ನಾಲ್ಕೈದು ವರ್ಷ ಇದ್ದು ಹೋಗಲು ಬಂದಿಲ್ಲ…

*ಚಿಕ್ಕನೆಟಕುಂಟೆ ಜಿ.ರಮೇಶ್

ಪ್ರತಿಭೆ ಮತ್ತು ಗ್ಲಾಮರ್ ನಟಿಯರ ಬಹುದೊಡ್ಡ ಆಸ್ತಿ. ಕೆಲವರು ತಮ್ಮ ಪ್ರತಿಭೆ ಮೂಲಕ ಜನಮನ ಸೂರೆಗೊಂಡರೆ ಮತ್ತೆ ಕೆಲವರು ಗ್ಲಾಮರ್‌ನಿಂದ ಗಮನ ಸೆಳೆಯುತ್ತಾರೆ. ಪ್ರತಿಭೆ ಮತ್ತು ಗ್ಲಾಮರ್ ಒಟ್ಟಿಗೆ ಇರುವುದು ಕೆಲವೇ ಕೆಲವು ನಟಿಯರಿಗೆ ಮಾತ್ರ. ಅಂತಹ ನಟಿಯರಲ್ಲಿ ಮೇಘನಾ ಗಾವಂಕರ್ ಕೂಡ ಒಬ್ಬರು.

“ಚಾರ್‌ಮಿನಾರ್ “ಚಿತ್ರ ಯಶಸ್ಸು ತಂದುಕೊಟ್ಟರೂ ಪ್ರತಿಭೆಗೆ ತಕ್ಕ ಪಾತ್ರಗಳು ಸಿಗುತ್ತಿಲ್ಲ. ಹಾಗಂತ ಸದಾ ಸುದ್ದಿಯಲ್ಲಿರಬೇಕೆಂದು ಸಿಕ್ಕ ಅವಕಾಶಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಮೂಲತಃ ಡ್ಯಾನ್ಸರ್, ಸಿಂಗರ್, ಬರಹಗಾರ್ತಿ. ಜೊತೆಗೆ ವಿಶ್ವದಾದ್ಯಂತ ಪ್ರವಾಸ ಮಾಡುವ ಹವ್ಯಾಸ. ಚಿತ್ರರಂಗಕ್ಕೆ ನಿರ್ದೇಶಕಿಯಾಗಲು ನಿರ್ದೇಶನದ ಕೋರ್ಸ್ ಮಾಡಿ ಪಟ್ಟು ಮೈಗೂಡಿಸಿಕೊಂಡವರು.

ನೋಡಲು ಸುಂದರವಾಗಿದ್ದಾರೆ ಎನ್ನುವ ಕಾರಣಕ್ಕೆ ಹಲವರ ಒತ್ತಾಯಕ್ಕೆ ಮಣಿದು ನಾಯಕಿಯಾಗಿದ್ದಾರೆ. ಸದ್ಯ ನಟನೆಯಲ್ಲಿಯೇ ಸಂಪೂರ್ಣ ತೊಡಗಿಸಿಕೊಂಡಿದ್ದಾರೆ. ಒಂದಲ್ಲ ಒಂದು ದಿನ ಪ್ರತಿಭೆಗೆ ತಕ್ಕ ಪಾತ್ರಗಳು ಸಿಗುತ್ತವೆ. ನನ್ನಲ್ಲಿರುವ ಕಲೆ ಪ್ರದರ್ಶಿಸುವ ಸಮಯ ಬರಲಿದೆ. ಅದಕ್ಕಾಗಿ ಎದುರು ನೋಡುತ್ತಿದ್ದೇನೆ ಎನ್ನುವ ವಿಶ್ವಾಸ ಮೇಘನಾ ಅವರದು.

ಮೊನ್ನೆ ಮಾತಿಗೆ ಸಿಕ್ಕಿದ್ದ ಮೇಘನಾ, ತಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸುವ ಅವಕಾಶ ಸಿಕ್ಕಿಲ್ಲ. ಹಾಗಂತ ಚಿತ್ರರಂಗ ಬಿಟ್ಟು ಹೋಗುವುದಿಲ್ಲ. ನಾಲ್ಕೈದು ವರ್ಷ ಇದ್ದು ಹೋಗಲು ಇಲ್ಲಿಗೆ ಬಂದಿಲ್ಲ. ಇಡೀ ಜೀವನ ಚಿತ್ರರಂಗದಲ್ಲಿಯೇ ನೆಲೆ ನಿಂತುಕೊಳ್ಳುವ ಉದ್ದೇಶವಿದೆ.

ಗ್ಯಾಪ್ ಆದರೂ ಪರವಾಗಿಲ್ಲ. ಒಳ್ಳೆಯ ಪಾತ್ರಗಳಲ್ಲಿ ನಟಿಸುತ್ತೇನೆ. ಯಾವುದೇ ಪಾತ್ರ ಅಥವ ಕೆಲಸ ಮಾಡಲಿ ಚೆನ್ನಾಗಿ ಮಾಡಬೇಕೆನ್ನುವುದು ನನ್ನಾಸೆ. ಅದನ್ನು ಹಿಂದಿನಿಂದಲೂ ಮಾಡಿಕೊಂಡು ಬಂದಿದ್ದೇನೆ.

