ನಾಳೆ ಸಂಪುಟ ವಿಸ್ತರಣೆ ಮುಗಿಯದ ಗೊಂದಲ

ಬೆಂಗಳೂರು, ಜೂ. ೧೩- ಸಚಿವ ಸಂಪುಟ ವಿಸ್ತರಣೆಗೆ ನಾಳೆ ಮುಹೂರ್ತ ನಿಗದಿಯಾಗಿದ್ದರೂ ಸಂಪುಟ ಸೇರುವ ಮೂರನೇ ಅದೃಷ್ಟವಂತ ಯಾರೆಂಬುದು ಇನ್ನೂ ನಿರ್ಧಾರವಾಗದೆ ಗೊಂದಲ ಮುಂದುವರೆದಿದೆ.
ನಾಳೆ ಶುಕ್ರವಾರ ಮಧ್ಯಾಹ್ನ 1 ಗಂಟೆಗೆ ರಾಜಭವನದಲ್ಲಿ ನಡೆಯಲಿರುವ ಪ್ರಮಾಣ ವಚನ ಸ್ವೀಕಾರ ಸಮಾರಂಭ ಪಕ್ಷೇತರ ಶಾಸಕರಾದ ಮುಳಬಾಗಿಲಿನ ನಾಗೇಶ್ ಹಾಗೂ ರಾಣೆಬೆನ್ನೂರಿನ ಆರ್. ಶಂಕರ್ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಜೆಡಿಎಸ್ ಕೋಟಾದಿಂದ ಯಾರಾಗಲಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಜೆಡಿಎಸ್‌ನ ಎರಡು ಸ್ಥಾನಗಳು ಕಾಂಗ್ರೆಸ್‌ನ ಒಂದು ಸ್ಥಾನ ಸೇರಿ ಮೂರು ಸಚಿವ ಸ್ಥಾನಗಳು ಖಾಲಿ ಇದ್ದು ಜೆಡಿಎಸ್ ಕೋಟಾದಿಂದ ಪಕ್ಷೇತರ ಶಾಸಕರೊಬ್ಬರು ಕಾಂಗ್ರೆಸ್‌ನಿಂದ ಮತ್ತೊಬ್ಬ ಪಕ್ಷೇತರನಿಗೆ ಸಚಿವ ಸ್ಥಾನ ನೀಡಲು ನಿರ್ಧರಿಸಲಾಗಿದೆ. ಆದರೆ ಜೆಡಿಎಸ್ ಕೋಟಾದಲ್ಲಿ ಉಳಿಯುವ ಒಂದು ಸ್ಥಾನಕ್ಕೆ ಭಾರಿ ಪೈಪೋಟಿ ನಡೆದಿರುವುದರಿಂದ ಕೊನೆಗಳಿಗೆಯಲ್ಲಿ ಸಚಿವ ಸ್ಥಾನ ಯಾರಿಗೆ ದೊರಕಲಿದೆ ಎಂಬುದು ಕುತೂಹಲ ಕೆರಳಿಸಿದೆ.
ಕೊನೆ ಗಳಿಗೆಯಲ್ಲಿ ಜೆಡಿಎಸ್ ಕೋಟಾದಿಂದ ವಿಧಾನಪರಿಷತ್ ಸದಸ್ಯ ಎಂ. ಫಾರೂಕ್ ಇಲ್ಲವೆ ಜೆಡಿಎಸ್ ಮಾಜಿ ಅಧ್ಯಕ್ಷ ಹೆಚ್. ವಿಶ್ವನಾಥ್ ರವರಿಗೆ ಸಚಿವಗಿರಿ ಒಲಿಯುವ ಸಾಧ್ಯತೆಗಳಿವೆ.
