ನಾಲ್ವರು ಭಾರತೀಯರಿಗೆ ಕೊರೊನಾ ಸೋಂಕು

ನವದೆಹಲಿ, ಫೆ. ೨೩- ಕೊರೊನಾ ವೈರಸ್ ದಾಳಿಯಿಂದ ಚೀನಾ ಸೇರಿದಂತೆ ಹಲವು ದೇಶಗಳು ತತ್ತರಿಸಿವೆ. ಈ ನಡುವೆ ಜಪಾನ್‌ನ ಟೋಕಿಯೊ ಸಮೀಪದ ಸಮುದ್ರ ತೀರದಲ್ಲಿರುವ ಡೈಮೆಂಡ್ ಪ್ರಿನ್ಸೆಸ್ ಹಡಗಿನಲ್ಲಿ ಕೆಲಸ ಮಾಡುವ ನಾಲ್ವರು ಭಾರತೀಯರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ.
ಹಡಗಿನಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಹಾಗೂ ಪ್ರಯಾಣಿಕರನ್ನು ಕೊರೊನಾ ಸೋಂಕು ಪರೀಕ್ಷೆಗೊಳಪಡಿಸಲಾಗಿದ್ದು, ಇವರಲ್ಲಿ 12 ಮಂದಿ ನಾಲ್ವರು ಭಾರತೀಯರಿಗೆ ಕೋವಿಡ್-19 ವೈರಸ್ ಇರುವುದು ಪತ್ತೆಯಾಗಿದೆ. ಇದರೊಂದಿಗೆ ಈ ಹಡಗಿನಲ್ಲಿರುವ ಭಾರತೀಯ ಸಿಬ್ಬಂದಿಯ ಪೈಕಿ 12 ಮಂದಿ ಕೋವಿಡ್-19 ವೈರಸ್ ಇರುವುದು ಪತ್ತೆಯಾದಂತಾಗಿದೆ ಎಂದು ಭಾರತೀಯ ಧೂತವಾಸ ಕಚೇರಿ ತಿಳಿಸಿದೆ.
2,442 ಮಂದಿ ಬಲಿ
ಕರೊನಾ ವೈರಸ್ ಸೋಂಕು ದಕ್ಷಿಣ ಕೊರಿಯಾಗೂ ಕೊರೊನಾ ಸೋಂಕು ವ್ಯಾಪಿಸಿದ್ದು, ಇಂದು 173 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ಪತ್ತೆಯಾಗಿದ್ದು, ದಕ್ಷಿಣ ಕೊರಿಯಾದಲ್ಲಿ ಕೊರೊನಾ ಸೋಂಕಿನಿಂದ ಬಳಲುತ್ತಿರುವವರ ಸಂಖ್ಯೆ 556ಕ್ಕೆ ಏರಿಕೆಯಾಗಿದ್ದು, ಇದುವರೆಗೂ ನಾಲ್ಕು ಮಂದಿ ದಕ್ಷಿಣ ಕೊರಿಯಾದಲ್ಲಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.
ದಕ್ಷಿಣ ಕೊರಿಯಾ ಚೆಂಗೊಡೊ ನಗರದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಿದ್ದು, ಈ ನಗರವೊಂದರಲ್ಲೇ 100ಕ್ಕೂ ಹೆಚ್ಚು ಮಂದಿ ಕೊರೊನಾ ವೈರಸ್ ಸೋಂಕಿಗೆ ಒಳಗಾಗಿದ್ದಾರೆ ಎಂದು ವರದಿಗಳು ಹೇಳಿದೆ.
ಚೀನಾದಲ್ಲೂ ಏರಿಕೆ
ಚೀನಾದಲ್ಲಿ ಕೊರೊನಾ ವೈರಸ್ ಸೋಂಕು ದಿನೇ ದಿನೇ ಹೆಚ್ಚಾಗುತ್ತಿದ್ದು, ಇವತ್ತಿನವರೆಗೂ ಈ ಸೋಂಕಿಗೆ 2442 ಮಂದಿ ಬಲಿಯಾಗಿದ್ದಾರೆ. ಹುಬೈ ಪ್ರಾಂತ್ಯದಲ್ಲೇ ಸೋಂಕು ಹೆಚ್ಚಾಗಿ ವ್ಯಾಪಿಸಿದ್ದು, ಹುಬೈ ಪ್ರಾಂತ್ಯದ ರಾಜಧಾನಿ ವುಹಾನ್‌ನಲ್ಲಿ ವೈರಸ್ ಮೊದಲು ಕಾಣಿಸಿಕೊಂಡಿತ್ತು.
