ನಾಳೆಯಿಂದ ಸಾರಿಗೆ ಸಂಚಾರ ಆರಂಭ : ಆಟೋ, ಟ್ಯಾಕ್ಸಿಗೂ ಅನುಮತಿ, ಮಾಸ್ಕ್ ಕಡ್ಡಾಯ, ಭಾನುವಾರ ಲಾಕ್‌ಡೌನ್

‌ಬೆಂಗಳೂರು, ಮೇ ೧೮- ಕೊರೊನಾ ಲಾಕ್‌ಡೌನ್‌ನಿಂದ ಕಳೆದ 54 ದಿನಗಳಿಂದ ಬಂದ್ ಆಗಿದ್ದ ಸಾರ್ವಜನಿಕ ಸಾರಿಗೆ ನಾಳೆಯಿಂದ ಪುನರಾರಂಭವಾಗಲಿದ್ದು, ಕಂಟೈನ್ಮೆಂಟ್ ಜೋನ್ ಹೊರತುಪಡಿಸಿ ಉಳಿದೆಲ್ಲೆಡೆ ಸಂಚಾರ ಆರಂಭವಾಗಲಿದೆ.

ಬಿಎಂಟಿಸಿ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಖಾಸಗಿ ಬಸ್, ಆಟೋ ರಿಕ್ಷಾ, ಕ್ಯಾಬ್‌ಗಳು ನಾಳೆಯಿಂದ ರಸ್ತೆಗಿಳಿಯಲಿವೆ. ಹಾಗೆಯೇ ಕೊರೊನಾ ನಿಯಂತ್ರಣಕ್ಕೂ ಪ್ರತಿ ಭಾನುವಾರ ಸಂಪೂರ್ಣ ಲಾಕ್‌ಡೌನ್‌ ಮಾಡಲು ಸರ್ಕಾರ ತೀರ್ಮಾನಿಸಿದ್ದು, ಅಂದು ಇಡೀ ರಾಜ್ಯದಲ್ಲಿ ಅಘೋಷಿತ ಬಂದ್ ಪರಿಸ್ಥಿತಿ ಇರಲಿದೆ.

4ನೇ ಲಾಕ್‌ಡೌನ್‌ಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ನೀಡಿರುವ ಮಾರ್ಗಸೂಚಿಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹೊಸಮಾರ್ಗಸೂಚಿಗಳನ್ನು ರೂಪಿಸುವ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪನವರ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿಂದು ನಡೆದ ಸಚಿವ ಸಂಪುಟದ ಹಿರಿಯ ಸದಸ್ಯರು ಹಾಗೂ ಅಧಿಕಾರಿಗಳ ಸಭೆಯಲ್ಲಿ, ನಾಳೆಯಿಂದ ಲಾಕ್‌ಡೌನ್‌ನನ್ನು ಕೆಲ ಷರತ್ತುಗಳೊಡನೆ ಸಡಿಲಿಸಲು ತೀರ್ಮಾನಿಸಿ ಬಸ್, ಆಟೋ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.

ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಕೇಂದ್ರದ ಮಾರ್ಗಸೂಚಿ ಹಿನ್ನೆಲೆಯಲ್ಲಿ ಯಾವ ಯಾವ ಚಟುವಟಿಕೆಗಳನ್ನು ರಾಜ್ಯದಲ್ಲಿ ನೀಡಬೇಕು ಎಂಬ ಅನುಮತಿ ಮೇರೆಗೆ ಎಲ್ಲರ ಜತೆ ಸುದೀರ್ಘವಾಗಿ ಚರ್ಚಿಸಿ ತೀರ್ಮಾನ ಮಾಡಲಾಗಿದ್ದು, ಮೇ 31 ರವರೆಗೂ ಲಾಕ್‌ಡೌನ್ ಮುಂದುವರೆಸಲಾಗುವುದು. ಆದರೆ ಕೆಲ ಕ್ಷೇತ್ರಗಳಿಗೆ ವಿನಾಯ್ತಿ ನೀಡಲು ತೀರ್ಮಾನಿಸಿದ್ದು, ಅದರಂತೆ ಸಾರ್ವಜನಿಕ ಸಾರಿಗೆ ನಾಳೆಯಿಂದ ಆರಂಭವಾಗಲಿದೆ ಎಂದರು.

