ನಾಳೆಯಿಂದ ಜಿಲ್ಲಾ ನ್ಯಾಯಾಲಯದ ಕಲಾಪಗಳು ಆರಂಭ

ಬಳ್ಳಾರಿ,ಮೇ 31: ಉಚ್ಛನ್ಯಾಯಾಲಯದ ನಿರ್ದೇಶನದಂತೆ ಜಿಲ್ಲೆಯ ನ್ಯಾಯಾಲಯದಲ್ಲಿ ನಾಳೆ ಜೂನ್ 1ರಿಂದ ಕಲಾಪಗಳನ್ನು ಆರಂಭಿಸಲಾಗುತ್ತಿದ್ದು, ಮೊದಲರೆಡು ವಾರಗಳಲ್ಲಿ ಕೇವಲ ವಾದ-ವಿವಾದ ಮಂಡನೆಗೆ ಮಾತ್ರ ಅವಕಾಶವಿರುತ್ತದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕೃಷ್ಣರಾಜ್ ಬಿ.ಅಸೋಡೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತಿ ನ್ಯಾಯಾಲಯದಲ್ಲಿ ಕೇವಲ 20 ಜನ ಮಾತ್ರ ಹಾಜರಾರಿರಬಹುದಾಗಿದೆ(ನ್ಯಾಯಾಧೀಶರು,ಸಿಬ್ಬಂದಿ ಹಾಗೂ ವಕೀಲರು ಸೇರಿದಂತೆ ಒಟ್ಟು 20 ಜನರು). ಒಂದು ದಿನಕ್ಕೆ ಪೂರ್ವಾಹ್ನ 10 ಮತ್ತು ಅಪರಾಹ್ನ 10 ಪ್ರಕರಣಗಳಂತೆ 20 ಪ್ರಕರಣಗಳನ್ನು ನಡೆಸಬಹುದಾಗಿದೆ. ಪಕ್ಷಗಾರರು ಹಾಗೂ ವಕೀಲರ ಗುಮಾಸ್ತರಿಗೆ ನ್ಯಾಯಾಲಯ ಪ್ರವೇಶವನ್ನು ಪ್ರತಿಬಂಧಿಸಲಾಗಿದೆ.

ನ್ಯಾಯಾಲಯಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ವಕೀಲರು ಹಾಗೂ ಸಿಬ್ಬಂದಿಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಗೌರವಾನ್ವಿತ ಕರ್ನಾಟಕ ಉಚ್ಚ ನ್ಯಾಯಾಲಯವು ಕಾಲಕಾಲಕ್ಕೆ ನೀಡಿರುವ ಸಲಹೆಗಳು/ಕರ್ನಾಟಕ ಸರ್ಕಾರ ಪ್ರಧಾನ ಆರೋಗ್ಯ ಕಾರ್ಯದರ್ಶಿಗಳು ಹೊರಡಿಸಿರುವ ಎಸ್.ಓ.ಪಿ ಹಾಗೂ ಕೇಂದ್ರ ಸರ್ಕಾರ ನೀಡಿರುವ ಮಾರ್ಗದರ್ಶಿಯನ್ನು ಅನುಸರಿಸಿ ನ್ಯಾಯಾಲಯಗಳ ಕಲಾಪಗಳಲ್ಲಿ ಭಾಗವಹಿಸುವಂತೆ ತಿಳಿಸಿದ್ದಾರೆ.

Share

Leave a Comment