ನಾಳೆ `ಗರೀಬಿ ಹಟಾವೋ ರಾಯಚೂರು ಬಚಾವೋ`

ರಾಯಚೂರು.ಮೇ.19- ರಸ್ತೆಗೆ ಹೊಂದಿಕೊಂಡು ವ್ಯಾಪಾರ ನಡೆಸುತ್ತಿರುವ ಬೀದಿಬದಿ ವ್ಯಾಪಾರಸ್ಥರ ಬಂಡಿಗಳನ್ನು ತೆರವುಗೊಳಿಸುತ್ತಿರುವ ಶಾಸಕರು, ಜಿಲ್ಲಾಡಳಿತ ಧೋರಣೆ ಖಂಡಿಸಿ ನಾಳೆ ಸ್ಟೇಷನ್ ವೃತ್ತದಿಂದ ಜಿಲ್ಲಾಡಳಿತ ಕಾರ್ಯಾಲಯವರೆಗೆ ಬಂಡಿಗಳೊಂದಿಗೆ ವ್ಯಾಪಾರಸ್ಥರ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆಂದು ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಸೈಯದ್ ಮಹ್ಮದ್ ಹೇಳಿದರು.

ಅವರಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ರಸ್ತೆ ಪಕ್ಕದ ಬೀದಿಬದಿ ವ್ಯಾಪಾರವನ್ನೇ ಉಪಜೀವನವನ್ನಾಗಿಸಿಕೊಂಡು ಬದುಕು ಸಾಗಿಸುತ್ತಿರುವ ಬೀದಿ ವ್ಯಾಪಾರಕ್ಕೆ ನಿರ್ಬಂಧ ಹೇರುವ ಮೂಲಕ ನಗರ ಶಾಸಕರು, ಜಿಲ್ಲಾಡಳಿತ ವ್ಯಾಪಾರಿಗಳ ಜೀವನ ಬೀದಿಗೆ ತಳ್ಳುವಂತೆ ಮಾಡಲಾಗಿದೆ. ವ್ಯಾಪಾರಸ್ಥರ ನ್ಯಾಯಯುತ ಹಕ್ಕಾಗಿರುವ ಪ್ರತ್ಯೇಕ ಕಾನೂನು ರಚಿಸದೆ, ಕನಿಷ್ಟ ಸವಲತ್ತು ಕಲ್ಪಿಸದೆ ವಂಚಿಸಲಾಗಿದೆ.

ನಗರಾದ್ಯಂತ ಕೈಗೆತ್ತಿಕೊಂಡಿರುವ ರಸ್ತೆ ನಿರ್ಮಾಣ, ರಸ್ತೆ ಅಪಘಾತ ಸಂಭವ ನೆಪದಡಿ ಬೀದಿ ವ್ಯಾಪಾರಿಗಳ ಬಂಡಿಗಳನ್ನು ತೆರವುಗೊಳಿಸಿ ಅಮಾಯಕ ಬಡ ಹೊಟ್ಟೆಗಳ ಮೇಲೆ ಜಿಲ್ಲಾಡಳಿತವೇ ಬರೆ ಎಳೆಯುವ ಧೋರಣೆ ಖಂಡನೀಯ. ಬಡವರ ಏಳಿಗೆಗೆ ದುಡಿವ ಕಾಳಜಿಯನ್ನೇ ಮರೆತು ಬೀದಿಬದಿ ವ್ಯಾಪಾರಸ್ಥರ ಬದುಕು ಸರ್ವನಾಶಕ್ಕೆ ಪಣತೊಟ್ಟಿರುವ ಮೇಲಾಡಳಿತ ಜನವಿರೋಧಿ ನಡೆಯನ್ನು ಖಂಡಿಸಿ ನಾಳೆ ಬೆಳಿಗ್ಗೆ 10 ಗಂಟೆಗೆ ಬಂಡಿ ಸಮೇತ ಸ್ಟೇಷನ್ ವೃತ್ತದಿಂದ ಪ್ರತಿಭಟನೆ ಹೊರಟು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗುವುದು. ಜನವಿರೋಧಿ ಬಂಡಿ ತೆರವು ಕಾರ್ಯಾಚರಣೆ ಹಿಂಪಡೆಯದಿದ್ದಲ್ಲಿ ಉಗ್ರ ಹೋರಾಟಕ್ಕೆ ಅಣಿಯಾಗಲಾಗುವುದೆಂದು ಎಚ್ಚರಿಸಿದರು.  ಸಂಘದ ಸೈಯದ್ ಶೆಕ್ಷಾವಲಿ, ಅಬ್ದುಲ್, ಚಂದ್ರಕಾಂತ, ಸೈಯದ್ ಮೋನೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Comment