ನಾಳೆ ಐಸಿಸಿ ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ-ಪಾಕ್ ಕದನ

ಓವೆಲ್(ಲಂಡನ್), ಜೂ.೧೭-ಐಸಿಸಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಅಂತಿಮ ಪಂದ್ಯದಲ್ಲಿ ಭಾರತ-ಪಾಕ್ ತಂಡಗಳು ಗೆಲುವಿಗಾಗಿ ನಾಳೆ ಹೋರಾಡಲಿವೆ.

ನಾಳೆ ಲಂಡನ್‌ನ ಕೆನ್ನಿಂಗ್ಟನ್ ಓವಲ್‌ನಲ್ಲಿ ನಡೆಯಲಿರುವ ಹೈವೊಲ್ಟೇಜ್ ಅಂತಿಮ ಪಂದ್ಯ ಕ್ರಿಕೆಟ್ ಅಭಿಮಾನಿಗಳಲ್ಲಿ ಕುತೂಹಲಕ್ಕೆ ಕಾರಣವಾಗಲಿದೆ.

ಗುರುವಾರ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಭಾರತ ೯ ವಿಕೆಟ್‌ಗಳ ಜಯ ಸಾಧಿಸಿ ಫೈನಲ್ ಪ್ರವೇಶ ಪಡೆದುಕೊಂಡಿದ್ದು, ಅತ್ತ ಆತಿಥೇಯ ಇಂಗ್ಲೆಂಡ್ ವಿರುದ್ಧ ಗೆಲುವು ದಾಖಲಿಸಿರುವ ಪಾಕ್ ಫೈನಲ್ ಪ್ರವೇಶ ಪಡೆದುಕೊಂಡಿದೆ.

ಪಾಕಿಸ್ತಾನ ಚಾಂಪಿಯನ್ಸ್ ಟ್ರೋಫಿಯಲ್ಲಿ ಫೈನಲ್ ಪ್ರವೇಶಿಸಿದ್ದು ಇದೇ ಮೊದಲು. ಆದರೆ ಭಾರತ ನಾಲ್ಕು ಬಾರಿ ಫೈನಲ್ ಪ್ರವೇಶಿಸಿದೆ. ಜತೆಗೆ ಎರಡು ಬಾರಿ ಚಾಂಪಿಯನ್ ಕೂಡ ಆಗಿದೆ. ಈ ಬಾರಿ ಲೀಗ್ ಹಂತದಲ್ಲಿ ಉಭಯ ತಂಡಗಳು ಮೊದಲ ಪಂದ್ಯದಲ್ಲೇ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ  ಪಾಕ್ ವಿರುದ್ದ ಭಾರತ ಭಾರಿ ಜಯಗಳಿಸಿತ್ತು.

ಐಸಿಸಿ ಆಯೋಜಿಸಿರುವ ಪ್ರಮುಖ ಟೂರ್ನಿಗಳಲ್ಲಿ ಭಾರತ ತಂಡವನ್ನು ಸೋಲಿಸಿಲ್ಲ ಎಂಬ ಕೊರಗು ಪಾಕಿಸ್ತಾನ ತಂಡದ ಮೇಲಿದೆ.

ಐಸಿಸಿ ರ್‍ಯಾಂಕಿಂಗ್ ಪಟ್ಟಿಯಲ್ಲಿ ೨ ಸ್ಥಾನದಲ್ಲಿರುವ ಭಾರತ ಹಾಗೂ ೭ನೇ ಸ್ಥಾನದಲ್ಲಿರುವ ಪಾಕಿಸ್ತಾನ ಇಲ್ಲಿಯವರೆಗೂ ಒಟ್ಟು ೧೨೮ ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ೫೨ ಪಂದ್ಯಗಳಲ್ಲಿ ಭಾರತ, ೭೨ ಪಂದ್ಯಗಳಲ್ಲಿ ಪಾಕ್ ಗೆಲುವು ಸಾಧಿಸಿದ್ದು, ೪ ಪಂದ್ಯಗಳಿಂದ ಫಲಿತಾಂಶ ಹೊರಬಿದ್ದಿಲ್ಲ.

ಕಳೆದ ೧೦ ಪಂದ್ಯಗಳು

೨೦೧೦ರಿಂದ ೨೦೧೭ರವರೆಗೆ ಕಳೆದ ೧೦ ಪಂದ್ಯಗಳ ಇತಿಹಾಸ ನೋಡುವುದಾದರೆ ಭಾರತ ಆಡಿರುವ ೧೦ರಲ್ಲಿ ೭ ಪಂದ್ಯಗಳಲ್ಲಿ ಗೆಲುವು ಸಾಧಿಸಿ, ಉಳಿದ ೩ ಪಂದ್ಯಗಳಲ್ಲಿ ಸೋಲು ಕಂಡಿದೆ.

ಚಾ. ಟ್ರೋಫಿಯಲ್ಲಿ ಮುಖಾಮುಖಿ

ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಏಕದಿನ ಟೂರ್ನಿಯಲ್ಲಿ ಭಾರತ-ಪಾಕಿಸ್ತಾನ ತಂಡಗಳು ಒಟ್ಟಾರೆ ಎಲ್ಲಾ ದೇಶಗಳ ವಿರುದ್ದ ೨೮ ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಭಾರತ ೧೮ ಪಂದ್ಯಗಳಲ್ಲಿ ಗೆಲುವು, ೭ ಪಂದ್ಯಗಳಲ್ಲಿ ಸೋಲು ಕಂಡಿದೆ. ಇತ್ತ ಪಾಕ್ ತಂಡ ಆಡಿರುವ ೨೨ ಪಂದ್ಯಗಳಲ್ಲಿ ೧೦ರಲ್ಲಿ ಗೆಲುವು ಹಾಗೂ ೧೨ ಪಂದ್ಯಗಳಲ್ಲಿ ಸೋತಿದೆ. ಮೂರು ಪಂದ್ಯಗಳಿಂದ ಫಲಿತಾಂಶ ಬಂದಿಲ್ಲ.

ಈ ಹಿಂದೆ ಭಾರತ ೨೦೦೨ ಹಾಗೂ ೨೦೧೩ರಲ್ಲಿ ಚಾಂಪಿಯನ್ ತಂಡವಾಗಿ ಹೊರಹೊಮ್ಮಿದ್ದು, ಪಾಕಿಸ್ತಾನ ೨೦೦೦, ೨೦೦೪ ಹಾಗೂ ೨೦೦೯ರಲ್ಲಿ ಸೆಮಿಫೈನಲ್‌ಗೆ ಮಾತ್ರ ಲಗ್ಗೆ ಇಟ್ಟಿದೆ.

ಇದರ ಜತೆಗೆ ಈ ಹಿಂದಿನ ಇತಿಹಾಸ ನೋಡಿದಾಗ ಐಸಿಸಿ ಆಯೋಜಿಸಿರುವ ಪಂದ್ಯಗಳಲ್ಲಿ ಟೀಂ ಇಂಡಿಯಾ ಜಯಭೇರಿ ಬಾರಿಸಿದೆ. ೨೦೧೫ರ ಏಕದಿನ ವಿಶ್ವಕಪ್, ೨೦೧೪ರ ಏಷ್ಯಾಕಪ್, ೨೦೧೩ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಗೆಲುವಿನ ಕೇಕೆ ಹಾಕಿದೆ.

 

Leave a Comment