ನಾಳೆ ಗಣರಾಜ್ಯೋತ್ಸವ ಎಲ್ಲೆಡೆ ಕಟ್ಟೆಚ್ಚರ

ನವದೆಹಲಿ, ಜ ೨೫- ನಾಳೆ ನಡೆಯುವ ಗಣರಾಜ್ಯೋತ್ಸವ ಸಂದರ್ಭದಲ್ಲಿ ಉಗ್ರರರು ದಾಳಿ ನಡೆಸಲು ಸಂಚು ರೂಪಿಸಿರುವ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ.
ದೆಹಲಿಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಬಿಗಿ ಬಂದೋಬಸ್ತ್ ಮಾಡಲಾಗಿದೆ.
ಸಾವಿರಾರು ಭದ್ರತಾ ಪಡೆಗಳ ನಿಯೋಜನೆ ಮುಖ ಚಹರೆ ಗುರುತಿಸುವ ವ್ಯವಸ್ಥೆ ಡ್ರೋಣ್ ಮತ್ತು ಸಿಸಿ ಕ್ಯಾಮರಾ ಗಳನ್ನು ಆಯ ಕಟ್ಟಿನ ಪ್ರದೇಶಗಳಲ್ಲಿ ಅಳವಡಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಬ್ರೇಜಿಲ್ ಅಧ್ಯಕ್ಷ ಜೆಹಿರ್ ಬೋಲ್ ಸೋನಾರೋ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುತ್ತಿದ್ದಾರೆ. ನಾಳೆ ರಾಜ್‌ಪಥ್ ನಿಂದ ೮ ಕಿ.ಮೀ. ಉದ್ದದ ಪೆರೇಡ್ ನಡೆಯುವ ಮಾರ್ಗದಲ್ಲಿ ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ವ್ಯಾಪಕ ಭದ್ರತೆ ಕೈಗೊಳ್ಳಲಾಗಿದೆ.
ಅತಿ ಎತ್ತರದ ಕಟ್ಟಡಗಳಲ್ಲಿ ಕ್ಷೀಪ್ರ ಗುರಿಕಾರರು ಸೇರಿದಂತೆ ಶ್ವಾನದಳಗಳನ್ನು ನಿಯೋಜಿಸಲಾಗಿದೆ.
ನಾಲ್ಕು ಪದರಗಳ ಮಾದರಿಯಲ್ಲಿ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದ್ದು, ೫ ಸಾವಿರದಿಂದ ೬ ಸಾವಿರದವರೆಗೆ ದೆಹಲಿ ಪೊಲೀಸರನ್ನು ನವದೆಹಲಿಯೊಂದರಲ್ಲೇ ನಿಯೋಜಿಸಲಾಗಿದೆ. ಇದರ ಜೊತೆಗೆ ೫೦ ತುಕಡಿಗಳ ಅರೆಸೇನಾ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ದೆಹಲಿ ಉಪ ಪೊಲೀಸ್ ಆಯುಕ್ತ ಈಶ್ ಸಿಂಗಲ್ ಹೇಳಿರುವುದನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಸಾರ್ವಜನಿಕ ಸ್ಥಳಗಳಲ್ಲೂ ಭದ್ರತೆಯನ್ನು ತೀವ್ರಗೊಳಿಸಲಾಗಿದೆ. ರಾಜಧಾನಿ ಪ್ರವೇಶಿಸುವ ವಾಹನಗಳನ್ನು ಕೇಂದ್ರೀಯ ಸೇನಾ ಪೊಲೀಸ್ ಪಡೆಗಳು ವ್ಯಾಪಕ ತಪಾಸಣೆ ನಡೆಸುತ್ತಿದೆ. ಮೆಟ್ರೋ, ರೈಲು, ವಿಮಾನ, ರೈಲು ನಿಲ್ದಾಣ ಹಾಗೂ ಬಸ್ ಟರ್ಮಿನಲ್ ಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ನಾಳೆ ನಡೆಯುವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸುಗಮ ಸಂಚಾರಕ್ಕಾಗಿ ಎರಡು ಸಾವಿರ ಮಂದಿ ಸಂಚಾರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು ರಾಷ್ಟ್ರಪತಿ ಭವನದಲ್ಲಿ ನಡೆಯವ ಕಾರ್ಯಕ್ರಮದಲ್ಲೂ ಸಾಕಷ್ಟು ಭದ್ರತೆ ಏರ್ಪಡಿಸಲಾಗಿದೆ.
ಹೊಟೇಲ್‌ಗೆ ಬರುವ ಟ್ಯಾಕ್ಸಿ, ಆಟೋ ರಿಕ್ಷಾ ಚಾಲಕರ ಬಗ್ಗೆ ಕಟ್ಟೆಚ್ಚರ ವಹಿಸುವಂತೆ ಮಾಲೀಕರಿಗೆ ಕಟ್ಟುನಿಟ್ಟಿನ ಆದೇಶ ನೀಡಿದೆ. ಅವರು ಬಂದು ಹೋಗುವ ಸಮಯದಲ್ಲಿ ತಪಾಸಣೆಕೊಳ್ಳುವಂತೆ ಸೂಚನೆ ನೀಡಿದೆ.
ರಾಜಪಥ್ ನಿಂದ ವಿಜಯ ಚೌಕ ಮತ್ತು ಇಂಡಿಯಾ ಗೇಟ್‌ವರೆಗೆ ಇಂದು ೬ ಗಂಟೆಯಿಂದ ನಾಳೆ ಪರೇಡ್ ಅಂತ್ಯಗೊಳ್ಳುವ ತನಕ ಅಂದರೆ ನಾಳೆ ೧೨ ಗಂಟೆವರೆಗೂ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.

Leave a Comment