ನಾವು ಮಾಡಿದ ತಪ್ಪು ನೀವು ಮಾಡಬೇಡಿ… ಪ್ಲೀಜ್ ಇಟಲಿ ಪ್ರಜೆಯ ಭಾವುಕ ಪತ್ರ ವೈರಲ್

 

ಬೆಂಗಳೂರು, ಮಾ 21- ಕೊರೊನಾ ವೈರಸ್ ಇಟಲಿಯಲ್ಲಿ ಮರಣಮೃದಂಗ ಬಾರಿಸಿದೆ. ಸ್ಮಶಾನದಂತಾಗಿರುವ ಅಲ್ಲಿನ ಪರಿಸ್ಥಿತಿ ಬಗ್ಗೆ ಇಟಲಿಯ ಪ್ರಜೆ ಬರೆದಿರುವ ಭಾವನತ್ಮಾಕ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ದೇಶದಲ್ಲಿ ಕೆಲವರು ಈ ಕೊರೊನಾ ವೈರಸ್ ಬಗ್ಗೆ ನಿರ್ಲಕ್ಷ್ಯ ಭಾವ ಹೊಂದಿದ್ದಾರೆ. ನಮಗೆ ಹೇಗೆ ವೈರಸ್ ತಗುಲಿದೆ ಎಂದು ಕೇರ್ ಮಾಡದೇ ಓಡಾಡುತ್ತಿದ್ದಾರೆ. ಹಾಗಾಗಿ ಕರ್ನಾಟಕ ಸೇರಿ ದೇಶದ ವಿವಿಧೆಡೆ ೨೫೮ ಪ್ರಕರಣಗಳು ಪತ್ತೆಯಾಗಿದೆ. ಹಾಗಾಗಿ ಇನ್ನು ಮುಂದೆಯಾದರೂ ಎಚ್ಚೆತ್ತುಕೊಳ್ಳುವಂತೆ ಇಟಲಿ ಪ್ರಜೆ ಬರೆದಿರುವ ಈ ಪತ್ರ ಬುದ್ದಿ ಹೇಳುವಂತಿದೆ. ಕಳೆದ ಒಂದು ವಾರದಿಂದ ಇಟಲಿಯಲ್ಲಿ ಸಾವಿನ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿದ್ದು, ಡೆಡ್ಲಿ ಕೊರೊನಾ ವೈರಸ್ ನಿಂದಾಗಿ ಇಟಲಿಯೊಂದಲ್ಲೇ ಇಲ್ಲಿಯವರೆಗೆ ೪,೦೩೨ ಮಂದಿ ಜೀವ ಕಳೆದುಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಇಟಲಿಯ ಪ್ರಜೆ ಬರೆದಿರುವ ಪತ್ರ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಎಲ್ಲೆಡೆ ಜನರಿಗೆ ಆತಂಕ ಆವರಿಸಿಕೊಂಡಿದೆ.

itali-letter
ಇದು ಪ್ರಪಂಚದ ಅಂತ್ಯ……ಎಲ್ಲರಿಗೂ ಶಾಂತಿ…
ನಾನು ಇಟಲಿಯ ಮಿಲನ್ ಎಂಬ ನಗರದಲ್ಲಿ ವಾಸಿಸುತ್ತಿದ್ದೇನೆ. ಇಲ್ಲಿ ಈ ಕಷ್ಟದ ದಿನಗಳಲ್ಲಿ ಜೀವನ ಹೇಗಿದೆ ಎಂದು ನಾನು ನಿಮಗೆ ಹೇಳುತ್ತೇನೆ. ಏಕೆಂದರೆ ನಮ್ಮ ತಪ್ಪುಗಳಿಂದ ನೀವು ಜೀವನ ಪಾಠ ಕಲಿಯಬೇಕು ಎಂದು ನಾನು ಭಾವಿಸುತ್ತೇನೆ. ನಾವು ಮನೆಯಲ್ಲಿದ್ದೇವೆ, ಬೀದಿಗಿಳಿಯಲು ನಮಗೆ ಅನುಮತಿ ಇಲ್ಲ. ಯಾರಾದರೂ ಮನೆಯಿಂದ ಹೊರಗೆ ಹೋದರೆ ಅವರನ್ನು ಪೊಲೀಸರು ಬಂಧಿಸುತ್ತಾರೆ. ವ್ಯಾಪಾರ ವಹಿವಾಟು, ಮಾಲ್ ಗಳು ಇತ್ಯಾದಿಗಳನ್ನು ಮುಚ್ಚಲಾಗಿದೆ, ಬೀದಿಗಳು ನಿರ್ಜನವಾಗಿದೆ. ಇದು ಪ್ರಪಂಚದ ಅಂತ್ಯ ಎಂಬ ಭಾವನೆಯಾಗುತ್ತಿದೆ.