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಎಲ್ಲ ನಿಗಮಗಳ ಹಾಗೂ ಬಿಎಂಟಿಸಿ ಬಸ್‌ಗಳು ನಾಳೆಯಿಂದ ಜನರ ಅನುಕೂಲಕ್ಕಾಗಿ ಓಡಾಟ ಆರಂಭಿಸಲಿದ್ದು, ಒಂದು ಬಸ್‌ನಲ್ಲಿ 30 ಜನಕ್ಕೆ ಮಾತ್ರ ಪ್ರಯಾಣಿಸಲು ಅವಕಾಶ ನೀಡುವ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.

ಈ ಎಲ್ಲ ಸಾರ್ವಜನಿಕ ಸಾರಿಗೆ ಓಡಾಟ ಬೆಳಗ್ಗೆ 7 ರಿಂದ ರಾತ್ರಿ 7ರವರೆಗೂ ಮಾತ್ರ ಇರಲಿದ್ದು, ಎಂದಿನಂತೆ ಮೇ 31 ರವರೆಗೂ ರಾತ್ರಿ ಕರ್ಫ್ಯೂ ರಾಜ್ಯಾದ್ಯಂತ ಮುಂದುವರೆಯಲಿದೆ ಎಂದರು.

ಪ್ರಯಾಣದರ ಏರಿಕೆ ಇಲ್ಲ
ಬಸ್‌ಗಳಲ್ಲಿ ಸೀಮಿತ ಜನರ ಓಡಾಟಕ್ಕೆ ಅವಕಾಶ ಕಲ್ಪಿಸಿದ್ದರೂ, ಪ್ರಯಾಣ ದರದಲ್ಲಿ ಯಾವುದೇ ಏರಿಕೆ ಇರುವುದಿಲ್ಲ. ಆಗುವ ನಷ್ಟವನ್ನು ಸರ್ಕಾರವೇ ಸಾರಿಗೆ ನಿಗಮಗಳಿಗೆ ತುಂಬಿಕೊಡಲಿದೆ ಎಂದರು.
ಸರ್ಕಾರಕ್ಕೆ ನಷ್ಟವಾದರೂ ಚಿಂತೆ ಇಲ್ಲ. ಜನರ ಆರೋಗ್ಯ ರಕ್ಷಣೆಯನ್ನು ಗಮನದಲ್ಲಿಟ್ಟುಕೊಂಡು ಒಂದು ಬಸ್‌ನಲ್ಲಿ 30 ಜನರ ಓಡಾಟಕ್ಕೆ ಅವಕಾಶ ನೀಡಲು ತೀರ್ಮಾನ ಕೈಗೊಳ್ಳಲಾಯಿತು ಎಂದರು.

ಹಾಗೆಯ ಆಟೋ ರಿಕ್ಷಾಗಳು, ಕ್ಯಾಬ್‌ಗಳ ಓಡಾಟಕ್ಕೂ ಅವಕಾಶ ನೀಡಲಾಗಿದೆ. ಆಟೋ ರಿಕ್ಷಾದಲ್ಲಿ ಚಾಲಕ ಬಿಟ್ಟು ಇಬ್ಬರಿಗೆ ಹಾಗೂ ಕ್ಯಾಬ್‌ಗಳಲ್ಲೂ ಚಾಲಕ ಬಿಟ್ಟು ಇಬ್ಬರ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ಖಾಸಗಿ ಬಸ್‌ಗಳು ಓಡಾಟಕ್ಕೂ ಅನುಮತಿ ನೀಡಲಾಗಿದೆ ಎಂದು ಅವರು ಹೇಳಿದರು.

