ನಾಳೆ ಎಪಿಎಂಸಿ ಚುನಾವಣೆ; ಅಂತಿಮ ಕಸರತ್ತಿನಲ್ಲಿ ಅಭ್ಯರ್ಥಿಗಳು

ದಾವಣಗೆರೆ.ಜ.11; ನಾಳೆ ಜಿಲ್ಲೆಯ ಆರು ತಾಲೂಕುಗಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಗಳಿಗೆ ಮತದಾನ ನಡೆಯಲಿದೆ. ಚುನಾವಣಾ ಕಣಕ್ಕಿಳಿದಿರುವ ಅಭ್ಯರ್ಥಿಗಳು ಅಂತಿಮವಾಗಿ ಬಿರುಸಿನ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಮತದಾರರ ಮನವೊಲಿಕೆಗೆ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಈ ಬಾರಿ ತಮಗೆ ಮತ ಹಾಕುವಂತೆ ಕೈ ಮುಗಿದು ಮನವಿ ಮಾಡುತ್ತಿದ್ದಾರೆ. ತಾವು ಆಯ್ಕೆಯಾದರೆ ಸಮಸ್ಯೆಗಳಿಗೆ ಸ್ಪಂದಿಸುವ ಭರವಸೆ ನೀಡುತ್ತಿದ್ದಾರೆ. ಸ್ನೇಹಿತರು, ಬಂಧುಗಳು, ಪರಿಚಯಸ್ಥರ ಮೂಲಕ ಮತದಾರರ ಮನ ಸೆಳೆಯುವ ಕೆಲಸ ಮಾಡುತ್ತಿದ್ದಾರೆ. ಇನ್ನೊಂದೆಡೆ ಅಭ್ಯರ್ಥಿಗಳ ಬೆಂಬಲಿಗರು ಕೂಡ ಮತದಾರರ ಮನೆ ಮನೆಗೆ ತೆರಳಿ ತಮ್ಮ ನಾಯಕರ ಪರವಾಗಿ ಮತಯಾಚಿಸುತ್ತಿದ್ದಾರೆ.

ತಾಲೂಕಿನ ನಗರ ವ್ಯಾಪ್ತಿಯ ಗ್ರಾಮಗಳಲ್ಲಿ ಚುನಾವಣಾ ಅಬ್ಬರ ಜೋರಾಗಿದೆ. ವಿವಿಧ ಪಕ್ಷಗಳ ಹಲವು ಪ್ರಭಾವಿ ಮುಖಂಡರು ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಮತದಾರರ ಗಮನ ಸೆಳೆಯುವ ಕೆಲಸ ಮಾಡುತ್ತಿರುವುದು ಕಂಡುಬರುತ್ತಿದೆ. ಈ ಹಿಂದಿನ ವರ್ಷಗಳ ಎಪಿಎಂಸಿ ಚುನಾವಣೆಗೆ ಹೋಲಿಕೆ ಮಾಡಿದರೆ ಪ್ರಸ್ತುತ ವರ್ಷದ ಚುನಾವಣೆ ಸಾಕಷ್ಟು ಜಿದ್ದಾಜಿದ್ದಿನ ಅಖಾಡಕ್ಕೆ ಎಡೆ ಮಾಡಿಕೊಟ್ಟಿದೆ.  ಪಕ್ಷಗಳಿಗೂ ಪ್ರತಿಷ್ಠೆ: ಎಪಿಎಂಸಿ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ ಚಿಹ್ನೆ ಆಧಾರದ ಮೇಲೆ ನಡೆಯುವುದಿಲ್ಲ. ಆದರೆ ಪಕ್ಷಗಳ ಬೆಂಬಲಿತ ಅಭ್ಯರ್ಥಿಗಳು ಸ್ಪರ್ಧಿಸುತ್ತಾರೆ. ಇದರಿಂದ ರಾಜಕೀಯ ಪಕ್ಷಗಳು ತಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿ ಎಪಿಎಂಸಿಗಳ ಆಡಳಿತ ಚುಕ್ಕಾಣಿ ಹಿಡಿಯುವ ಕಸರತ್ತು ನಡೆಸುತ್ತಿವೆ. ಇದಕ್ಕಾಗಿ ನಾನಾ ರೀತಿಯ ತಂತ್ರಗಾರಿಕೆಯೂ ಮಾಡುತ್ತಿವೆ. ಜಿಲ್ಲೆಯ ಪ್ರಮುಖ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಪಕ್ಷಗಳು ತಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನು ಅಖಾಡಕ್ಕಿಳಿಸಿವೆ. ಆಯಾ ಪಕ್ಷಗಳ ಅಭ್ಯರ್ಥಿಗಳ ಪರವಾಗಿ ಸ್ಥಳೀಯ ಮುಖಂಡರು ಮತದಾರರ ಮನೆ ಮನೆಗೆ ತೆರಳಿ ಮತಯಾಚಿಸುತ್ತಿದ್ದಾರೆ. ಈ ಮೂಲಕ ಅತೀ ಹೆಚ್ಚಿನ ಕ್ಷೇತ್ರಗಳನ್ನು ತಮ್ಮ ಕೈವಶ ಮಾಡಿಕೊಳ್ಳಲು ಯತ್ನಿಸುತ್ತಿವೆ. ಇದರ ಮೂಲಕ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ತಮ್ಮ ಪಕ್ಷ ಎಷ್ಟು ಬಲಿಷ್ಠವಾಗಿದೆ ಎಂಬುವುದನ್ನು ಸಾಬೀತಪಡಿಸುವ ಶಕ್ತಿ ಪ್ರದರ್ಶನಕ್ಕೆ ಮುಂದಾಗಿವೆ. ಒಟ್ಟಾರೆ ಎಪಿಎಂಸಿ ಚುನಾವಣಾ ಕಣ ರಂಗೇರ ತೊಡಗಿದ್ದು, ಮತದಾರರ ಮನವೊಲಿಕೆಗೆ ಅಭ್ಯರ್ಥಿಗಳು ನಾನಾ ರೀತಿಯ ಕಸರತ್ತು ನಡೆಸುತ್ತಿದ್ದಾರೆ. ಮತದಾರರ ಒಲವು ಯಾರ ಕಡೆಗೆ ಹಾಗೂ ಯಾರಿಗೆ ವಿಜಯಲಕ್ಷ್ಮೀ ಒಲಿಯಲಿದ್ದಾಳೆ ಎಂಬುದು ನಾಳೆಗೆ ಭದ್ರವಾಗಲಿದೆ.

Leave a Comment