ನಾಳೆ ಕಬಡ್ಡಿ ಪ್ರೀಮಿಯರ್ ಲೀಗ್ ಗೆ ಚಾಲನೆ

ದಾವಣಗೆರೆ.ಜ.11- ಸೃಷ್ಠಿ ಕಬಡ್ಡಿ ಅಕಾಡೆಮಿಯಿಂದ ರಾಷ್ಟ್ರೀಯ ಕಬಡ್ಡಿ ಕ್ರೀಡಾಪಟು ದಿ.ಎಸ್.ಎಸ್ ಮಂಜುನಾಥ್ ಸ್ಮರಣಾರ್ಥ ಜಿಲ್ಲಾ ಕ್ರೀಡಾಂಗಣದಲ್ಲಿ ನಾಳೆಯಿಂದ ಜ.15 ರವರೆಗೆ ಜಿಲ್ಲಾಮಟ್ಟದ ಹೊನಲು ಬೆಳಕಿನ ಕಬಡ್ಡಿ ಪ್ರೀಮಿಯರ್ ಲೀಗ್ ಹಮ್ಮಿಕೊಳ್ಳಲಾಗಿದೆ ಎಂದು ಕೆಎಸ್ ಐಸಿ ಮಾಜಿ ಅಧ್ಯಕ್ಷ ಡಿ.ಬಸವರಾಜ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.

ಕಳೆದ ವರ್ಷದಿಂದ ಕ್ರೀಡಾಪಟು ದಿ.ಎಸ್.ಎಸ್.ಮಂಜುನಾಥ್ ಸ್ಮರಣಾರ್ಥವಾಗಿ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಏರ್ಪಡಿಸುತ್ತಾ ಬರಲಾಗಿದೆ. ಈ ಪಂದ್ಯಾವಳಿಯಲ್ಲಿ ಕಟ್ಟೆಬಾಯ್ಸ್, ಪವನ್ ಶಾಮನೂರು, ನಿಟುವಳ್ಳಿ ಬಾಯ್ಸ್, ಕೆ.ಜಿ.ಭಗತ್ ಸಿಂಗ್ ಕ್ವಾಲಿಯಱ್ಸ್, ಕೆಟಿಆರ್ ಗ್ರೂಪ್ಸ್, ಭಾರತ್ ಕಾಲೋನಿ ವಾರಿಯಱ್ಸ್, ಭರತ್ ಗ್ರೂಪ್ಸ್, ಎನ್ ಸಿ ಟೈಗಱ್ಸ್ ತಂಡ ಸೇರಿದಂತೆ ಒಟ್ಟು 8 ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ. ನಾಳೆ ಬೆಳಗ್ಗೆ 12 ಗಂಟೆಗೆ ಶಿವಯೋಗಿ ಮಂದಿರದಿಂದ ಕ್ರೀಡಾಪಟುಗಳ ಮೆರವಣಿಗೆ ನಗರದ ವಿವಿಧ ಬಡಾವಣೆಗಳಲ್ಲಿ ಸಾಗಲಿದೆ. ನಂತರ ಸಂಜೆ 4ಕ್ಕೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶಾಸಕ ಶಾಮನೂರು ಶಿವಶಶಂಕರಪ್ಪ ಕಬಡ್ಡಿ ಪಂದ್ಯಾವಳಿ ಲೀಗ್ ಗೆ ಚಾಲನೆ ನೀಡಲಿದ್ದಾರೆ. 4 ದಿನಗಳ ಕಾಲ ನಡೆಯಲಿರುವ ಈ ಪಂದ್ಯಾವಳಿಯಲ್ಲಿ ಸುಮಾರು 10 ಸಾವಿರ ಜನರು ಕುಳಿತು ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ. ಪ್ರಥಮ ಬಹುಮಾನ 75 ಸಾವಿರ, ದ್ವಿತೀಯ ಬಹುಮಾನ, 40ಸಾವಿರ , ತೃತೀಯ ಬಹುಮಾನ 30 ಸಾವಿರ, 4ನೇ ಬಹುಮಾನವಾಗಿ 20 ಸಾವಿರ ಬಹುಮಾನ ನೀಡಲಾಗುವುದು.

ಕೊನೆಯ ನಾಲ್ಕು ತಂಡಗಳ ಆಟಗಾರರಿಗೆ ತಲಾ 30 ಗ್ರಾಂ ಬೆಳ್ಳಿ ಮೆಡಲ್ ನೀಡಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಅಧ್ಯಕ್ಷತೆ ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಸಂಸದ ಜಿ.ಎಂ ಸಿದ್ದೇಶ್ವರ್, ಮೇಯರ್ ರೇಖಾ ನಾಗರಾಜ್ ಮತ್ತಿತರರು ಆಗಮಿಸಲಿದ್ದಾರೆ. ಜ.15 ರಂದು ಡಿಕೆಪಿಎಲ್ ಸಂಘಟನಾ ಸಮಿತಿಯ ಅಧ್ಯಕ್ಷ ಎಂ.ದೊಡ್ಡಪ್ಪ ಅಧ್ಯಕ್ಷತೆಯಲ್ಲಿ ಸಮಾರೋಪ ನಡೆಯಲಿದೆ ಎಂದರು.
ಸುದ್ದಿಗೋಷ್ಟಿಯಲ್ಲಿ ಬಿ.ಲೋಕೇಶ್, ಕೊಂಡಜ್ಜಿ ಜಯಪ್ರಕಾಶ್, ದೊಡ್ಡಪ್ಪ ಎಂ, ಹೆಚ್.ಚಂದ್ರಪ್ಪ, ಪ್ರದೀಪ್ ಕುಮಾರ್, ಎ.ಎಂ.ರಾಮಣ್ಣ, ಎಂ.ನಾಗರಾಜ್, ಲೋಕಿಕೆರೆ ಸಚ್ಚಿದಾನಂದಸ್ವಾಮೀಜಿ,ಜಿ.ಎಸ್.ಮೋಹನ್ ರಾಜ್, ವೇಣುಗೋಪಾಲ್, ನಾಗೇಶ್, ಡಿ.ಶಿವಕುಮಾರ್,ಹೆಚ್.ಶ್ರೀನಿವಾಸ್, ಪರ್ವೇಜ್ ಸೇರಿದಂತೆ ಇತರರಿದ್ದರು.

Leave a Comment