ನಾಳೆ  ಶಿವಮೊಗ್ಗ ಬಂದ್

ಶಿವಮೊಗ್ಗ, ಜುಲೈ 09 : ಶರಾವತಿ ನದಿ ಉಳಿಸಿ ಎಂದು ಶಿವಮೊಗ್ಗ ಜಿಲ್ಲೆಯಲ್ಲಿ ಹಲವು ದಿನದಿಂದ ಹೋರಾಟ ನಡೆಯುತ್ತಿದೆ. ವಿವಿಧ ಸಂಘಟನೆಗಳು ಒಟ್ಟಾಗಿ ನಾಳೆ ಶಿವಮೊಗ್ಗ ಜಿಲ್ಲಾ ಬಂದ್‌ಗೆ ಕರೆ ನೀಡಿವೆ.

ಶರಾವತಿ ನದಿ ಉಳಿಸಿ ಹೋರಾಟ ಒಕ್ಕೂಟ ಬುಧವಾರ ಶಿವಮೊಗ್ಗ ಜಿಲ್ಲಾ ಬಂದ್‌ಗೆ ಕರೆ ನೀಡಿದೆ. ಜನರು ಸ್ವಯಂ ಪ್ರೇರಿತರಾಗಿ ಬಂದ್‌ನಲ್ಲಿ ಪಾಲ್ಗೊಳ್ಳಬೇಕು. ಈ ಮೂಲಕ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ಮನವಿ ಮಾಡಲಾಗಿದೆ.

ಬಂದ್ ದಿನವಾದ ಬುಧವಾರ ಹಾಲು, ತರಕಾರಿ, ಮೆಡಿಕಲ್ ಶಾಪ್, ಅಂಬ್ಯುಲೆನ್ಸ್ ಸೇವೆಗೆ ಯಾವುದೇ ತೊಂದರೆ ಇರುವುದಿಲ್ಲ ಎಂದು ಒಕ್ಕೂಟದ ಸದಸ್ಯರು ಸ್ಪಷ್ಟಪಡಿಸಿದ್ದಾರೆ. ಶಿವಮೊಗ್ಗ ಜಿಲ್ಲಾ ಬಂದ್‌ಗೆ ವಿವಿಧ ಸಂಘಟನೆಗಳು ಈಗಾಗಲೇ ಬೆಂಬಲ ಘೋಷಣೆ ಮಾಡಿವೆ.

ಶಿವಮೊಗ್ಗ ನಗರದ ಸೈನ್ಸ್ ಮೈದಾನದಿಂದ ಬುಧವಾರ ಬೃಹತ್ ಪ್ರತಿಭಟನಾ ಜಾಥಾ ನಡೆಯಲಿದೆ. ಶಿವಪ್ಪ ನಾಯಕ ವೃತ್ತ, ಅಮೀರ್ ಅಹಮದ್ ವೃತ್ತ, ಗೋಪಿ ವೃತ್ತದ ಮೂಲಕ ಪ್ರತಿಭಟನಾ ಮೆರವಣಿಗೆ ಜಿಲ್ಲಾಧಿಕಾರಿಗಳ ಕಚೇರಿ ತಲುಪಲಿದೆ.

ಬಸವ ಕೇಂದ್ರದ ಶ್ರೀ ಬಸವ ಮುರುಳಸಿದ್ಧ ಸ್ವಾಮೀಜಿ, ಶರಾವತಿ ನದಿ ಉಳಿಸಿ ಹೋರಾಟ ಒಕ್ಕೂಟದ ಅಧ್ಯಕ್ಷ, ಸಾಹಿತಿ ನಾ.ಡಿಸೋಜಾ, ವಿವಿಧ ಪ್ರಗತಿಪರ ಸಂಘಟನೆಗಳ ಸದಸ್ಯರು, ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಸಾಗರ, ಶಿವಮೊಗ್ಗ, ತೀರ್ಥಹಳ್ಳಿ, ಸೊರಬ ತಾಲೂಕುಗಳಲ್ಲಿ ಈಗಾಗಲೇ ಬಂದ್ ಬಗ್ಗೆ ಮಾಹಿತಿ ನೀಡಲಾಗಿದೆ. ತಾಲೂಕು ಮಟ್ಟದಲ್ಲಿಯೂ ಈಗಾಗಲೇ ಹೋರಾಟ ನಡೆದಿದೆ. ಹೊಸನಗರದಲ್ಲಿ ದೊಡ್ಡ ಹೋರಾಟ ನಡೆದಿದ್ದು ಬುಧವಾರ ಶಿವಮೊಗ್ಗದಲ್ಲಿ ಬೃಹತ್ ಹೋರಾಟ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತಿದೆ.

ಶಿವಮೊಗ್ಗ ಬಂದ್ ಹಿನ್ನಲೆಯಲ್ಲಿ ಜನ ಜೀವನಕ್ಕೆ ತೊಂದರೆ ಉಂಟಾಗುವ ಸಾಧ್ಯತೆ ಇದೆ. ಜಿಲ್ಲೆಯ ಖಾಸಗಿ ಶಾಲಾ-ಕಾಲೇಜುಗಳು ಬುಧವಾರ ರಜೆ ನೀಡುವ ಕುರಿತು ಇನ್ನೂ ಅಂತಿಮ ತೀರ್ಮಾನವನ್ನು ಕೈಗೊಂಡಿಲ್ಲ. ಖಾಸಗಿ ಬಸ್ ಸೇವೆ ಸ್ಥಗಿತಗೊಳ್ಳುವ ನಿರೀಕ್ಷೆ ಇದೆ.

ಶರಾವತಿ ನದಿ ನೀರನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗುವ ಯೋಜನೆ ಅವೈಜ್ಞಾನಿಕವಾಗಿದೆ. ಸರ್ಕಾರ ಈ ಯೋಜನೆಯನ್ನು ಕೈ ಬಿಡಬೇಕು ಎಂದು ಹಲವು ದಿನಗಳಿಂದ ಶಿವಮೊಗ್ಗದಲ್ಲಿ ಹೋರಾಟ ನಡೆಯುತ್ತಿದೆ.

Leave a Comment