ನಾವು ಸತ್ತ ಮೇಲೆ ಬರಬೇಕಿತ್ತು….. ಸಂಸದ ಹೆಗಡೆಗೆ ರೈತರ ಮಂಗಳಾರತಿ

ಮುಂಡಗೋಡ, ಆ 13- ಈಗೇಕೆ ಬಂದಿದ್ದೀರಿ… ನಾವು ಸತ್ತ ಮೇಲೆ ನಮ್ಮ ಹೆಣ ನೋಡಲು ಬರಬೇಕಾಗಿತ್ತು ಎಂದು ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆಗೆ ರೈತರು ಸೇರಿದಂತೆ ಸಾರ್ವಜನಿಕರು ಮಹಾಮಂಗಳಾರತಿ ಮಾಡಿದ ಘಟನೆ ತಾಲೂಕಿನ ಚಿಗಳ್ಳಿ-ಕಾತೂರನಲ್ಲಿಂದು ಸಂಭವಿಸಿದೆ.
ನಿನ್ನೆ ಮಧ್ಯಾಹ್ನ ಮಹಾಮಳೆಯಿಂದಾಗಿ ತಾಲೂಕಿನ ಚಿಗಳ್ಳಿ ಡ್ಯಾಂ ಒಡೆದು ಅಪಾರ ಪ್ರಮಾಣದ ನೀರು ನೂರಾರು ಎಕರೆ ಜಮೀನು ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಿಗೆ ನುಗ್ಗಿತ್ತು.
ಕೋಟ್ಯಾಂತರ ರೂ. ಬೆಳೆ ನಾಶ ಸೇರಿದಂತೆ ರೈತರ ಬಾಳಿಗೆ ದೀಪವಾಗಿದ್ದ ಚಿಗಳ್ಳಿ ಡ್ಯಾಂ ಒಡೆದು ಅವರ ಬದುಕನ್ನು ಕತ್ತಲಲ್ಲಿ ನೂಕಿತ್ತು. ಈ ಸುದ್ದಿ ತಿಳಿಯುತ್ತಿದ್ದಂತೆಯೇ ಇಂದು ಪರಿಸ್ಥಿತಿ ಅವಲೋಕನಕ್ಕೆ ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ ಸ್ಥಳಕ್ಕೆ ಭೇಟಿ ನೀಡಿದ್ದರು.
ಈ ಸಂದರ್ಭದಲ್ಲಿ ಸಂಸದರನ್ನು ತೀವ್ರ ತರಾಟೆಗೆ ತೆಗೆದುಕೊಂಡ ರೈತರು, ಸಂಸದರಾಗಿ ಆಯ್ಕೆಯಾದ ನಂತರ ಮೊಟ್ಟಮೊದಲ ಬಾರಿಗೆ ಅದು ಡ್ಯಾಂ ಒಡೆದಿದೆ ಎಂಬ ನೆಪದಿಂದ ಇಲ್ಲಿಗೆ ಬಂದಿದ್ದೀರೇ ಹೊರತು ನಮ್ಮ ಸಂಕಷ್ಟಗಳನ್ನು ಕೇಳಲು ಅಲ್ಲ, ಈಗಲಾದರೂ ಏಕೆ ಬಂದಿದ್ದೀರಿ.. ನಾವು ಸತ್ತ ಮೇಲೆ ನಮ್ಮ ಹೆಣ ನೋಡಲು ಬೇರಬೇಕಾಗಿತ್ತು ಎಂದು ನೋವು ಭರಿತ ಆಕ್ರೋಶದ ನುಡಿಗಳನ್ನು ಹಿಂದುಮುಂದೆ ಎನ್ನದೇ ಸಂಸದರಿಗೆ ಮಾತನಾಡಿದರು.
ರೈತರ ಈ ಪರಿಯ ಆಕ್ರೋಶ ಭರಿತ ಮಾತುಗಳಿಂದ ಸಂಸದ ಅನಂತಕುಮಾರ ಹೆಗಡೆ ಕೆಲಕಾಲ ದಿಗ್ಭ್ರಾಂತರಾಗಿ ಏನು ಮಾತನಾಡಬೇಕು ಎಂಬುದೇ ತೋಚದೆ ಕಕ್ಕಾಬಿಕ್ಕಿಗೊಂಡರು.
ನೂರಾರು ಸಾರ್ವಜನಿಕರು ಮತ್ತು ರೈತರು ಬಾಯಿಗೆ ಬಂದಂತೆ ಸಂಸದರನ್ನು ತರಾಟೆಗೆ ತೆಗೆದುಕೊಂಡು, ಬದುಕು ಮೂರಾಬಟ್ಟೆಯಾದ ನಂತರ ಎಲ್ಲಾ ಮುಗಿದ ನಂತರ ಬಂದಿರುವುದು ನಿಮ್ಮ ಹುದ್ದೆಗೆ ಘನತೆ ತರುತ್ತದೆಯೇ ಎಂದು ಪ್ರಶ್ನಿಸುತ್ತಲೇ ಇದ್ದರು.
ರೈತರ ಆಕ್ರೋಶ ಮತ್ತಷ್ಟು ಭುಗಿಲುಗೊಳ್ಳುವ ಮುನ್ನವೇ ಪೊಲೀಸರು ಮಧ್ಯೆ ಪ್ರವೇಶಿಸಿ ವಾತಾವರಣವನ್ನು ತಿಳಿಗೊಳಿಸಿದರು.

Leave a Comment