ನಾಲೆ ಒಡೆದು ಪರಿಣಾಮ ಯಥೇಚ್ಛ ನೀರು ನುಗ್ಗಿ ಬೆಳೆ ನಷ್ಟ

ಹನೂರು.ಮಾ.26. ನೀರಾವರಿ ಇಲಾಖೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಗುಂಡಾಲ್ ಜಲಾಶಯದಿಂದ ರೈತರ ಜಮೀನುಗಳಿಗೆ ಬಿಡಲಾಗುತ್ತಿರುವ ನೀರು ನಾಲೆ ಒಡೆದು ಹೋಗಿರುವ ಪರಿಣಾಮ ವ್ಯರ್ಥವಾಗಿ ಪೋಲಾಗುತ್ತಿರುವುದಲ್ಲದೇ ರೈತರೊಬ್ಬರ ಜಮೀನಿಗೆ ಯಥೇಚ್ಛ ನೀರು ನುಗ್ಗಿ ಬೆಳೆ ನಷ್ಟವಾಗಿರುವ ಘಟನೆ ಗುಂಡಾಲ್ ಜಲಾಶಯದ ಬಲದಂಡೆ ಜಮೀನಿನಲ್ಲಿ ನಡೆದಿದೆ.
ಒಡೆದ ನಾಲೆಯ ದುರಸ್ಥಿ ಕಾರ್ಯ ಮಾಡದೇ ನೀರು ಹರಿಸಿರುವ ಹಿನ್ನಲೆಯಲ್ಲಿ ನೀರು ರೈತರ ಜಮೀನುಗಳಿಗೆ ಹೋಗುವ ಬದಲು ನಾಲೆ ಒಡೆದ ಸ್ಥಳಕ್ಕೆ ಯಥೇಚ್ಛ ನೀರು ನುಗ್ಗಿದ ಪರಿಣಾಮ ಗುಂಡಾಲ್ ಬಲದಂಡೆಯ ಎಮ್ಮೆಗುಂಡಿ ಬಳಿಯ ಎಜುಕಯ್ಯ ಎಂಬುವರಿಗೆ ಸೇರಿದ ಸರ್ವೆ ನಂಬರ್ 323 ರ ಜಮೀನಿಲ್ಲಿ ಗುತ್ತಿಗೆ ಆಧಾರದಲ್ಲಿ ಬೇಸಾಯ ಮಾಡುತ್ತಿರುವ ಕಾಮಗೆರೆ ಹಾಲು ಉತ್ವಾದಕರ ಸಹಕಾರ ಸಂಘದ ಮಾಜಿ ಉಪಾಧ್ಯಕ್ಷ ಸುರೇಶ್‍ರವರು ಬೆಳೆಯಲಾಗಿದ್ದ ಕಟಾವು ಹಂತದ ಮುಸುಕಿನ ಜೋಳ ಹಾಗೂ ಇತ್ತಿಚಿಗೆ ಹಾಕಿರುವ ಮುಸುಕಿನ ಜೋಳದ ಪೈರುಗಳಿಗೆ ನೀರು ನುಗ್ಗಿದ ಪರಿಣಾಮ ಬೆಳೆ ಕೊಳೆತು ಹೋಗುವ ಸ್ಥಿತಿ ನಿರ್ಮಾಣವಾಗಿದೆ.
ಕೆರೆಯಂತಾದ ಜಮೀನು: ಗುತ್ತಿಗೆ ಆಧಾರದ ಮೇಲೆ ವ್ಯವಸಾಯ ಮಾಡುತ್ತಿರುವ ರೈತ ಸುರೇಶ್ ಬೆಳೆದಿದ್ದ ಜೋಳದ ಬೆಳೆಗೆ ಭಾರಿ ಪ್ರಮಾಣದ ನೀರು ನುಗ್ಗಿರುವುದರಿಂದ ಮುಸುಕಿನ ಜೋಳದ ಜಮೀನು ಕೆರೆಯಂತಾಗಿ ಮಾರ್ಪಟ್ಟಿದೆ. ಇದರ ಜೊತೆಗೆ ಬೆಳೆ ಕೊಳೆಯುವ ಸ್ಥಿತಿ ನಿರ್ಮಾಣವಾಗಿ ರೈತ ಕಂಗಾಲು ಆಗುವಂತೆ ಮಾಡಿದೆ.
ಹೊಡೆದ ನಾಲೆ ದುರಸ್ಥಿ ಬಗ್ಗೆ ಕ್ರಮವಹಿಸದ ಅಧಿಕಾರಿಗಳು: ಗುಂಡಾಲ್ ಜಲಾಶಯದಿಂದ ನೀರನ್ನು ಬಿಡುವ ಮೊದಲು ನಾಲೆಗಳ ದುರಸ್ಥಿ ಕಾರ್ಯವನ್ನು ಮಾಡದ ಹಿನ್ನಲೆಯಲ್ಲಿ ಇಂತಹದೊಂದು ಯಡವಟ್ಟು ಆಗಿದ್ದು, ಈ ಬಗ್ಗೆ ರೈತರು ಹಲವಾರು ಬಾರಿ ಸಂಬಂಧಪಟ್ಟ ಇಲಾಖೆಯವರಿಗೆ ಮನವರಿಕೆ ಮಾಡಿಕೊಟ್ಟರು. ಅಧಿಕಾರಿಗಳ ಬೇಜವಬ್ದಾರಿತನ ಹಾಗೂ ನಿರ್ಲಕ್ಷ್ಯದಿಂದ ಇಂದು ರೈತನ ಜಮೀನಿಗೆ ನೀರು ನುಗ್ಗಿ ಬೆಳೆ ನಷ್ಟವಾಗುವುದರ ಜೊತೆಗೆ ಅಮೂಲ್ಯ ಜೀವಜಲ ವ್ಯರ್ಥವಾಗುತ್ತಿರುವುದಕ್ಕೆ ಕಾರಣವಾಗಿದೆ.