ಚೀನಾದಲ್ಲಿ ಹೊಸದಾಗಿ 648 ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ. ದಿನೇ ದಿನೇ ಸೋಂಕಿಗೆ ಒಳಗಾಗುತ್ತಿರುವವರ ಸಂಖ್ಯೆ ಆತಂಕಕ್ಕೆ ಕಾರಣವಾಗಿದೆ.
ಚೀನಾದಲ್ಲಿ 9 ತಿಂಗಳ ಗರ್ಭಿಣಿ ನರ್ಸ್‌ವೊಬ್ಬರು ಕೊರೊನಾ ಚಿಕಿತ್ಸೆಯಲ್ಲಿ ತೊಡಗಿರುವ ವೀಡಿಯೊವನ್ನು ಬಿಡುಗಡೆ ಮಾಡಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದ್ದು, ಈ ಮಹಿಳೆಯೊಬ್ಬರನ್ನೇ ಹೀರೊ ಮಾಡುವ ರೀತಿಯಲ್ಲಿ ವೀಡಿಯೊ ಬಿಡುಗಡೆ ಮಾಡಿರುವುದು ಸರಿಯಲ್ಲ. ಅನೇಕ ಗರ್ಭಿಣಿ ನರ್ಸ್‌ಗಳು ಚಿಕಿತ್ಸೆಯಲ್ಲಿ ತೊಡಗಿಕೊಂಡಿದ್ದಾರೆ. ಅವರ ಮೇಲೆ ಇದು ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಏನೇ ಇರಲಿ ಆಕೆ ತನ್ನ ಕರ್ತವ್ಯ ಮಾಡುತ್ತಿದ್ದಾಳೆ ಎಂಬುದನ್ನು ಮರೆಯಬಾರದು ಎಂದು ಚೀನಾದ ಜನತೆ ವೀಡಿಯೊ ಬಿಡುಗಡೆ ಮಾಡಿರುವುದಕ್ಕೆ ಕೆಂಡ ಕಾರಿದ್ದಾರೆ.
‌ಅಮೆರಿಕಾದಲ್ಲೂ ಕಟ್ಟೆಚ್ಚರ
ಕೊರೊನಾ ವೈರಸ್ ಸೋಂಕು ಅಮೆರಿಕಾಗೆ ಹರಡದಂತೆ ಅಮೆರಿಕ ಕಟ್ಟೆಚ್ಚರ ವಹಿಸಿದ್ದು, ಶ್ವೇತಭವನ ತುರ್ತು ನಿಧಿಯನ್ನು ಬಿಡುಗಡೆ ಮಾಡುವಂತೆ ಅಮೆರಿಕ ಕಾಂಗ್ರೆಸ್‌ನ್ನು ಕೇಳಲು ಸಿದ್ಧತೆ ನಡೆಸಿವೆ. ಅಮೆರಿಕಾದಲ್ಲಿ ಈ ಮಾರಣಾಂತಿಕ ಕೊರೊನಾ ವೈರಸ್ ಸೋಂಕು ಹರಡದಂತೆ ಕಟ್ಟೆಚ್ಚರ ವಹಿಸಲಾಗಿದೆ.
ಜಪಾನ್ ಕ್ಷಮಾಪಣೆ
ಈ ಹಡಗಿನಲ್ಲಿ ಕೊರೊನಾ ವೈರಸ್ ಸೋಂಕು ತಗುಲಿದ್ದ ಮಹಿಳೆಯೊಬ್ಬರನ್ನು ಹೊರ ಹೋಗಲು ಅನುಮತಿ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಪಾನ್‌ನ ಆರೋಗ್ಯ ಸಚಿವರು ಕ್ಷಮಾಪಣೆ ಕೋರಿದ್ದಾರೆ.
60 ವರ್ಷದ ಈ ಮಹಿಳೆ ಈ ಹಡಗಿನಲ್ಲಿ ಪ್ರಯಾಣಿಸುತ್ತಿದ್ದು, ಈಕೆಗೆ ಕೊರೊನಾ ವೈರಸ್ ಇರುವುದು ದೃಢಪಟ್ಟಿತ್ತು. ಆದರೂ ಹಡಗಿನಿಂದ ಹೊರ ಹೋಗಲು ಅವಕಾಶ ಮಾಡಿಕೊಟ್ಟಿದ್ದು ಟೀಕೆಗೊಳಗಾಗಿತ್ತು. ಈ ಹಿನ್ನೆಲೆಯಲ್ಲಿ ಜಪಾನ್ ಆರೋಗ್ಯ ಸಚಿವರು ಕ್ಷಮೆ ಕೋರಿದ್ದಾರೆ.
