ನಾಳೆ ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಿ

ಸುಗಮ ಸಂಚಾರ ಪಾಲಿಸಲು ಕೆ.ಟಿ.ಬಾಲಕೃಷ್ಣ ಆದೇಶ
ಮೈಸೂರು. ಜ.25: ಜನವರಿ 26 ರಂದು (ನಾಳೆ) ಬನ್ನಿಮಂಟಪ ಪಂಜಿನ ಕವಾಯಿತು ಮೈದಾನದಲ್ಲಿ ನಡೆಯುವ ಗಣರಾಜ್ಯೋತ್ಸವ ಆಚರಣೆ ಸಂಬಂಧ ಮೈಸೂರು ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಮತ್ತು ಸುಗಮ ಸಂಚಾರಕ್ಕಾಗಿ ಸಾರ್ವಜನಿಕರು ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮೈಸೂರು ನಗರದ ಪೊಲೀಸ್ ಆಯುಕ್ತರವರಾದ ಕೆ.ಟಿ.ಬಾಲಕೃಷ್ಣ ಆದೇಶಿಸಿದ್ದಾರೆ.
ನಾಳೆ ಮೈಸೂರು ನಗರದ ಬನ್ನಿಮಂಟಪ ಮೈದಾನದಲ್ಲಿ ನಡೆಯುವ ಗಣರಾಜ್ಯೋತ್ಸವ ಆಚರಣೆ ಸಂಬಂಧ ಬನ್ನಿಮಂಟಪ ಮೈದಾನಕ್ಕೆ ಆಗಮಿಸುವ ಅತಿ ಗಣ್ಯರು, ಗಣ್ಯರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಮತ್ತು ಜಿಲ್ಲಾ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರುಗಳು, ಮಹಾನಗರಪಾಲಿಕೆ ಸದಸ್ಯರು ಬನ್ನಿಮಂಟಪ ಮುಖ್ಯದ್ವಾರದ ಮುಖೇನ ಪ್ರವೇಶಿಸಬೇಕು. ಇವರ ವಾಹನಗಳಿಗೆ ಮುಖ್ಯದ್ವಾರದ ಎಡಭಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.
ಗೇಟ್ ಜಿ-5ರಲ್ಲಿ ಪೊಲೀಸ್ ಇಲಾಖೆ, ಪತ್ರಿಕಾ ಮಾದ್ಯಮ, ಇತರೆ ಇಲಾಖೆ ಮತ್ತು ಸಾರ್ವಜನಿಕರ ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳ ಪ್ರವೇಶ ಮತ್ತು ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಗೇಟ್ ಜಿ-8ರಲ್ಲಿ ಗಣರಾಜ್ಯೋತ್ಸವದ ಆಚರಣೆಯ ಸಂಬಂಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಪೆರೇಡ್‍ನಲ್ಲಿ ಭಾಗವಹಿಸುವವರಿಗೆ, ಶಾಲಾ ಕಾಲೇಜು ವಾಹನಗಳ ಪ್ರವೇಶ ಮತ್ತು ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಗೇಟ್ ಜಿ-11ರಲ್ಲಿ ಸಾರ್ವಜನಿಕರಿಗೆ ಪ್ರವೇಶ ಕಲ್ಪಿಸಲಾಗಿದೆ. ಬನ್ನಿಮಂಟಪ ಮೈದಾನದ ಗಣರಾಜ್ಯೋತ್ಸವ ಆಚರಣೆಯಲ್ಲಿ ಭಾಗವಹಿಸುವವರು ಸುರಕ್ಷತೆಯ ದೃಷ್ಠಿಯಿಂದ ಯಾವುದೇ ರೀತಿಯ ಆಯುಧಗಳು, ಚಾಕು, ಗಾಜಿನ ನೀರಿನ ಬಾಟಲಿ ಮತ್ತು ದೊಡ್ಡ ಬ್ಯಾಗ್‍ಗಳನ್ನು ತೆಗೆದುಕೊಂಡು ಹೋಗಬಾರದು.
