ನಾಳೆ ನೇತ್ರದೀಪ್ ಕಣ್ಣಿನ ಆಸ್ಪತ್ರೆ ಉದ್ಘಾಟನೆ

ತುಮಕೂರು, ಜೂ. ೨೧- ನಗರದ ಗುಬ್ಬಿ ಗೇಟ್ ಬಳಿಯ ಟಿಹೆಚ್‍ಎಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡದ ಮೊದಲನೆ ಮಹಡಿಯಲ್ಲಿ ನೇತ್ರದೀಪ್ ಎಂಬ ಸುಸಜ್ಜಿತ ಕಣ್ಣಿನ ಆಸ್ಪತ್ರೆ ಆರಂಭಗೊಳ್ಳಲಿದೆ ಎಂದು ರೋಟರಿ ಜಿಲ್ಲೆ 3190 ಮಾಜಿ ರಾಜ್ಯಪಾಲರಾದ ಆಶಾ ಪ್ರಸನ್ನಕುಮಾರ್ ತಿಳಿಸಿದರು.

ನೂತನ ಆಸ್ಪತ್ರೆಯ ಸಭಾಂಗಣದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಅವರು, ಇದು ರೋಟರಿ ಯೋಜನೆಯಾಗಿದ್ದು, ರೋಟರಿ ತುಮಕೂರು ಪೂರ್ವ, ರೋಟರಿ ಬೆಂಗಳೂರು ಇಂದಿರಾನಗರ ಹಾಗೂ ಗ್ಲೋಬ್ ಐ ಫೌಂಡೇಷನ್ ಬೆಂಗಳೂರು ಇವರ ಸಹಕಾರದೊಂದಿಗೆ ಸುಸಜ್ಜಿತ ಕಣ್ಣಿನ ಆಸ್ಪತ್ರೆಯನ್ನು ಆರಂಭಿಸಲಾಗುವುದು ಎಂದರು.

ತಾವು ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಂಡ ಒಂದು ವರ್ಷದ ಅವಧಿಯಲ್ಲಿ ತುಮಕೂರಿಗೆ ಶಾಶ್ವತವಾದ ಯೋಜನೆಗಳನ್ನು ರೂಪಿಸಬೇಕೆಂಬ ಹಂಬಲದೊಂದಿಗೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಇದರಲ್ಲಿ ಕಣ್ಣಿನ ಆಸ್ಪತ್ರೆಯೂ ಒಂದಾಗಿದೆ ಎಂದರು.

ರೋಟರಿ ವತಿಯಿಂದ ಗ್ರಾಮೀಣ ಭಾಗದಲ್ಲಿ ಕಣ್ಣಿಗೆ ಸಂಬಂಧಿಸಿದಂತೆ ಆರೋಗ್ಯ ಶಿಬಿರಗಳನ್ನು ನಡೆಸಿ, ಇದರಲ್ಲಿ ಆಯ್ಕೆಯಾದ ಬಡ ರೋಗಿಗಳಿಗೆ ಸಂಪೂರ್ಣವಾಗಿ ಉಚಿತ ಚಿಕಿತ್ಸೆ ನೀಡುವುದಾಗಿ ತಿಳಿಸಿದ ಅವರು, ಮಧ್ಯಮವರ್ಗ, ಶ್ರೀಮಂತರು ಈ ಆಸ್ಪತ್ರೆಗೆ ಬಂದರೆ ಅವರಿಗೆ ಶೇ.40 ರಷ್ಟು ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡುವುದಾಗಿ ತಿಳಿಸಿದರು.

ಆರೋಗ್ಯ ಶಿಬಿರಗಳಲ್ಲಿ ಆಯ್ಕೆಯಾದ ಅರ್ಹ ಅಭ್ಯರ್ಥಿಗಳಲ್ಲದೆ ಪ್ರತಿ ವಾರದಲ್ಲಿ ಒಂದು ದಿನ ಮಾತ್ರ ಆಸ್ಪತ್ರೆಗೆ ಬಂದು ನೋಂದಣಿ ಮಾಡಿಸಿಕೊಂಡ ಬಡ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಲಾಗುವುದು. ಉಳಿದಂತೆ ಬರುವ ರೋಗಿಗಳಿಗೆ ಶೇ.40 ರಷ್ಟು ಹಣ ಪಡೆದು ಚಿಕಿತ್ಸೆ ನೀಡಲಾಗುವುದು ಎಂದರು.

ಈ ಆಸ್ಪತ್ರೆಯ ಒಟ್ಟು ಯೋಜನಾ ವೆಚ್ಚ ಸುಮಾರು 3.25 ಕೋಟಿ ರೂ.ಗಳಾಗಿದ್ದು, ರೋಟರಿ ತುಮಕೂರು ಪೂರ್ವ ವತಿಯಿಂದ ಕಟ್ಟಡ ಮತ್ತು ಒಳಾಂಗಣ ವಿನ್ಯಾಸ ಹಾಗೂ ಆಸ್ಪತ್ರೆಗೆ ತಗಲುವ ಬಾಡಿಗೆ ಇತರೆ ವ್ಯವಸ್ಥೆಯನ್ನು ಒದಗಿಸುತ್ತದೆ. ರೋಟರಿ ಬೆಂಗಳೂರು ಇಂದಿರಾನಗರ ವತಿಯಿಂದ ಆಸ್ಪತ್ರೆಗೆ ಬೇಕಾದ ಎಲ್ಲ ರೀತಿಯ ಯಂತ್ರೋಪಕರಣಗಳನ್ನು ಒದಗಿಸುತ್ತಾರೆ ಎಂದರು.

