ನಿಖರ ಫಲಿತಾಂಶ 1 ಕೋಟಿ ಬಹುಮಾನ

ಬೆಂಗಳೂರು, ಮೇ ೧೬- ಚುನಾವಣಾ ಭವಿಷ್ಯ ಹೇಳುವ ಜ್ಯೋತಿಷ್ಯಗಳು ಫಲಿತಾಂಶದ ಅಂಕಿಅಂಶಗಳನ್ನು ಮುಂಚಿತವಾಗಿಯೇ ನಿಖರವಾಗಿ ಹೇಳಿದರೆ ಅಂತಹ ಜ್ಯೋತಿಷ್ಯಗಳಿಗೆ 1 ಕೋಟಿ ರೂ. ಬಹುಮಾನ ನೀಡುವುದಾಗಿ ಅಖಿಲ ಕರ್ನಾಟಕ ವಿಚಾರವಾದಿ ಸಂಘ ಸವಾಲು ನೀಡಿದೆ.

ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಎ.ಎಸ್. ನಟರಾಜ ಅವರು ಇತ್ತೀಚೆಗೆ ಭವಿಷ್ಯ ಹೇಳುವ ಜ್ಯೋತಿಷ್ಯಗಳ ಹಾವಳಿ ಹೆಚ್ಚಾಗಿದ್ದು, ಇದರಿಂದ ಜನರಿಗೆ ಜ್ಯೋತಿಷ್ಯಗಳು ಹೇಳುವ ವಿಷಯಗಳ ಸತ್ಯಾ ಸತ್ಯತೆಗಳ ಬಗ್ಗೆ ಅನುಮಾನ ಮೂಡಿದೆ ಎಂದ ಅವರು ಚುನಾವಣಾ ಸಂದರ್ಭದಲ್ಲಿ ಕೆಲವು ಜ್ಯೋತಿಷ್ಯಗಳು ಮಾಧ್ಯಮದ ಮೂಲಕ ಇಂತಹ ಪಕ್ಷಗಳು, ಇಂತಹ ವ್ಯಕ್ತಿಗಳು ಗೆಲ್ಲುತ್ತಾರೆ ಎಂದು ಹೇಳುತ್ತಾ ಜನರನ್ನು ಮೌಢ್ಯದ ಕಡೆಗೆ ಕರೆದೊಯ್ಯುತ್ತಿರುವುದು ಸರಿಯಲ್ಲ ಎಂದು ಆರೋಪಿಸಿದರು.

2019ರ ಲೋಕಸಭಾ ಚುನಾವಣೆಯಲ್ಲಿ ದೇಶದ 543 ಲೋಕಸಭಾ ಕ್ಷೇತ್ರಗಳಲ್ಲಿ ಯಾವ ಪಕ್ಷದ ಅಭ್ಯರ್ಥಿ ಗೆಲ್ಲುತ್ತಾರೆ ಮತ್ತು ಎಷ್ಟು ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂಬುದರ ಬಗ್ಗೆ ಅಂಕಿ ಅಂಶಗಳ ಸಮೇತ ಮೇ. 20ರ ಒಳಗೆ ನಮ್ಮ ಸಂಘಕ್ಕೆ 10 ಸಾವಿರ ಭದ್ರತಾ ಠೇವಣಿಗಳ ಮೂಲಕ ವರದಿ ಸಲ್ಲಿಸಬೇಕು. ಈ ವರದಿಯನ್ನು ಕೂಲಂಕುಶವಾಗಿ ಪರಿಶೀಲಿಸಿ ಯಾವ ಜ್ಯೋತಿಷಿ ನಿಖರವಾದ ಫಲಿತಾಂಶದ ವರದಿ ನೀಡಿರುತ್ತಾರೆ ಅಂತಹವರಿಗೆ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ 1 ಕೋಟಿ ರೂ. ಬಹುಮಾನ ನೀಡಲು ಸಂಘ ನಿರ್ಧರಿಸಿದೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಸಚಿವೆ ಲಲಿತಾ ನಾಯಕ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಜ್ಯೋತಿಷ್ಯಗಳ ಹಾವಳಿ ದೇಶದಲ್ಲಿ ಹೆಚ್ಚಾಗಿದೆ. ಜನರನ್ನು ಮೂಢನಂಬಿಕೆಗೆ ತಳ್ಳಿ ಹಣ ಸಂಪಾದಿಸುವ ದಂಧೆ ಇದಾಗಿದ್ದು, ಈ ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರವನ್ನು ನಿಷೇಧಿಸುವುದು ಅಗತ್ಯವಿದೆ ಎಂದರು.
ಜನರಲ್ಲಿ ಭಯ ಹಾಗೂ ಆಸೆ ಹುಟ್ಟಿಸುವ ಜ್ಯೋತಿಷ್ಯಗಳು ಜನರನ್ನು ಶೋಷಣೆಗೆ ಒಳಪಡಿಸಿದ್ದಾರೆ. ಮೂಢನಂಬಿಕೆ ಆಧಾರದಲ್ಲಿ ಜನರನ್ನು ವಂಚಿಸುವ ಜ್ಯೋತಿಷ್ಯಗಳನ್ನು ನಂಬಬೇಡಿ ಎಂದು ಮನವಿ ಮಾಡಿದ ಅವರು ಯಾವುದೇ ವ್ಯಕ್ತಿ ನಿಖರವಾಗಿ ಚುನಾವಣಾ ಫಲಿತಾಂಶದ ನಿಖರವಾದ ಅಂಕಿ ಅಂಶಗಳನ್ನು ಫಲಿತಾಂಶ ಪ್ರಕಟವಾಗುವ ಮುನ್ನ ತಿಳಿಸುವ ಸಾಧ್ಯವೇ ಇಲ್ಲ ಎಂದು ಪ್ರತಿಪಾದಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾನವ ಹಕ್ಕುಗಳ ಹೋರಾಟಗಾರರಾದ ನರಸಿಂಹಮೂರ್ತಿ, ಕಾರ್ಯದರ್ಶಿ ನಾಗೇಶ ಅರಳಕುಟ್ಟಿ ಹಾಜರಿದ್ದರು.

Leave a Comment