ನಾಳೆಯಿಂದ ರಂಗನಾಥಸ್ವಾಮಿ ನೂತನ ದೇವಾಲಯ ಪ್ರವೇಶೋತ್ಸವ

ತಿಪಟೂರು, ನ. ೯- ತಾಲ್ಲೂಕಿನ ಕಸಬಾ ಹೋಬಳಿ ಮಾರುಗೊಂಡನಹಳ್ಳಿಯಲ್ಲಿ ಶ್ರೀ ರಂಗನಾಥಸ್ವಾಮಿಯವರ ನೂತನ ದೇವಾಲಯ ಪ್ರವೇಶ, ಶ್ರೀ ಸ್ವಾಮಿಯವರ ವಿಗ್ರಹ ಪುನರ್ ಪ್ರತಿಷ್ಠಾಪನೆ, ನೂತನ ಶಿಖರ ಕಲಶ ಮತ್ತು ನೂತನ ಗರುಡ ಸ್ತಂಭ ಪ್ರತಿಷ್ಠಾಪನೆ ಹಾಗೂ ಶ್ರೀ ರಂಗನಾಥ ಸ್ವಾಮಿಯವರ ನೂತನ ಪ್ರಸಾದ ನಿಲಯದ ಲೋಕಾರ್ಪಣಾ ಸಮಾರಂಭವು ನ. 10 ಮತ್ತು 11 ರಂದು ನಡೆಯಲಿದೆ.

ನ. 10 ರಂದು ಗಣಪತಿ ಪೂಜೆ, ಧ್ವಜಾರೋಹಣ, ಶ್ರೀ ಅರುವಿನ ಲಕ್ಕಮ್ಮದೇವಿಯವರ ಕಳಸದೊಂದಿಗೆ ಸಕಲ ದೇವರುಗಳ ಆಗಮನದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಉತ್ಸವ ನಡೆಯಲಿದೆ. ಸಾನಿಧ್ಯವನ್ನು ಕೆರೆಗೋಡಿ-ರಂಗಾಪುರ ಸುಕ್ಷೇತ್ರಾಧ್ಯಕ್ಷರಾದ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿ, ತಮ್ಮಡಿಹಳ್ಳಿ ಶ್ರೀ ಡಾ. ಅಭಿನವ ಮಲ್ಲಿಕಾರ್ಜುನ ದೇಶಿಕೇಂದ್ರ ಸ್ವಾಮೀಜಿ, ಗುರುಕುಲಾನಂದಾಶ್ರಮದ ಶ್ರೀ ಇಮ್ಮಡಿ ಕರಿಬಸವದೇಶಿಕೇಂದ್ರ ಸ್ವಾಮೀಜಿ, ಹೊನ್ನವಳ್ಳಿ ಮಠದ ಶ್ರೀ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ಮತ್ತಿತರರು ಭಾಗವಹಿಸಲಿದ್ದಾರೆ.

ಅಂದು ರಾತ್ರಿ 10 ಗಂಟೆಗೆ ವಿವಿಧ ಪೂಜಾ ಕಾರ್ಯಕ್ರಮಗಳೊಂದಿಗೆ ಶ್ರೀ ರಂಗನಾಥಸ್ವಾಮಿಯವರ ನೂತನ ದೇವಾಲಯ ಪ್ರವೇಶ ಹಾಗೂ ಪುನರ್ ಪ್ರತಿಷ್ಠಾಪನೆ, ಗರುಡಸ್ತಂಭ ಪ್ರತಿಷ್ಠಾಪನಾ ಮಹೋತ್ಸವ ನಡೆಯಲಿದೆ.
ನ. 11 ರಂದು ಕೆರೆಗೋಡಿ-ರಂಗಾಪುರ ಸುಕ್ಷೇತ್ರಾಧ್ಯಕ್ಷರಾದ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿಯವರ ಅಮೃತ ಹಸ್ತದಿಂದ ಶಿಖರ ಕಲಶ ಪ್ರತಿಷ್ಠಾಪನಾ ಮಹೋತ್ಸವ ಹಾಗೂ 108 ಕಲಶಗಳಿಂದ ಜಲಾಭಿಷೇಕ ನಡೆಯಲಿದ್ದು, ಶ್ರೀ ಸುದರ್ಶನ ಹೋಮ, ಪೂರ್ಣಾಹುತಿ, ಮಹಾಮಂಗಳಾರತಿ ಹಾಗೂ ಅಂದು ಮಧ್ಯಾಹ್ನ 12.30ಕ್ಕೆ ಧಾರ್ಮಿಕ ಸಮಾರಂಭ ಮತ್ತು ಮಹಾದಾಸೋಹ ನಡೆಯಲಿದೆ.

Leave a Comment