ನಾಲೆಯಲ್ಲಿ ನೀರಿನ ಪ್ರಮಾಣ ಹೆಚ್ಚಿಸಲು ಒತ್ತಾಯ

ಟಿಎಲ್‌ಬಿಸಿ ಕೊನೆ ಭಾಗದ ರೈತರ ಮಹತ್ವ ಸಭೆ
ರಾಯಚೂರು.ಜ.22- ಮಾನ್ವಿ ತಾಲೂಕಿನ ಟಿಎಲ್‌ಬಿಸಿ ಕೊನೆ ಭಾಗದ ರೈತರಿಗೆ ನಾಲೆಯಲ್ಲಿ ನೀರಿನ ಪ್ರಮಾಣ ಹೆಚ್ಚಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ವಿಧಾನ ಪರಿಷತ್ ಸದಸ್ಯ ಎನ್‌.ಎಸ್.ಬೋಸರಾಜ ಒತ್ತಾಯಿಸಿದರು.
ಇಂದು ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಟಿಎಲ್‌ಬಿಸಿ ಕೊನೆ ಭಾಗದ ರೈತರ ಮಹತ್ವದ ಸಭೆಯಲ್ಲಿ ಭಾಗವಹಿಸಿ ಪ್ರಸ್ತುತ 3 ಸಾವಿರ ಕ್ಯೊಸೆಕ್ಸ್ ನೀರು ಹರಿ ಬಿಡಲಾಗುತ್ತಿದ್ದು, ಮಾನ್ವಿ ತಾಲೂಕಿನ ಕೊನೆ ಭಾಗದ ರೈತರಿಗೆ ಹೆಚ್ಚುವರಿಯಾಗಿ 1 ಸಾವಿರ ಕ್ಯೊಸೆಕ್ಸ್ ನೀರು ಹೆಚ್ಚಳ ಮಾಡಬೇಕಾಗಿದೆ. ಟಿಎಲ್‌ಬಿಸಿ ಕೊನೆ ಭಾಗದ ರೈತರು ಹೆಚ್ಚಾಗಿ ಮೆಣಸಿನಕಾಯಿ, ಜೋಳ ಮತ್ತು ಹತ್ತಿ ಹತ್ತಿ ಸೇರಿದಂತೆ ಇನ್ನಿತರ ಬೆಳೆಗಳನ್ನು ಬೆಳೆದಿದ್ದಾರೆಂದು ತಿಳಿಸಿದ್ದಾರೆ.
ಒಂದುವೇಳೆ ರೈತರ ನಾಟಿ ಮಾಡಿದ ಬೆಳೆಗಳಿಗೆ ಸಮರ್ಪಕವಾಗಿ ನೀರು ಪೂರೈಸದಿದ್ದಲ್ಲಿ ಕೋಟ್ಯಾಂತರ ರೂ. ಹಣ ನಷ್ಟವಾಗಲಿದೆ. ಕೂಡಲೇ ರಾಜ್ಯ ಸರ್ಕಾರ ಹಾಗೂ ನೀರಾವರಿ ಇಲಾಖೆಯ ಅಧಿಕಾರಿಗಳ ಜೊತೆ ಚರ್ಚಿಸಿ ನೀರಿನ ಪ್ರಮಾಣ ಹೆಚ್ಚಿಸಲು ಅಗತ್ಯವಾದ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ ಮಾತನಾಡಿ ಈಗಾಗಲೇ ಜಿಲ್ಲಾಡಳಿತವು ಅಕ್ರಮದ ನೀರು ತಡೆಯುವಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಸಿಂಧನೂರು ತಾಲೂಕಿನಲ್ಲಿ 3 ಡಿಎಆರ್ ವ್ಯಾನ್‌ಗಳನ್ನು ನಿಯೋಜಿಸಲಾಗಿದೆ.ಆನಾದಿಕೃತ ಪೈಪ್‌ಲೈನ್ ಅಳವಡಿಸಿಕೊಂಡವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕೆಂದು ಜಿಲ್ಲಾ ಪೊಲೀಸ್ ಇಲಾಖೆ ಸೂಚನೆ ನೀಡಲಾಗಿದೆ. ಮೇಲ್ಭಾಗದಲ್ಲಿರುವ ರೈತರು ಹೆಚ್ಚಾಗಿ ಭತ್ತ ನಾಟಿ ಮಾಡಿದ್ದರಿಂದ ಕೊನೆ ಭಾಗದ ರೈತರಿಗೆ ನೀರು ಪೂರೈಸಲು ಕಷ್ಟಸಾಧ್ಯವಾಗುತ್ತದೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಡಿಸಿ ದುರ್ಗೇಶ, ಮಾಜಿ ಶಾಸಕ ಹಂಪಯ್ಯ ಸಾಹುಕಾರ, ಹಸಿರು ಸೇನೆಯ ರೈತ ಸಂಘದ ರಾಜ್ಯಾಧ್ಯಕ್ಷ ಚಾಮರಾಸ ಮಾಲಿ ಪಾಟೀಲ್, ರಾಘವೇಂದ್ರ ಕುಷ್ಟಗಿ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

Leave a Comment