ನಾಲ್ವರು ದರೋಡೆಕೋರರ ಬಂಧನ

ಮಧುಗಿರಿ, ಜು. ೧೨- ದ್ವಿಚಕ್ರ ವಾಹನ ಸವಾರರು ಮತ್ತು ದಾರಿ ಹೋಕರಿಗೆ ಮಾರಕಾಸ್ತ್ರಗಳನ್ನು ತೋರಿಸಿ ಬೆದರಿಸಿ ದರೋಡೆ ಮಾಡಿ ಪರಾರಿಯಾಗುತ್ತಿದ್ದ ನಾಲ್ಕು ಮಂದಿ ಆರೋಪಿಗಳನ್ನು ತಾಲ್ಲೂಕಿನ ಕೊಡಿಗೇನಹಳ್ಳಿ ಪೊಲೀಸರು ಪತ್ತೆಹಚ್ಚಿ ಬಂಧಿಸಿದ್ದಾರೆ.

ನೆರೆಯ ಸೀಮಾಂಧ್ರದ ಹಿಂದೂಪುರ ಮಂಡಲ್‌ನ ಚವಲೂರು ಗ್ರಾಮದ ಕೃಷ್ಣಪ್ಪಗಾರಿ ಮಹೇಶ್, ಸೊಲಗಿತ್ತಿ ಜಯಶಂಕರ, ನಂಜುಂಡಪ್ಪಗಾರಿ, ಸಿಂಗನಪಲ್ಲಿಯ ರಾಮಾಂಜಿನಪ್ಪ ಎಂಬುವರೆ ಬಂಧಿತ ಆರೋಪಿಗಳು.

ಇವರು ಕಡಗತ್ತೂರು ಗ್ರಾಮದ ರತ್ನಮ್ಮ, ಪತಿ ಸುರೇಶ್ ಗ್ರಾಮಕ್ಕೆ ದ್ವಿಚಕ್ರ ವಾಹನದಲ್ಲಿ ಬರುತ್ತಿರುವಾಗ ಅಡ್ಡಗಟ್ಟಿ ಮಾಂಗಲ್ಯ ಸರ, ಕೀಪ್ಯಾಡ್ ಮೊಬೈಲ್, 850 ರೂ. ದೋಚಿದ್ದರು. ಮತ್ತೆ ಇದೇ ತಂಡದ ಸದಸ್ಯರು ರಾತ್ರಿ 11 ಗಂಟೆಯ ಸಮಯದಲ್ಲಿ ಅಣ್ಣೇನಹಳ್ಳಿ-ಪರ್ತಿಹಳ್ಳಿ ಬಳಿಯಲ್ಲಿ ಜಲಾಲ್ ಪಾಷ ಅವರನ್ನು ಕಾ‌‌‌ರಿನಲ್ಲಿ ಬಂದು ಅಡ್ಡಗಟ್ಟಿ ಅವರ ಬಳಿ ಇದ್ದ 42,000 ರೂ.ಗಳನ್ನು ದೋಚಿದ್ದ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೊಡಿಗೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.

ಜಿಲ್ಲಾ ರಕ್ಷಣಾಧಿಕಾರಿ ಡಾ. ದಿವ್ಯಾಗೋಪಿನಾಥ್, ಎ‌ಎಸ್ಪಿ ಶೋಭಾರಾಣಿ ಅವರ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಕಲ್ಲೇಶಪ್ಪ, ಸಿಪಿಐ ಎಂ. ಅಂಬರೀಶ್ ನೇತೃತ್ವದಲ್ಲಿ ಕೊಡಿಗೇನಹಳ್ಳಿ ಪಿಎಸ್ಐ ಮೋಹನ್‌ಕುಮಾರ್ ಮತ್ತು ಸಿಬ್ಬಂದಿ ಪ್ರಕರಣದ ತನಿಖೆ ಕೈಗೊಂಡು ಆರೋಪಿಗಳ ಬಳಿಯಿಂದ 20 ಗ್ರಾಂ ಚಿನ್ನದ ಮಾಂಗಲ್ಯ ಸರ, ಕೃತ್ಯಕ್ಕೆ ಬಳಸುತ್ತಿದ್ದ ಎರಡು ಮಾರಕಾಸ್ತ್ರಗಳು ಹಾಗೂ ಕಾರನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿಗಳನ್ನು  ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸದರಿ ದರೋಡೆಕೋರರನ್ನು ಪತ್ತೆಹಚ್ಚಿ ಮಾಲು ಸಮೇತ ಬಂಧಿಸುವಲ್ಲಿ ಶ್ರಮಿಸಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕಾರ್ಯವೈಖರಿ ಬಗ್ಗೆ ಜಿಲ್ಲಾ ರಕ್ಷಣಾಧಿಕಾರಿಗು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Leave a Comment