ಈ ಭಾಗದ ನಾಲೆಗಳ ಊಳು ಮತ್ತು ದುರಸ್ಥಿ ಕಾರ್ಯಕ್ಕೆ ಒತ್ತಾಯ: ನೀರಾವರಿ ಇಲಾಖೆ ಅಧಿಕಾರಿಗಳು ನೀರನ್ನು ಬಿಡುವ ಮುನ್ನ ಈ ಭಾಗದ ನಾಲೆಗಳಲ್ಲಿ ತುಂಬಿರುವ ಊಳು ಗಿಡಗಂಟಿ ಸೇರಿದಂತೆ ಹೊಡೆದು ಹೋಗಿರುವ ಸ್ಥಳದಲ್ಲಿ ದುರಸ್ಥಿ ಕಾರ್ಯವನ್ನು ಮಾಡಿದ ನಂತರ ನೀರನ್ನು ಬಿಡಬೇಕು. ಇಲ್ಲದಿದ್ದರೆ ಜಲಾಶಯದ ನೀರು ಪೋಲಾಗುವುವದಲ್ಲದೇ ನಾಲೆ ಹೊಡೆದ ಆಸುಪಾಸಿನ ರೈತರ ಜಮೀನುಗಳಿಗೆ ಒಮ್ಮೆಲೆ ನೀರು ನುಗ್ಗುವುದರಿಂದ ಬೆಳೆ ಹಾನಿಯಾಗುತ್ತದೆ. ಈ ಬಗ್ಗೆ ಸಂಬಂಧಪಟ್ಟವರು ಕ್ರಮವಹಿಸದೇ ಇದ್ದಲ್ಲಿ ಈ ಭಾಗದ ರೈತರು ಪ್ರತಿಭಟನೆಯನ್ನು ಕೈಗೊಳ್ಳಬೇಕಾಗುತ್ತದೆ ಎಂದು ಒತ್ತಾಯಿಸಿದ್ದಾರೆ.
ಮಾಜಿ ಶಾಸಕಿ ಪರಿಮಳ ನಾಗಪ್ಪ ಸ್ಥಳಕ್ಕೆ ಬೇಟಿ ನೀಡಿ ಮಾತನಾಡಿದ ಅವರು ಜಲಾಶಯದಿಂದ ಬಿಡಲಾಗಿರುವ ನೀರು ವ್ಯರ್ಥವಾಗಿರುವುದಲ್ಲದೇ ರೈತರೊಬ್ಬರ ಜಮೀನಿನಲ್ಲಿ ಕಷ್ಟಪಟ್ಟು ದುಡಿದು ಬೆಳೆಯಲಾಗಿದ್ದ ಕಟಾವು ಹಂತದ ಮುಸುಕಿನ ಜೋಳ ಹಾಗೂ ಇದೇ ತಾನೆ ಬೆಳೆಯಲಾಗಿರುವ ಮುಸುಕಿನ ಜೋಳದ ಬೆಳೆ ನೀರಿನಿಂದ ಆವೃತವಾಗಿದೆ. ಅಷ್ಟಕ್ಕೂ ಈ ನೀರಾವರಿ ಅಧಿಕಾರಿಗಳಿಗೆ ಮೊದಲು ನಾಲೆ ದುರಸ್ಥಿ ಕಾರ್ಯ ಮಾಡಿ ನಂತರ ನೀರು ಬಿಡಬೇಕೆಂಬ ಸಾಮಾನ್ಯ ಜ್ಞಾನವು ಇಲ್ಲದೇ ರೈತರ ಬೆಳೆ ನಷ್ಟ ಆಗುವಂತೆ ಮಾಡಿದ್ದಾರೆ. ನಾನು ಕೂಡ ಸ್ಥಳಕ್ಕೆ ಬೇಟಿ ನೀಡಿ ಅಲ್ಲಿನ ಸ್ಥಿತಿಗತಿಗಳನ್ನು ನೋಡಿದ್ದೇನೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ರೈತನಿಗೆ ಪರಿಹಾರ ಒದಗಿಸಬೇಕು.
ಈ ಬಗ್ಗೆ ಸಂಕಷ್ಟಕ್ಕೆ ಒಳಗಾಗಿರುವ ರೈತ ಸುರೇಶ್ ಮಾತನಾಡಿ, ನೀರಾವರಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ನಮ್ಮ ಜಮೀನಿನಲ್ಲಿ ಬೆಳೆಯಲಾಗಿದ್ದ ಮುಸುಕಿನ ಜೋಳದ ಬೆಳೆ ನಷ್ಟ ಉಂಟಾಗಿದೆ. ನಾಲೆ ದುರಸ್ಥಿ ಬಗ್ಗೆ ಸಾಕಷ್ಟು ಬಾರಿ ಅಧಿಕಾರಿಗಳಿಗೆ ತಿಳಿಸಲಾಗಿದ್ದರೂ ಕ್ರಮ ಜರುಗಿಸದ ಪರಿಣಾಮ ಈ ಪರಿಸ್ಥಿತಿ ಬಂದೊದಗಿದೆ. ಕೂಡಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹಾನಿಗೊಳಗಾಗಿರುವ ಜಮೀನಿಗೆ ಬೇಟಿ ನೀಡಿ ಪರಿಹಾರವನ್ನು ಒದಗಿಸಿಕೊಡಬೇಕು.

Leave a Comment