ಸಚಿವ ಸಂಪುಟವನ್ನು ಜೂ. 12 ರಂದೇ ವಿಸ್ತರಿಸಲು ಮುಖ್ಯಮಂತ್ರಿ ಕುಮಾರಸ್ವಾಮಿ ತೀರ್ಮಾನ ಕೈಗೊಂಡು ಈ ಸಂಬಂಧ ರಾಜ್ಯಪಾಲರನ್ನು ಭೇಟಿ ಮಾಡಿ ಸಮಯ ನಿಗದಿ ಮಾಡಿದ್ದರು. ಆದರೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ ಅವರ ನಿಧನದಿಂದ ರಾಜ್ಯದಲ್ಲಿ ಮೂರು ದಿನಗಳ ಶೋಕಾಚರಣೆ ಘೋಷಿಸಿದ್ದರಿಂದ ಸಂಪುಟ ವಿಸ್ತರಣೆಯನ್ನು ನಾಳೆಗೆ ಮುಂದೂಡಲಾಗಿತ್ತು. ಅದರಂತೆ ನಾಳೆ ಸಂಪುಟ ವಿಸ್ತರಣೆಯಾಗಲಿದೆ.
ಸಂಪುಟ ವಿಸ್ತರಣೆಯ ನಂತರ ಎರಡೂ ಪಕ್ಷಗಳಲ್ಲಿ ಹೊಗೆಯಾಡುತ್ತಿರುವ ಅಸಮಾಧಾನ, ಅತೃಪ್ತಿಗಳು ಯಾವ ಸ್ವರೂಪ ಪಡೆಯುತ್ತವೋ ಹೇಳಲು ಬಾರದು.
ಕಾಂಗ್ರೆಸ್‌ನಲ್ಲಂತೂ ಸಚಿವ ಸ್ಥಾನಕ್ಕೆ ಹಿರಿಯ ಶಾಸಕರನ್ನು ಪರಿಗಣಿಸದೆ ಇರುವುದು ದೊಡ್ಡ ಮಟ್ಟದ ಅಸಮಾಧಾನಕ್ಕೆ ಕಾರಣವಾಗಿದೆ.
ಅಸಮಾಧಾನಗೊಂಡಿರುವ ಶಾಸಕರುಗಳನ್ನು ಮನವೊಲಿಸುವ ಪ್ರಯತ್ನಗಳು ನಡೆದಿವೇಯಾದರೂ ಮುಂದೆ ಈ ಅತೃಪ್ತ ಶಾಸಕರು ಯಾವ ರಾಜಕೀಯ ತೀರ್ಮಾನಗಳನ್ನು ಕೈಗೊಳ್ಳುತ್ತಾರೋ ಈಗಲೇ ಹೇಳಲು ಬಾರದು.
ಸಚಿವ ಸಂಪುಟದಲ್ಲಿ ಸ್ಥಾನ ಸಿಗದ ಅತೃಪ್ತ ಶಾಸಕರುಗಳ ಸಿಟ್ಟು, ಅಸಮಾಧಾನ ಬೂದಿ ಮುಚ್ಚಿದ ಕೆಂಡದಂತಿದ್ದು ಸಂಪುಟ ವಿಸ್ತರಣೆಯ ನಂತರ ಈ ಅಸಮಾಧಾನ, ಅತೃಪ್ತಿಗಳು ಉಲ್ಭಣಗೊಳ್ಳುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

* ನಾಳೆ ಮಧ್ಯಾಹ್ನ ಸಂಪುಟ ವಿಸ್ತರಣೆ.
* ಪಕ್ಷೇತರರಿಗೆ ಅದೃಷ್ಟ.
* 3ನೇ ಸ್ಥಾನಕ್ಕಾಗಿ ತೀವ್ರ ಪೈಪೋಟಿ.
* ಫಾರೂಕ್ – ವಿಶ್ವನಾಥ್ ರೇಸ್‌ನಲ್ಲಿ.
* ವಿಸ್ತರಣೆ ಮುಗಿಯದ ಗೊಂದಲ.
* ಹಿರಿಯ ಶಾಸಕರಲ್ಲಿ ಅಸಮಾಧಾನಕ್ಕೆ ಎಡೆ.

Leave a Comment