ನಾಳೆ ಸಂಭ್ರಮ ಸಡಗರದ ಕೃಷ್ಣ ಜನ್ಮಾಷ್ಠಮಿ

ವರಮಹಾಲಕ್ಷ್ಮಿ, ರಕ್ಷಾ ಬಂಧನದ ನಂತ್ರ ಶ್ರೀಕೃಷ್ಣನ ಜನ್ಮಾಷ್ಠಮಿ ಸಂಭ್ರಮ ಎಲ್ಲೆಡೆ ಮನೆ ಮಾಡಲಿದೆ. ನಾಳೆ ರಾಜ್ಯದೆಲ್ಲೆಡೆ  ಕೃಷ್ಣ ಜನ್ಮಾಷ್ಠಮಿ ಆಚರಣೆಗೆ ಸಕಲ ಸಿದ್ದತೆ  ಮಾಡಲಾಗಿದ್ದು, ಪಂಡಿತರ ಪ್ರಕಾರ ಇದು ಶ್ರೀಕೃಷ್ಣನ ೫೨೪೫ನೇ ಜನ್ಮ ದಿನವಾಗಿದೆ ಎಂದು ಹೇಳಲಾಗಿದೆ.
ಭಾದ್ರಪದ ಮಾಸದ ಕೃಷ್ಣ ಪಕ್ಷದ ಅಷ್ಟಮಿಯಂದು ಕೃಷ್ಣನ ಜನನವಾಗಿತ್ತು. ಈ ಬಾರಿ ಸೆ ೨ ರ ರಾತ್ರಿ ೮.೪೭ ರಿಂದ ಅಷ್ಟಮಿ ಶುರುವಾಗಲಿದೆ. ಸೆಪ್ಟೆಂಬರ್ ಮೂರರ ಸಂಜೆ ೭.೨೦ ಕ್ಕೆ ಮುಕ್ತಾಯವಾಗಲಿದೆ.
ಕೃಷ್ಣಾಷ್ಠಮಿ ವೃತ ಮಾಡುವವರು ಈ ದಿನ ಒಂದೇ ಬಾರಿ ಭೋಜನ ಮಾಡಬೇಕು. ಈ ದಿನ ದೇವಸ್ಥಾನಗಳಲ್ಲಿ ಬೆಣ್ಣೆ ಕೃಷ್ಣನಿಗೆ ವಿಶೇಷ ಪೂಜೆ, ಅರ್ಚನೆ ನೆರವೇರುತ್ತದೆ. ಮಧ್ಯ ರಾತ್ರಿ ಶ್ರೀಕೃಷ್ಣನ ಜನನವಾಗಿರುವ ಕಾರಣ ರಾತ್ರಿ ಪೂಜೆ ಮಾಡಲಾಗುತ್ತದೆ. ಶ್ರೀಕೃಷ್ಣನಿಗೆ ಹೂಗಳಿಂದ ಅಲಂಕಾರ ಮಾಡಿ ಪೂಜೆ ಮಾಡಬೇಕು. ಅದ್ರಲ್ಲೂ ವೈಜಯಂತಿ ಮಾಲೆ ಕೃಷ್ಣನಿಗೆ ಪ್ರಿಯವಾದದ್ದು. ಪೂಜೆಗೆ ಕಪ್ಪು ಬಣ್ಣದ ವಸ್ತುವನ್ನು ಬಳಸಬೇಡಿ. ಹಳದಿ ಬಟ್ಟೆ, ಚಂದನದ ಮಾಲೆಯಿಂದ ಶ್ರೀಕೃಷ್ಣನನ್ನು ಅಲಂಕರಿಸಿ ಕೃಷ್ಣ ಪಕ್ಷದ ಅಷ್ಠಮಿಯಂದು ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತದೆ.