italy-letter
ನೆಮ್ಮದೊಯಿಂದ ಜೀವಿಸುತ್ತಿದ್ದ ದೇಶವಾದ ಇಟಲಿ ಕೆಲವೇ ಸೆಕೆಂಡುಗಳಲ್ಲಿ ಕರಾಳ ದೇಶದಂತೆ ಮಾರ್ಪಟ್ಟಿದೆ. ಇಲ್ಲಿನ ಜನರು ದುಃಖ, ಆತಂಕ ಮತ್ತು ಗೊಂದಲಕ್ಕೊಳಗಾಗಿದ್ದಾರೆ. ಈ ದುಃಸ್ವಪ್ನವು ಯಾವಾಗ ಕೊನೆಗೊಳ್ಳುತ್ತದೆ ಎಂದು ನಮಗೆ ತಿಳಿದಿಲ್ಲ. ನಾವು ಮಾಡಿದ ತಪ್ಪು ಏನೆಂದರೆ, ಇಲ್ಲಿ ರೋಗ ಪ್ರಾರಂಭವಾದಾಗ ಜನರು ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ, ಅವರು ಎಂದಿನಂತೆ ಕೆಲಸಕ್ಕೆ ಹೋದರು, ಅವರು ನಗರಗಳು ಮತ್ತು ಮನರಂಜನಾ ಸ್ಥಳಗಳಿಗೆ ಪ್ರಯಾಣಿಸಿದರು. ನಾವು ರಜಾ ದಿನದಂತೆ ಆಚರಿಸಿದೆವು. ಎಲ್ಲರೂ ಅದೇ ತಪ್ಪನ್ನು ಮಾಡುತ್ತಿದ್ದರು. ಅದಕ್ಕಾಗಿಯೇ ನಾನು ನಿಮಗೆ ಮನವಿ ಮಾಡುತ್ತೇನೆ. ನಿಮ್ಮ ಪ್ರೀತಿಪಾತ್ರರನ್ನು, ಪೋಷಕರು, ಅಜ್ಜ-ಅಜ್ಜಿಯರನ್ನು ರಕ್ಷಿಸಿ. ಏಕೆಂದರೆ ಈ ಅನಾರೋಗ್ಯವು ಅವರಿಗೆ ಅಪಾಯವನ್ನುಂಟು ಮಾಡುತ್ತದೆ. ಪ್ರತಿದಿನ ಜನರು ಇಲ್ಲಿ ಸಾಯುತ್ತಿದ್ದಾರೆ. ಉತ್ತಮ ಔಷಧವಿಲ್ಲದ ಕಾರಣ ಅಲ್ಲ ಆದರೆ ಎಲ್ಲರಿಗೂ ಸ್ಥಳವಿಲ್ಲ. ನಾವು ಮಾಡಿದ ತಪ್ಪನ್ನು ನೀವು ಮಾಡಬೇಡಿ. ನಾವು ಮಾಡಿದ ಮೂರ್ಖತನವನ್ನು ನೀವು ಪುನರಾವರ್ತಿಸಬೇಡಿ. ನಾವು ಹೇಳುವುದನ್ನು ಪಾಲಿಸಿ. ದಯವಿಟ್ಟು ಜನದಟ್ಟಣೆ ಇರುವ ಸ್ಥಳಗಳಿಗೆ ಹೋಗಬೇಡಿ. ಹೊರಗೆ ಅಂದರೆ ಸಾರ್ವಜನಿಕ ಸ್ಥಳಗಳಲ್ಲಿ ತಿನ್ನುವುದನ್ನು ತಪ್ಪಿಸಿ, ಮನೆಯೊಳಗೆ ಹೆಚ್ಚಾಗಿ ಇರಿ, ಸರ್ಕಾರದ ನಿರ್ದೇಶನಗಳನ್ನು ಅನುಸರಿಸಿ, ಜನರಿಂದ ಒಂದು ಮೀಟರ್ ದೂರವಿದ್ದು ಮಾತನಾಡಿ, ಹತ್ತಿರ ಹೋಗಬೇಡಿ, ಮುದ್ದಾಡಬೇಡಿ.
ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ
ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ವಿಟಮಿನ್ ಸಿ ಸೇವಿಸಿ. ಈ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಯಲು ಅಧಿಕಾರಿಗಳಿಗೆ ಸಹಾಯ ಮಾಡಿ. ನಮ್ಮ ಪುಟ್ಟ ಇಟಲಿ ದೇಶವು ಅದರ ಕೆಟ್ಟ ಸ್ಥಿತಿಗೆ ಹೋಗಬಹುದು. ಇಟಲಿ ಇಂದು ಸಂಪೂರ್ಣವಾಗಿ ಪ್ರತ್ಯೇಕವಾಗಿರುವ ದೇಶವಾಗಿದೆ. ಆರು ಕೋಟಿಗೂ ಹೆಚ್ಚು ಜನರು ಮನೆಗಳಿಗೆ ಸೀಮಿತರಾಗಿದ್ದಾರೆ. ನಾವು ಆರಂಭದಲ್ಲೇ ಮುನ್ನೆಚ್ಚರಿಕೆಯ ಸೂಚನೆಗಳನ್ನು ಅನುಸರಿಸಿದ್ದರೆ ಇದನ್ನು ತಡೆಯಬಹುದಿತ್ತು. ನೀವು ಮತ್ತು ನಿಮ್ಮ ಪ್ರೀತಿಪಾತ್ರರು ಸುರಕ್ಷಿತವಾಗಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ ಎಂದು ಪತ್ರದಲ್ಲಿ ಇಟಲಿಯ ಪ್ರಜೆ ಉಲ್ಲೇಖಿಸಿದ್ದಾರೆ. ಅಲ್ಲದೇ ಈ ಪೋಸ್ಟ್‌ನ್ನು ಹೆಚ್ಚಾಗಿ ಶೇರ್ ಮಾಡಿ ಜಾಗೃತಿಗೊಳಿಸಿ ಎಂದು ಮನವಿ ಮಾಡಿದ್ದಾರೆ.

Leave a Comment