ರೋಟರಿ ಜಿಲ್ಲೆ 3190ಗೆ ಅಮೇರಿಕಾದ ರೋಟರಿ ಜಿಲ್ಲೆ 5320 ಹಾಗೂ ರೋಟರಿ ಪುಲ್ಲರ್‍ಟನ್ ಇವರು ಸಹಭಾಗಿಗಳಾಗಿರುತ್ತಾರೆ. ಇದಲ್ಲದೆ ರೋ.ಚಂದ್ರಶೇಖರ್ ವಿಶ್ವನಾಥ್ ಮತ್ತು ಸಂಜಯ್ ಶ್ರೀವಾಸ್ತವ ಹಾಗೂ ಅಮೆರಿಕಾ ಪ್ರಗತಿ ಪೌಂಡೇಷನ್ ಇವರು ಉದಾರವಾಗಿ ಧನಸಹಾಯ ಮಾಡಿರುತ್ತಾರೆ ಎಂದರು.

ಬೆಂಗಳೂರಿನ ಗ್ಲೋ ಐ ಫೌಂಡೇಷನ್ ಒಂದು ಎನ್‍ಜಿಒ ಆಗಿದ್ದು, ಇವರು ಆಸ್ಪತ್ರೆಯಲ್ಲಿ ನಿರ್ವಹಣೆ, ಚಿಕತ್ಸೆ ಹಾಗೂ ಜಿಲ್ಲೆಯ ಪ್ರತಿಯೊಂದು ತಾಲೂಕಿನಲ್ಲಿ ಕಣ್ಣಿನ ತಪಾಸಣಾ ಶಿಬಿರ ಏರ್ಪಡಿಸಿ, ಫಲಾನುಭವಿಗಳನ್ನು ಗುರುತಿಸಿ, ಆಸ್ಪತ್ರೆಗೆ ಕರೆ ತಂದು ಸೂಕ್ತ ತಪಾಸಣೆ, ಚಿಕತ್ಸೆ ಹಾಗೂ ಅಗತ್ಯವಿದ್ದಲ್ಲಿ ಶಸ್ತ್ರಚಿಕಿತ್ಸೆ ಮಾಡುತ್ತಾರೆ ಎಂದರು.

ಈ ಆಸ್ಪತ್ರೆಯಲ್ಲಿ ಕ್ಯಾಟರಾಕ್ಟ್, ಗ್ಲುಕೋಮಾ, ಡಯಾಬಿಟಿಕ್ ರೆಟಿನೋಪತಿ, ಕಾರ್ನಿಯಲ್ ಕುರುಡುತನ, ರಿಫ್ರಾಕ್ಟೀವ್ ದೋಷ ಇವುಗಳಿಗೆ ಸಂಬಂಧಿಸಿದ ತಪಾಸಣೆ, ಚಿಕಿತ್ಸೆ ಅಗತ್ಯವಿದ್ದಲ್ಲಿ ಶಸ್ತ್ರಚಿಕಿತ್ಸೆಯನ್ನು ಬಡವರಿಗೆ ಉಚಿತವಾಗಿ ಹಾಗೂ ಇತರರಿಗೆ ರಿಯಾಯಿತಿ ದರದಲ್ಲಿ ಸೇವೆ ನೀಡುವುದಾಗಿ ತಿಳಿಸಿದರು.

ಜೂನ್ 22 ರಂದು ಬೆಳಿಗ್ಗೆ 10-30 ಗಂಟೆಗೆ ನಗರದ ಟಿ.ಹೆಚ್.ಎಸ್. ಆಸ್ಪತ್ರೆಯ ಒಂದನೇ ಮಹಡಿಯಲ್ಲಿ ನೇತ್ರದೀಪ್ ಕಣ್ಣಿನ ಆಸ್ಪತ್ರೆ ಉದ್ಘಾಟನಾ ಸಮಾರಂಭ ಹಮ್ಮಿಕೊಂಡಿದ್ದು, ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಉದ್ಘಾಟಿಸುವರು. ಜಿ.ಪಂ. ಸಿಇಒ ಶುಭಾ ಕಲ್ಯಾಣ್ ಆಸ್ಪತ್ರೆಯ ಹೊರರೋಗಿಗಳ ವಿಭಾಗವನ್ನು ಉದ್ಘಾಟಿಸುವರು ಎಂದರು.

ರೋಟರಿ ಜಿಲ್ಲಾ ಗೌವರ್ನರ್ ಸುರೇಶ್ ಎಸ್.ಹರಿ, ಮಾಜಿ ಗೌವರ್ನರ್ ಆಶಾ ಪ್ರಸನ್ನಕುಮಾರ್ ಇವರು ಭಾಗವಹಿಸುವರು.
ಪತ್ರಿಕಾಗೋಷ್ಠಿಯಲ್ಲಿ ರೋಟರಿ ಅಧ್ಯಕ್ಷ ಡಾ. ಟಿ.ಎಸ್.ವಿಜಯಕುಮಾರ್, ಮುಂದಿನ ಸಾಲಿನ ಅಧ್ಯಕ್ಷ ಎಸ್.ಸೋಮಶೇಖರ್, ಪ್ರಸನ್ನಕುಮಾರ್, ರವಿಶಂಕರ್, ಡಾ.ಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.

Leave a Comment