ಬಸ್ ಸೇರಿದಂತೆ ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಮಾಸ್ಕ್ ಧರಿಸದೇ ಇದ್ದರೆ ಅಂತಹ ಪ್ರಯಾಣಿಕರಿಗೆ ದಂಡ ವಿಧಿಸಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಷ್ಟಪಡಿಸಿದರು.

ಕೊರೊನಾ ತಡೆಗಟ್ಟಲು ಕಂಟೈನ್ಮೆಂಟ್ ಜೋನ್‌ಗಳಲ್ಲಿ ಮತ್ತಷ್ಟು ಬಿಗಿ ಭದ್ರತೆ ಕಲ್ಪಿಸಲಾಗುವುದು. ಕಂಟೈನ್ಮೆಂಟ್ ಜೋನ್‌ಗಳಲ್ಲಿ ಕಾನೂನುಬಾಹಿರಿ ವರ್ತನೆ ಕಂಡು ಬಂದರೆ ಅಂತವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದರು.

ಲಾಕ್‌ಡೌನ್ ಈ ತಿಂಗಳ 31 ರವರೆಗೂ ಮುಂದುವರೆಯರುವುದರಿಂದ ಸಿನಿಮಾ, ಮಾಲ್, ಹೋಟೆಲ್, ಜಿಮ್, ಕ್ಲಬ್ ಸ್ವೀಮಿಂಗ್ ಫೂಲ್, ಬಾರ್ ಬಂದ್ ಮುಂದುವರೆಯಲಿದೆ ಹೋಟೆಲ್‌ಗಳಲ್ಲಿ ಪಾರ್ಸಲ್‌ಗಳಿಗೆ ಅವಕಾಶ ಇದೆ ಎಂದರು.

ಪಾರ್ಕ್ ಆರಂಭ
ನಾಳೆಯಿಂದ ಸೆಲೂನ್ ಸೇರಿದಂತೆ ಎಲ್ಲ ಅಂಗಡಿ ಮುಂಗಟ್ಟುಗಳು, ಬೀದಿ ಬದಿ ವ್ಯಾಪಾರಿಗಳಿಗೂ ಅವಕಾಶ ನೀಡಲಾಗಿದೆ. ಹಾಗೆಯೇ ಪಾರ್ಕ್‌ಗಳನ್ನು ಬೆಳಗ್ಗೆ 7 ರಿಂದ 9.30 ರವರೆಗೆ ಹಾಗೂ ಸಂಜೆ 5 ರಿಂದ 7 ರವರೆಗೂ ತೆರೆಯಲು ತೀರ್ಮಾನಿಸಲಾಗಿದೆ. ಬೆಂಗಳೂರು ನಗರದ ಕಬ್ಬನ್ ಪಾರ್ಕ್, ಲಾಲ್‌ಬಾಗ್ ಸೇರಿದಂತೆ ಎಲ್ಲ ಪಾರ್ಕ್‌ಗಳು ಬೆಳಗ್ಗೆ 2 ಗಂಟೆ ಹಾಗೂ ಸಂಜೆ 2 ಗಂಟೆ ತೆರೆಯಲಿವೆ ಎಂದು ಅವರು ಹೇಳಿದರು.

