ನಾಳೆ ಸಿಎಂ ಗ್ರಾಮ ವಾಸ್ತವ್ಯ

ಬೆಂಗಳೂರು, ಜೂ. ೨೦- ನಾಳೆಯಿಂದ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಯಾದಗಿರಿ ಜಿಲ್ಲೆಯ ಗುರುಮಿಟ್ಕಲ್ ತಾಲ್ಲೂಕಿನ ಚಂಡರಕಿ ಗ್ರಾಮದಲ್ಲಿ ತಮ್ಮ ಮೊದಲ ಗ್ರಾಮ ವಾಸ್ತವ್ಯ ಹೂಡಲಿದ್ದಾರೆ.
ಮೂರು ದಿನಗಳ ಕಾಲ ಪ್ರವಾಸ ಮಾಡಲಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ಯಾದಗಿರಿ, ನಂತರ ಕಲಬುರಗಿ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಆಯ್ದ ಗ್ರಾಮಗಳಲ್ಲಿ ಗ್ರಾಮ ವಾಸ್ತವ್ಯವನ್ನು ಮುಂದುವರೆಸಲಿದ್ದಾರೆ.
ಯಾದಗಿರಿ ತಾಲ್ಲೂಕಿನ ಚಂಡರಕಿ ಗ್ರಾಮಕ್ಕೆ ನಾಳೆ ಬೆಳಿಗ್ಗೆ ಭೇಟಿನೀಡುವ ಉದ್ದೇಶದಿಂದ ಇಂದು ಸಂಜೆಯೇ ರೈಲಿನ ಮೂಲಕ ಯಾದಗಿರಿಗೆ ಪ್ರಯಾಣಿಸಲಿರುವ ಮುಖ್ಯಮಂತ್ರಿಗಳು ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ಜನಸಾಮಾನ್ಯರ ಕುಂದು – ಕೊರತೆಗಳನ್ನು ಆಲಿಸುವುದರೊಂದಿಗೆ ಗ್ರಾಮಸ್ಥರು ನೀಡುವ ಮನವಿಗಳನ್ನು ಸ್ವೀಕರಿಸಲಿದ್ದಾರೆ.
ಉಳಿದಂತೆ, ಸಂಜೆ ವೇಳೆಗೆ ಗ್ರಾಮಸ್ಥರಿಗೆ ಕೃಷಿ ಕ್ಷೇತ್ರದಲ್ಲಿ ಕೈಗೊಳ್ಳಬಹುದಾದ ಕ್ರಮಗಳು, ಕೃಷಿ ಮಾದರಿ ಬದಲು, ಕಡಿಮೆ ನೀರಿನಲ್ಲಿ ಉತ್ತಮ ಬೆಳೆ ಹಾಗೂ ಬೇರೆ ಬೇರೆ ಬೆಳೆಗಳನ್ನು ಬೆಳೆಯುವ ಸಂಬಂಧ ಮಾಹಿತಿಗಳನ್ನು ನೀಡಲಾಗುತ್ತದೆ. ಇದೇ ವೇಳೆ ಆಯಾ ಗ್ರಾಮಗಳಲ್ಲಿ ಸಂಜೆ ವೇಳೆಗೆ ಮಕ್ಕಳು ನಡೆಸಿಕೊಡುವ ಸಾಂಸ್ಕೃತಿಕ ಕಾರ್ಯಕ್ರಮವನ್ನು ವೀಕ್ಷಿಸಲಿದ್ದಾರೆ. ನಂತರ, ಮಕ್ಕಳೊಂದಿಗೆ ಭೋಜನ ಕೂಟದಲ್ಲಿ ಪಾಲ್ಗೊಂಡು ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿಯೇ ತಂಗಲಿದ್ದಾರೆ.
ಜೂನ್ 22ರ ಬೆಳಿಗ್ಗೆ ಕಲಬುರಗಿ ಜಿಲ್ಲೆಯ ಅಫ್ಜಲ್‌ಪುರ ತಾಲ್ಲೂಕಿನ ಹೆರೂರು ಗ್ರಾಮಕ್ಕೆ ಭೇಟಿನೀಡಿ ಗ್ರಾಮದಲ್ಲಿ ಕುಂದು – ಕೊರತೆಗಳ ಅಹವಾಲು ಸ್ವೀಕರಿಸಿ ವಾಸ್ತವ್ಯ ಹೂಡಲಿದ್ದಾರೆ. ಮಾಮೂಲಿನಂತೆ ಶಾಲಾ ಮಕ್ಕಳ ಸಾಂಸ್ಕೃತಿಕ ವೀಕ್ಷಣೆ, ಮಕ್ಕಳೊಂದಿಗೆ ಭೋಜನ ಪೂರ್ಣಗೊಳಿಸಿ ಶಾಲೆಯಲ್ಲೇ ತಂಗಿದ್ದು, ಕಲಬುರಗಿಗೆ ಜೂನ್ 23 ರಂದು ಭೇಟಿನೀಡಿ ನಂತರ, ಬೆಂಗಳೂರಿಗೆ ಮರಳಲಿದ್ದಾರೆ.

Leave a Comment