ಜಪಾನ್‌ನ ಹಡಗಿನಲ್ಲಿದ್ದ ಹಾಂಗ್‌ಕಾಂಗ್ ನಿವಾಸಿಗಳನ್ನು ಕರೆತರುವ 3ನೇ ವಿಮಾನ ಬಂದಿಳಿದಿದ್ದು, ಸುಮಾರು 200 ಮಂದಿ ಹಡಗಿನಲ್ಲಿದ್ದ ಹಾಂಗ್‌ಕಾಂಗ್ ಪ್ರಯಾಣಿಕರನ್ನು ಹಾಂಗ್‌ಕಾಂಗ್ ವಿಮಾನದ ಮೂಲಕ ತನ್ನ ದೇಶಕ್ಕೆ ವಾಪಸ್ ಕರೆತಂದಿದೆ. ಇವರೆಲ್ಲರನ್ನೂ 14 ದಿನಗಳ ಕಾಲ ತೀವ್ರ ನಿಗಾ ಘಟಕದಲ್ಲಿಟ್ಟು, ಅವರ ಆರೋಗ್ಯದ ಮೇಲೆ ನಿಗಾ ವಹಿಸಲಾಗುತ್ತಿದೆ.
ಇರಾನ್‌ನಲ್ಲಿ ವಿವಿಗಳ ಬಂದ್
ಇರಾನ್‌ನಲ್ಲೂ ಕೊರೊನಾ ವೈರಸ್ ಕಾಣಿಸಿಕೊಂಡು ಇಬ್ಬರು ಬಲಿಯಾದ ಹಿನ್ನೆಲೆಯಲ್ಲಿ ಇರಾನ್‌ನ 10 ಪ್ರಾಂತ್ಯಗಳ ಎಲ್ಲ ವಿಶ್ವವಿದ್ಯಾಲಯಗಳನ್ನು ಮುಚ್ಚಲಾಗಿದೆ.
ತೆಹರಾನ್, ಅಲ್‌ಬೋರ್ಜ್, ಕ್ವಾಮ್, ಹೆಮೆಡಾನ್, ಕ್ವಜ್ವೀನ್, ಇಸ್‌ಫಹಾನ್, ಗಿಲ್ಲನ್, ಮಜಾನ್‌ದರಾನ್, ಗ್ಲೋಸ್ಟಾನ್ ಮತ್ತು ಮರ್ಕಜಿ ಪ್ರಾಂತ್ಯಗಳ ವಿಶ್ವವಿದ್ಯಾಲಯಗಳನ್ನು ಮುಚ್ಚಲಾಗಿದೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ.
ವಿಶ್ವಸಂಸ್ಥೆ ಕಳವಳ
ವಿಶ್ವಸಂಸ್ಥೆ ಕೊರೊನಾ ವೈರಸ್ ಸೋಂಕಿಗೆ ಒಳಗಾಗಿರುವ ಸಂಖ್ಯೆ ಜಾಗತಿಕವಾಗಿ ಏರಿಕೆಯಾಗುತ್ತಿರುವುದಕ್ಕೆ ತನ್ನ ಕಳವಳ ವ್ಯಕ್ತಪಡಿಸಿದೆ.
ಚೀನಾಗೆ ಇದುವರೆಗೂ ಹೋಗದ ಹಾಗೂ ಪ್ರಯಾಣ ಮಾಡದವರಲ್ಲೂ ಸೋಂಕುಗಳು ಪತ್ತೆಯಾಗುತ್ತಿರುವು ವಿಶ್ವಸಂಸ್ಥೆಯ ಕಳವಳಕ್ಕೆ ಕಾರಣವಾಗಿದೆ. ವಿಶ್ವಸಂಸ್ಥೆಯ ವಿಶ್ವ ಆರೋಗ್ಯ ಸಂಘಟನೆ ಕೊರೊನಾ ವೈರಸ್ ನಿಯಂತ್ರಣಕ್ಕೆ ಎಲ್ಲ ರೀತಿಯ ಕ್ರಮಗಳನ್ನು ಕೈಗೊಂಡಿದೆ. ಆದರೂ ಸೋಂಕು ನಿಯಂತ್ರಣಕ್ಕೆ ಬಾರದಿರುವುದು ಆತಂಕವುಂಟು ಮಾಡಿದೆ.

Leave a Comment