’ಕಾಳಿದಾಸ ಕನ್ನಡ ಮೇಷ್ಟ್ರು’ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಬೆನ್ನಲ್ಲೇ ಸಂತೋಷ್ ಎನ್ನುವ ಹೊಸ ನಿರ್ದೇಶಕರೊಂದಿಗೆ ನಟಿಸಲು ಒಪ್ಪಿಗೆ ನೀಡಿದ್ದು ಅದರ ಬಗ್ಗೆ ಸದ್ಯಲ್ಲಿಯೇ ಇನ್ನಷ್ಟು ಮಾಹಿತಿ ಸಿಗಲಿದೆ ಎಂದರು.

ಬಾಕ್ಸ್

ಸಿನಿಮಾದಲ್ಲಿ ಪಿಎಚ್‌ಡಿ

ಇಂಗ್ಲೀಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಮೇಘನಾ ಗಾವಂಕರ್, ಸಿನಿಮಾಗೆ ಸಂಬಂಧಿಸಿದ ವಿಷಯದ ಕುರಿತು ಮುಂಬೈ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ಮಾಡುತ್ತಿದ್ದಾರೆ.
ಕಿರುಚಿತ್ರ ಮತ್ತು ಸಿನಿಮಾ ನಿರ್ದೇಶನ ಮಾಡುವ ಆಸೆ ಇದೆ. ಒಳ್ಳೆಯ ಅವಕಾಶಕ್ಕಾಗಿ ಕಾಯುತ್ತಿದ್ದೇನೆ. ಸಿನಿಮಾದ ನಟನೆಯ ಜೊತೆಗೆ ಪಿಎಚ್‌ಡಿ ಮಾಡುವ ಕೆಲಸ ಮುಂದುವರಿದೆ ಎನ್ನುತ್ತಾರೆ ಮೇಘನಾ.

ಬಾಕ್ಸ್೧

೨೦೨೦ಕ್ಕೆ ಮದುವೆ

ಮನೆಯಲ್ಲಿ ಮದುವೆ ಮಾಡಿಕೊಳ್ಳುವಂತೆ ಒತ್ತಡವಿದೆ. ೨೦೨೦ಕ್ಕೆ ಮದುವೆ ಆಗಬೇಕು ಅಂದುಕೊಂಡಿದ್ದೇನೆ. ಆದರೆ ಅದು ಈಡೇರುವಂತೆ ಕಾಣುತ್ತಿಲ್ಲ. ಹುಡುಗ ಸಿಗಬೇಕು. ಸಿನಿಮಾ ಅಥವಾ ಹೊರಗಿನವರು ಆಗಿದ್ದರು ಪರವಾಗಿಲ್ಲ.ಒಳ್ಳೆಯ ಹುಡುಗನಾಗಿರಬೇಕು.
ಮದುವೆಯಾದ ಮೇಲೆ ಮಗಳು ಏನು ಮಾಡ್ತಾಳೆ ಎನ್ನುವುದು ಅಪ್ಪನಿಗೆ ಗೊತ್ತಿದೆ. ಹಾಗಾಗಿ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದಾರೆ. ನನ್ನೆಲ್ಲಾ ಕನಸುಗಳನ್ನು ಮದುವೆಯಾದ ನಂತರವೂ ಪೂರ್ಣಗೊಳಿಸಿಕೊಳ್ಳುತ್ತೇನೆ.

ಬಾಕ್ಸ್-೨

ಕಥೆಗೆ ಆದ್ಯತೆ

ಬಾಲಿವುಡ್‌ನಲ್ಲಿ ವಿದ್ಯಾಬಾಲನ್, ಟಬು ಅವರು ಮಾಡುವ ಪಾತ್ರಗಳು ಇಷ್ಟ. ಚಿತ್ರ ಒಪ್ಪಿಕೊಳ್ಳುವಾಗ ದುಡ್ಡು ಮುಖ್ಯ ಆದರೆ ಕಥೆಗೆ ಮೊದಲ ಆದ್ಯತೆ. ಕೆಲವೊಮ್ಮೆ ದುಡ್ಡು,ಕಥೆ ವಿಷಯದಲ್ಲಿ ಅವಕಾಶ ತಪ್ಪಿದೆ. ಮುಂದೆ ಹಾಗೆ ಆಗದಂತೆ ಎಚ್ಚರ ವಹಿಸುತ್ತೇನೆ.
ಹೈ-ಫೈ ಜೀವನ ನನ್ನದು. ನನ್ನ ಅಗತ್ಯಗಳಿಗಾಗಿ ನಾನೇ ದುಡಿಯುತ್ತಿದ್ದೇನೆ. ಅದು ಸಾಕಾಗುತ್ತಿಲ್ಲ. ಮನೆಯವರಿಂದಲೂ ಕೇಳುವುದಿಲ್ಲ ಎನ್ನುತ್ತಾರೆ ಮೇಘನಾ ಗಾವಂಕರ್.

Leave a Comment