ರಾಜ್ಯದ ಒಳಗೆ ರೈಲು ಓಡಾಟಕ್ಕೂ ಅವಕಾಶ ನೀಡಲು ತೀರ್ಮಾನಿಸಲಾಗಿದೆ. ಅಂತರ್ ರಾಜ್ಯ ಓಡಾಟಕ್ಕೆ ಅವಕಾಶ ಇಲ್ಲ. ಹೊರ ರಾಜ್ಯಗಳಿಂದ ರಾಜ್ಯಕ್ಕೆ ಬರುವವರಿಗೆ 14 ದಿನಗಳ ಕ್ವಾರಂಟೈನ್ ಕಡ್ಡಾಯ. ರಾಜ್ಯದಿಂದ ಹೊರ ರಾಜ್ಯಗಳಿಗೆ ಹೋಗುವವರಿಗೆ ಯಾವುದೇ ನಿರ್ಬಂಧ ಇಲ್ಲ. ಆದರೆ ಹೊರ ರಾಜ್ಯಗಳಿಂದ ಬರುವವರಿಗೆ ಕ್ವಾರಂಟೈನ್ ಮಾಡುವ ತೀರ್ಮಾನದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಇಂದು ನಡೆದ ಸಭೆಯಲ್ಲಿ ಉಪಮುಖ್ಯಮಂತ್ರಿಗಳಾದ ಲಕ್ಷ್ಮಣಸವದಿ, ಡಾ. ಸಿ.ಎನ್. ಅಶ್ವತ್ಥ್‌ನಾರಾಯಣ, ಸಚಿವರುಗಳಾದ ಬಸವರಾಜಬೊಮ್ಮಾಯಿ, ವಿ. ಸೋಮಣ್ಣ, ಡಾ.ಕೆ. ಸುಧಾಕರ್, ಆರ್. ಅಶೋಕ್, ನಾಗೇಶ್, ಎಸ್.ಟಿ. ಸೋಮಶೇಖರ್, ಬೈರತಿ ಬಸವಾರಜು ಸೇರಿದಂತೆ ಹಲವು ಹಿರಿಯ ಸಚಿವರುಗಳು, ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ವಿಜಯಭಾಸ್ಕರ್, ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

4ನೇ ಹಂತದ ಲಾಕ್‌ಡೌನ್‌ನನ್ನು ಕೆಲ ವಿನಾಯ್ತಿಗಳೊಂದಿಗೆ ಮುಂದುವರೆಸಿರುವ ರಾಜ್ಯ ಸರ್ಕಾರ ಪ್ರತಿ ಭಾನುವಾರ ಸಂಪೂರ್ಣ ಲಾಕ್‌ಡೌನ್‌ಗೆ ತೀರ್ಮಾನ ಕೈಗೊಂಡಿದೆ.
ಪ್ರತಿ ಭಾನುವಾರ ರಾಜ್ಯದಲ್ಲಿ ಸಂಪೂರ್ಣ ಲಾಕ್‌ಡೌನ್ ಇರಲಿದ್ದು, ಅಂದು ಯಾವುದೇ ಅಂಗಡಿ ಮುಂಗಟ್ಟುಗಳು ತೆರೆಯುವಂತಿಲ್ಲ. ಹಾಗೆಯೇ ವಾಹನಗಳ ಓಡಾಟಕ್ಕೂ ನಿರ್ಬಂಧ ಹೇರಲಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.

ಪ್ರತಿ ಭಾನುವಾರ ಸಂಪೂರ್ಣ ಲಾಕ್‌ಡೌನ್ ಮೇ 31 ರವರೆಗೂ ಇರಲಿದೆ. ಅಂದು ಯಾರೂ ಮನೆಯಿಂದ ಹೊರಗೆ ಓಡಾಡುವಂತಿಲ್ಲ ಎಂದು ಸ್ಪಷ್ಟಪಡಿಸಿದರು.
ಪ್ರತಿ ಭಾನುವಾರ ಯಾವುದೇ ವಾಹನಗಳ ಓಡಾಟಕ್ಕೂ ಅವಕಾಶ ನೀಡುವುದಿಲ್ಲ ಎಂದು ಹೇಳುವ ಮೂಲಕ ಭಾನುವಾರ ರಾಜ್ಯದಲ್ಲಿ ಅಘೋಷಿತ ಬಂದ್ ಇರಲಿದೆ ಎಂಬ ಸುಳಿವನ್ನು ಅವರು ನೀಡಿದರು.

Leave a Comment