ನಾಳೆ ಭಾರತ-ಅಸೀಸ್ ನಡುವೆ ೨ ನೇ ಪಂದ್ಯ ಕೊಹ್ಲಿಗೆ ಅಗ್ನಿಪರೀಕ್ಷೆ

ರಾಜ್ ಕೋಟ್, ಜ ೧೬-ಭಾರತ ಮತ್ತು ಪ್ರವಾಸಿ ಆಸ್ಟ್ರೇಲಿಯಾ ತಂಡಗಳ ನಡುವೆ ಎರಡನೇ ಏಕದಿನ ಕ್ರಿಕೆಟ್ ಪಂದ್ಯ ನಾಳೆ ರಾಜ್‌ಕೋಟ್‌ನಲ್ಲಿ ನಡೆಯಲಿದೆ. ಮೂರು ಪಂದ್ಯಗಳ ಸರಣಿಯಲ್ಲಿ ಆಸೀಸ್ ಮುಂಬೈನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಭರ್ಜರಿ ಜಯ ದಾಖಲಿಸುವ ಮೂಲಕ ೧-೦ಯಿಂದ ಮುನ್ನಡೆ ಸಾಧಿಸಿದೆ. ಹೀಗಾಗಿ ಸರಣಿಯನ್ನು ಜೀವಂತವಾಗಿರಿಸಿಕೊಳ್ಳಲು ನಾಳಿನ ಪಂದ್ಯವನ್ನು ವಿರಾಟ್ ಕೊಹ್ಲಿ ಪಡೆ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.
ಮೊದಲ ಪಂದ್ಯದಲ್ಲಿ ಕೆ.ಎಲ್. ರಾಹುಲ್ ಮತ್ತು ಶಿಖರ್ ಧವನ್ ಉತ್ತಮ ಜತೆಯಾಟ ಪ್ರದರ್ಶಿಸಿದ ಹೊರತಾಗಿಯೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಕಾಂಗರೂ ದಾಳಿಗೆ ದಿಟ್ಟ ಉತ್ತರ ನೀಡುವಲ್ಲಿ ವಿಫಲರಾಗಿದ್ದರು. ಅಲ್ಲದೆ ಭಾರತ ತಂಡದಲ್ಲಿ ಧವನ್ ಮತ್ತು ರೋಹಿತ್ ಶರ್ಮಾ, ಇನ್ನಿಂಗ್ಸ್ ಆರಂಭಿಸುತ್ತಾರೆ. ಮೊದಲನೇ ಕ್ರಮಾಂಕದಲ್ಲಿ ಕೆ.ಎಲ್. ರಾಹುಲ್ ಆಡುತ್ತಿದ್ದಾರೆ. ಆದರೆ ಮುಂದಿನ ಕ್ರಮಾಂದಲ್ಲಿ ಯಾರು ಆಡಬೇಕೆಂಬ ಜಿಜ್ಞಾಸೆ ತಂಡವನ್ನು ಕಾಡುತ್ತಿದೆ.
ಮೊದಲ ಪಂದ್ಯದಲ್ಲಿ ನಾಯಕ ಕೊಹ್ಲಿ ನಾಲ್ಕನೇ ಕ್ರಮಾಂಕದಲ್ಲಿ ಆಡುವ ಮೂಲಕ ಹೊಸ ಪ್ರಯೋಗಕ್ಕೆ ತಂಡ ಮುಂದಾಗಿತ್ತು. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಬಲಪಡಿಸುವ ದೃಷ್ಟಿಯಿಂದ ಮುಂದಾಗಿದ್ದ ಈ ಪ್ರಯೋಗ ವೈಫಲ್ಯ ಕಂಡಿತ್ತು. ಸರಣಿಯನ್ನು ಜೀವಂತವಾಗಿರಿಸಿಕೊಳ್ಳಲು ನಾಳೆ ನಡೆಯಲಿರುವ ಎರಡನೇ ಏಕದಿನ ಕೊಹ್ಲಿ ಪಾಲಿಗೆ ಅಗ್ನಿಪರೀಕ್ಷೆಯಾಗಿ ಪರಿಣಮಿಸಿದೆ.
