ ಎಂ.ಎಲ್. ಹಂಚಾಟೆ, ಜಂಟಿ ಕೈಗಾರಿಕಾ ನಿರ್ದೇಶಕ ಮೋಹನ ಭರಮಕ್ಕನವರ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Comment