ಶುಭ ಮುಹೂರ್ತ
ಸೆ ೨ ರಂದು ರಾತ್ರಿ ೨೩:೫೮ ಯಿಂದ ೦೦:೪೪ರವರೆಗಿರಲಿದೆ. ಅಂದರೆ ಪೂಜೆಗೆ ೪೫ ನಿಮಿಷ ಶುಭ ಮುಹೂರ್ತ ಸಿಗಲಿದೆ. ಈ ಶುಭ ಮುಹೂರ್ತದಲ್ಲಿ ಶ್ರೀಕೃಷ್ಣನ ಆರಾಧನೆ ಮಾಡಬೇಕು. ಸೆ ೩ ರಂದು ಅಷ್ಠಮಿ ಮುಗಿಯಲಿದೆ. ಶ್ರೀಕೃಷ್ಣ ಭಗವಂತ ವಿಷ್ಣುವಿನ ಅವತಾರ. ಭಜನೆ, ನೃತ್ಯ, ಸಂಗೀತದ ಮೂಲಕ ಶ್ರದ್ಧೆ ಭಕ್ತಿಯಿಂದ ಪೂಜೆ ಮಾಡಿದರೇ ಬಲು ಬೇಗ ಪ್ರಸನ್ನನಾಗ್ತಾನೆ ರಾಧಾವಲ್ಲಭ ಎಂದು ಹೇಳಲಾಗುತ್ತದೆ.
ಕೃಷ್ಣನ ಜನ್ಮ ದಿನವನ್ನು ವಿಧಿ-ವಿಧಾನದ ಮೂಲಕ ಆಚರಣೆ ಮಾಡಿದರೇ ಇಷ್ಟಾರ್ಥಗಳು ಸಿದ್ಧಿಸಲಿವೆ. ಶ್ರೀಕೃಷ್ಣನ ಜನ್ಮಾಷ್ಠಮಿ ಆಚರಿಸುವ ಮೊದಲು ದೇವಸ್ಥಾನದಂತೆ ಮನೆಯನ್ನು ಗಂಗಾಜಲ ಮತ್ತು ಹಸುವಿನ ಸಗಣಿಯಿಂದ ಸ್ವಚ್ಛಗೊಳಿಸಿ. ಸುಹಾಸನೆಯುಳ್ಳ ಊದಿನ ಕಡ್ಡಿಯನ್ನು ಮನೆಯಲ್ಲಿ ಬೆಳಗಬೇಕು. ದೇವಸ್ಥಾನಗಳಲ್ಲಿ ಬಾಲ ಗೋಪಾಲನನ್ನು ಜೋಕಾಲಿ ಮೇಲೆ ಮಲಗಿಸಿ ಅಭಿಷೇಕ ಮಾಡಲಾಗುತ್ತದೆ. ಇಡೀ ದಿನ ಪೂಜೆಗಳು ನೆರವೇರುತ್ತವೆ. ದೇವಸ್ಥಾನದಲ್ಲಿ ಭಜನೆ ಕೇಳಿ ಬರ್ತಿರುತ್ತದೆ. ನೃತ್ಯ, ಸಂಗೀತ ಎಲ್ಲೆಲ್ಲೂ ತುಂಬಿರುತ್ತದೆ. ಹಣಕಾಸಿನ ಸಮಸ್ಯೆ ಹೆಚ್ಚಿದ್ದು, ಜೀವನದಲ್ಲಿ ಆರ್ಥಿಕ ಸಂಘರ್ಷ ಎದುರಿಸುತ್ತಿದ್ದರೆ ಈ ಬಾರಿಯ ಕೃಷ್ಣ ಜನ್ಮಾಷ್ಠಮಿ ನಿಮ್ಮ ಅದೃಷ್ಟ ಬದಲಿಸಬಹುದು. ಕೃಷ್ಣ ಜನ್ಮಾಷ್ಠಮಿಯಂದು ಗೋಪಾಲನಿಗೆ ೫ ವಸ್ತುಗಳನ್ನು ಅರ್ಪಿಸಿದರೇ ಜೀವನದಲ್ಲಿ ಶೀಘ್ರವೇ ಪ್ರಗತಿ ಸಿಗಲಿದೆ.

