ನಾಳೆಯಿಂದ ಭಾರತ-ಆಸೀಸ್ ಮೊದಲ ಟೆಸ್ಟ್

ಮುಂಬೈ, ಡಿ ೫- ನಾಳೆಯಿಂದ ಆಡಿಲೇಡ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಮೊದಲ ಟೆಸ್ಟ್‌ಗೆ ಟೀಂ ಇಂಡಿಯಾ ತನ್ನ ೧೨ ಸದಸ್ಯರ ತಂಡವನ್ನು ಪ್ರಕಟಿಸಿದ್ದು, ತಂಡದಲ್ಲಿ ರೋಹಿತ್ ಶರ್ಮಾಗೆ ಅವಕಾಶ ನೀಡಲಾಗಿದೆ. ನಾಳೆ ಬೆಳಿಗ್ಗೆ ೫.೩೦ಕ್ಕೆ ಮಹತ್ವ ಪಂದ್ಯ ಆರಂಭವಾಗಲಿದ್ದು, ಟೀಂ ಇಂಡಿಯಾ ಹೊಸ ಇತಿಹಾಸ ನಿರ್ಮಿಸುವ ತವಕದಲ್ಲಿದೆ.

ತಂಡದಲ್ಲಿ ಈ ಬಾರಿ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಹಾಗೂ ಉದಯೋನ್ಮುಖ ಸ್ಪಿನ್ನರ್ ಕುಲದೀಪ್ ಯಾದವರನ್ನು ಆಯ್ಕೆಗೆ ಪರಿಗಣಿಸದೆ ಹೊರಗಿಟ್ಟಿರುವುದು ಅಚ್ಚರಿ ತಂದಿದ್ದು, ರೋಹಿತ್‌ಗೆ ಅವಕಾಶ ನೀಡಿರುವುದು ಅಭಿಮಾನಿಗಳಲ್ಲಿ ಸಂತಸ ತಂದಿದೆ. ನಾಳಿನ ಪಂದ್ಯದಲ್ಲಿ ಕೊಹ್ಲಿ ಪಡೆ ಕೇವಲ ೪ ಬೌಲರ್‌ಗಳೊಂದಿಗೆ ಕಣಕ್ಕಿಳಿಯುತ್ತಿದೆ. ವೇಗಿಗಳ ವಿಭಾಗದಲ್ಲಿ ಬುಮ್ರಾ, ಇಶಾಂತ್ ಶರ್ಮಾ ಹಾಗೂ ಶಮಿಇದ್ದು, ಅಶ್ವಿನ್ ತಂಡದಲ್ಲಿರುವ ಏಕೈಕ ಸ್ಪಿನ್ನರ್ ಆಗಿದ್ದಾರೆ.

ಇನ್ನು ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಕೊನೆಯ ಬಾರಿಗೆ ಟೆಸ್ಟ್ ತಂಡದಲ್ಲಿ ಕಾಣಿಸಿಕೊಂಡಿದ್ದ ರೋಹಿತ್ ಶರ್ಮಾ ೧೨ ಸದಸ್ಯರ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಮುರುಳಿ ವಿಜಯ್ ಹಾಗೂ ಕೆಎಲ್ ರಾಹುಲ್ ಆರಂಭಿಕರಾಗಿ ಕಣಕ್ಕಿಳಿಯಲಿದ್ದು, ಕೊಹ್ಲಿ ಹಾಗೂ ಪೂಜಾರ ೩ ಮತ್ತು ೪ನೇ ಕ್ರಮಾಂಕದಲ್ಲಿ, ರಹಾನೆ ೫ನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ಇನ್ನು ರೋಹಿತ್ ಅಥವಾ ಹನುಮ ವಿಹಾರಿ ಇಬ್ಬರಲ್ಲೊಬ್ಬರು ಮಾತ್ರ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯಲಿದ್ದಾರೆ. ರಿಷಭ್ ಪಂತ್ ಕೀಪಿಂಗ್ ಜವಾಬ್ದಾರಿ ಹಾಗೂ ೭ ನೇಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಲಿದ್ದಾರೆ.

ರೋಹಿತ್‌ರನ್ನು ತಂಡಕ್ಕೆ ಸೇರಿಸಿಕೊಳ್ಳದಿದ್ದರೆ ನನ್ನ ಬೆಂಬಲ ಆಸ್ಟ್ರೇಲಿಯಾಕ್ಕೆ ಎಂದು ಗಾಳಿಸುದ್ದಿ ಹಬ್ಬಿಸಿದ್ದಕ್ಕೆ ಹರಭಜನ್ ಸಿಂಗ್ ಕಿಡಿ ಕಾರಿದ್ದಾರೆ.
ಈ ಸುದ್ದಿ ವೈರಲ್ ಆಗಿ ಟ್ವಿಟರ್‌ನಲ್ಲಿ ಭಜ್ಜಿ ವಿರುದ್ಧ ಟೀಕೆಗಳು ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಭಾರತ ತಂಡದ ಹಿರಿಯ ಆಟಗಾರ, ತಕ್ಷಣ ಆ ಪೋಟೋವನ್ನು ತಮ್ಮ ಟ್ವಿಟರ್‌ನಲ್ಲಿ ಶೇರ್ ಮಾಡಿ, ಇದೊಂದು ಸುಳ್ಳು ಸುದ್ದಿ. ಜನರು ಹೇಗೆ ಈ ರೀತಿಯ ಮೂರ್ಖತನದ ಹೇಳಿಕೆಗಳನ್ನು ಬೇರೆಯವರ ಹೆಸರಿನಲ್ಲಿ ಬರೆಯುತ್ತಾರೋ ನನಗೆ ಗೊತ್ತಿಲ್ಲ. ದಯವಿಟ್ಟು ಈ ರೀತಿ ಮಾಡುವುದನ್ನು ನಿಲ್ಲಿಸಿ. ಎಲ್ಲರೂ ಟೀಮ್ ಇಂಡಿಯಾವನ್ನು ಬೆಂಬಲಿಸಿ ಎಂದು ಟ್ವೀಟ್ ಮಾಡಿದ್ದಾರೆ.

Leave a Comment