ಲೋಹಶೋಧಕ ಯಂತ್ರಗಳನ್ನು ಅಳವಡಿಸಿದ್ದು, ಸಾರ್ವಜನಿಕರು ಲೋಹಶೋಧಕ ಯಂತ್ರದ ಮೂಲಕ ತಪಾಸಣೆಗೆ ಒಳಪಟ್ಟು ನಂತರ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಬೇಕು. ಕವಾಯಿತು ಹಾಗೂ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಸಾರ್ವಜನಿಕರುಗಳು ಪ್ರವೇಶಿಸಬಾರದು. ನಿಗದಿ ಪಡಿಸಿದ ಸ್ಥಳದಲ್ಲೇ ಕುಳಿತು ಕಾರ್ಯಕ್ರಮವನ್ನು ವೀಕ್ಷಿಸಬೇಕು. ಕಾರ್ಯಕ್ರಮ ಪ್ರಾರಂಭವಾದ ನಂತರ ಪದೇ ಪದೇ ಸ್ಥಳ ಬದಲಾವಣೆ ಮಾಡುವಂತಿಲ್ಲ.
ನಿಗದಿಪಡಿಸಿದ ಪ್ರವೇಶ ದ್ವಾರಗಳಿಂದ ಹೊರತುಪಡಿಸಿ, ಬೇರೆ ಕಡೆಗಳಿಂದ ಸಾರ್ವಜನಿಕರು ಪ್ರವೇಶಿಸಬಾರದು. ಸಾರ್ವಜನಿಕರು ತಮ್ಮ ವಾಹನಗಳನ್ನು ಸಂಚಾರ ನಿಯಂತ್ರಣ ಪೊಲೀಸರು ನಿಗದಿಪಡಿಸಿದ ಸ್ಥಳದಲ್ಲೇ ನಿಲುಗಡೆ ಮಾಡಬೇಕು. ಸಂಚಾರಕ್ಕೆ ಅಡಚಣೆ ಉಂಟಾಗುವ ರೀತಿಯಲ್ಲಿ ನಿಲ್ಲಿಸಿದ ವಾಹನಗಳ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕ ಸ್ಥಳಗಳಾದ ಮಾಲ್ಸ್‍ಗಳು, ಸಿನಿಮಾ ಮಂದಿರಗಳು, ಮಾರುಕಟ್ಟೆ, ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ಏರ್‍ಪೋರ್ಟ್, ಪ್ರಾರ್ಥನಾ ಸ್ಥಳಗಳು, ಪ್ರವಾಸಿ ಸ್ಥಳಗಳಲ್ಲಿ ಹಾಗೂ ಹೆಚ್ಚಿನ ಜನನಿಬಿಡ ಪ್ರದೇಶಗಳಲ್ಲಿ ಮಾಲೀಕರು/ವ್ಯವಸ್ಥಾಪಕರು ಸೂಕ್ತ ಸ್ಥಳಗಳಲ್ಲಿ ಸಿ.ಸಿ. ಕ್ಯಾಮರಾಗಳನ್ನು ಅಳವಡಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿಗಳನ್ನು ನೇಮಿಸಬೇಕು.
ಹೋಟೆಲ್, ವಸತಿ ಗೃಹ, ಹೋಂ ಸ್ಟೇಗಳ ಮಾಲೀಕರು ಪ್ರವಾಸಿಗರಿಗೆ ಮತ್ತು ಇತರರಿಗೆ ರೂಂ.ಗಳನ್ನು ನೀಡುವಾಗ ಅವರ ಬಗ್ಗೆ ಹಾಗೂ ಅವರ ತಂದಿರುವ ಲಗ್ಗೇಜ್‍ಗಳ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿ ಪೂರ್ಣ ವಿಳಾಸದ ಮಾಹಿತಿ ಪಡೆದು ಸಂಬಂಧಪಟ್ಟ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಸಾರ್ವಜನಿಕರು ಅನುಮಾನಾಸ್ಪದವಾಗಿ ಓಡಾಡುವ ವ್ಯಕ್ತಿಗಳು ವಾಹನಗಳು, ವಸ್ತುಗಳು ಇತ್ಯಾದಿ ಕಂಡು ಬಂದಲ್ಲಿ ಕೂಡಲೇ ನಗರ ಪೊಲೀಸ್ ನಿಯಂತ್ರಣ ಕೊಠಡಿ ದೂರವಾಣಿ ಸಂಖ್ಯೆ 0821-2418100, 2418339, 2418139 ಗೆ ದೂರವಾಣಿ ಕರೆ ಮಾಡಿ ತಿಳಿಸಬೇಕು. ಮಾಹಿತಿ ನೀಡಿದವರ ವಿವರವನ್ನು ಗೌಪ್ಯವಾಗಿಡಲಾಗುವುದು ಎಂದಿದ್ದಾರೆ.

Leave a Comment