ತುಳಸಿ ಪ್ರಿಯ ಕೃಷ್ಣ
ಭಗವಂತ ಕೃಷ್ಣ ತುಳಸಿ ಪ್ರಿಯ. ಹಾಗಾಗಿ ಪೂಜೆ ವೇಳೆ ತುಳಸಿಯನ್ನು ಅವಶ್ಯವಾಗಿ ಅರ್ಪಿಸಿ. ಬೆಣ್ಣೆ ಎಂದರೆ ಗೋಪಾಲ ಎಂದರ್ಥ. ಕೃಷ್ಣನಿಗೆ ಅತಿ ಇಷ್ಟದ ತಿಂಡಿ ಬೆಣ್ಣೆ. ಹಾಗಾಗಿ ಬೆಣ್ಣೆಯಿಂದ ಮಾಡಿದ ಮಿಠಾಯಿಯನ್ನು ಕೃಷ್ಣನಿಗೆ ಅರ್ಪಿಸಲು ಮರೆಯಬೇಡಿ. ಹಳದಿ ಬಣ್ಣದ ಹಣ್ಣನ್ನು ಕೃಷ್ಣನಿಗೆ ಅರ್ಪಿಸಬೇಕು. ಹಳದಿ ಬಣ್ಣದ ಹಣ್ಣನ್ನು ಕೃಷ್ಣನಿಗೆ ಅರ್ಪಣೆ ಮಾಡುವುದ್ರಿಂದ ಧನ-ಸಂಪತ್ತಿನ ಪ್ರಾಪ್ತಿಯಾಗಲಿದೆ. ಭಗವಂತ ಕೃಷ್ಣ ಪ್ರಸನ್ನನಾಗ್ತಾನೆ. ನವಿಲು ಗರಿಯನ್ನು ಕೃಷ್ಣನ ಮುಕುಟಕ್ಕೆ ಅವಶ್ಯವಾಗಿ ಇರಿಸಿ. ಕೃಷ್ಣನ ವಿಶೇಷ ಕೃಪೆ ನಿಮ್ಮ ಮೇಲೆ ಬೀಳಲಿದೆ. ಸ್ನಾನ ಮಾಡಿ ಶುದ್ಧ ಬಟ್ಟೆ ಧರಿಸಿದ ಮೇಲೆ ಶ್ರೀಕೃಷ್ಣನ ಮೂರ್ತಿಯನ್ನು ಸ್ಪರ್ಶಿಸಿ. ಶ್ರೀಕೃಷ್ಣನಿಗೆ ಅರ್ಪಿಸುವ ಪ್ರತಿಯೊಂದು ವಸ್ತುವಿಗೂ ಮೊದಲು ಗಂಗಾ ಜಲವನ್ನು ಹಾಕಿ. ತುಳಸಿ ಮಾಲೆ, ಬೆಣ್ಣೆ ಮಿಠಾಯಿ, ಹಳದಿ ಹಣ್ಣು ಹಾಗೂ ಹಳದಿ ಬಟ್ಟೆಯನ್ನು ಎಷ್ಟು ಸಾಧ್ಯವೋ ಅಷ್ಟು ಜನರಿಗೆ ನೀಡುವುದು ಉತ್ತಮ.

ಇಸ್ಕಾನ್‌ನಲ್ಲಿ ಆಚರಣೆ
ಕೃಷ್ಣಾ ಜನ್ಮಾಷ್ಟಮಿ ಅಂಗವಾಗಿ ನಗರದ ಇಸ್ಕಾನ್ ಹಾಗು ಅರಮನೆ ಮೈದಾನದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಬೆಳಿಗ್ಗೆ ೭ ರಿಂದ ರಾತ್ರಿ ೧೦ ಗಂಟೆವರೆಗೂ ಕೃಷ್ಣನಿಗೆ ವಿಶೇಷ ಅಭಿಷೇಕ ಹಾಗೂ ಪೂಜಾ ಹವನಗಳು ನಡೆಯಲಿದೆ. ಮಾಹಿತಿಗಾಗಿ ೯೩೭೯೪೬೪೩೧೨

Leave a Comment