ಸಾಮಾನ್ಯವಾಗಿ ಭಾರತ ಟಿ-೨೦ ಇರಲಿ ಏಕದಿನ ಪಂದ್ಯವಿರಲ್ಲಿ ಆರಂಭಿಕ ಜೋಡಿ ಉತ್ತi ಆಟ ಪ್ರದರ್ಶಿಸಿ ಭದ್ರ ಬುನಾದಿ ಹಾಕಿಕೊಟ್ಟರೆ ಮಾತ್ರ ಆನಂತರ ಬರುವ ಆಟಗಾರರು ಉತ್ತಮ ಆಟ ಪ್ರದರ್ಶಿಸುತ್ತಾರೆ. ಇದು ಭಾರತ ತಂಡದ ದೌರ್ಬಲ್ಯವೂ ಹೌದು. ಆದರೆ ವಿಕೆಟ್ ಬಿದ್ದಾಗ ಆಟಗಾರರು ನೆಲಕಚ್ಚಿ ನಿಂತು ದಿಟ್ಟ ಆಟ ಪ್ರದರ್ಶಿಸಿದರೆ ಮಾತ್ರ ನಾಳಿನ ಪಂದ್ಯದಲ್ಲಿ ಗೆಲುವು ಸಾಧಿಸಲು ಸಾಧ್ಯ. ಇಲ್ಲದಿದ್ದರೆ ಸೋಲು ಕಟ್ಟಿಟ್ಟ ಬುತ್ತಿ.
ಪಂತ್ ಅಲಭ್ಯ
ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ವೃಷಭ್ ಪಂತ್ ಮುಂಬೈನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವ ವೇಳೆ ಗಾಯಗೊಂಡಿದ್ದಾರೆ. ಹೀಗಾಗಿ ಎರಡನೇ ಪಂದ್ಯದಲ್ಲಿ ಕಣಕ್ಕಿಳಿಯುತ್ತಿಲ್ಲ. ಈ ಜಾಗದಲ್ಲಿ ಸಮರ್ಥ ಆಟಗಾರನ ಅವಶ್ಯಕತೆಯಿದ್ದು, ಈ ನಿಟ್ಟಿನಲ್ಲಿ ನಾಯಕ ವಿರಾಟ್ ಕೊಹ್ಲಿ ಗಂಭೀರ ಚಿಂತನೆ ನಡೆಸಿದ್ದು, ನಾಳಿನ ಪಂದ್ಯದಲ್ಲಿ ಕರ್ನಾಟಕದ ಮನೀಷ್ ಪಾಂಡೆಗೆ ಅವಕಾಶ ನೀಡುವ ಸಾಧ್ಯತೆ ಇದೆ. ಈ ಪಂದ್ಯದಲ್ಲಿ ವಿಕೆಟ್ ಕೀಪಿಂಗ್ ಹೊಣೆಗಾರಿಕೆಯನ್ನು ರಾಹುಲ್ ನಿಭಾಯಿಸಲಿದ್ದಾರೆ.
ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವಿನೊಂದಿಗೆ ಶುಭಾರಂಭ ಮಾಡಿರುವ ಆಸ್ಟ್ರೇಲಿಯಾ, ಬೌಲಿಂಗ್ ಮತ್ತು ಬ್ಯಾಟಿಂಗ್ ವಿಭಾಗದಲ್ಲಿ ಬಲಿಷ್ಠವಾಗಿದ್ದು, ಎರಡನೇ ಪಂದ್ಯದಲ್ಲೂ ವಿಜಯ ಸಾಧಿಸುವ ತವಕದಲ್ಲಿದೆ.

Leave a Comment